ಹುಳಿಯಾರು
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಪ್ರತಿಗಾಮಿ ಪರಿಣಾಮ ಬೀರಲಿದೆ.ಕೃಷಿ ಉತ್ಪನ್ನಗಳು ಕುಂಠಿತಗೊಂಡು ಆಹಾರ ಸ್ವಾಲಂಬನೆಗೆ ಹೊಡೆತ ಬೀಳಲಿದೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕ್ ರೈತ ಸಂಘದ ಅಧ್ಯಕ್ಷ ತಿಮ್ಮನಹಳ್ಳಿ ಲೋಕೇಶ್ ತಿಳಿಸಿದರು.
ಹುಳಿಯಾರಿನಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿಯಲ್ಲಿ ಲಾಭವಿಲ್ಲ ಎಂದು ಕೃಷಿ ಭೂಮಿ ಮಾರಿಕೊಳ್ಳುತ್ತಿರುವ ರೈತರಿಗೆ ಕಾನೂನಿನ ಅಡೆತಡೆಗಳನ್ನು ತೆಗೆದು ಹಾಕಿರುವುದರಿಂದ ಇನ್ನೂ ಮುಂದೆ ದುಡ್ಡಿರುವ ಕಾರ್ಪೋರೇಟ್ ಕಂಪನಿಗಳು, ಮಲ್ಟಿ ನ್ಯಾಷನಲ್ ಕಂಪೆನಿಗಳು ಇವರ ಜಮೀನು ಕೊಳ್ಳಲು ಅನುವು ಮಾಡಿದಂತಾಗುತ್ತದೆ. ಇವರ ಆಮೀಷಕ್ಕೆ ಬಲಿಯಾಗುವ ರೈತರು ತಮ್ಮಲ್ಲಿ ಉಳಿದಿರುವ ತುಂಡು ಭೂಮಿಯನ್ನು ಮಾರಿಕೊಂಡು ನಿರ್ಗತಿಕರಾಗಲಿದ್ದಾರೆ ಎಂದರು.
ತುಮಕೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಿವರತ್ನಮ್ಮ ಮಾತನಾಡಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಶೇ 90 ರಷ್ಟು ರೈತರ ವಿರೋಧವಿದ್ದರೂ ಸಹ ಲೆಖ್ಖಿಸದೆ ರೈತ ಸಂಘಗಳ ಪ್ರತಿಭಟನೆ ನಡುವೆಯೇ ಕರ್ನಾಟಕ ವಿಧಾನಸಭೆಯಲ್ಲಿ ಭೂ ಸುಧಾರಣಾ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿದೆ. ಯಾವ ಉದ್ದೇಶಕ್ಕಾಗಿ ಭೂ ಸುಧಾರಣೆಗಳ ಕಾಯ್ದೆಯನ್ನು ದೇವರಾಜ ಅರಸು ಅವರು ತಂದಿದ್ದರೋ ಆ ಮೂಲ ಆಶಯಕ್ಕೆ ಇದು ವಿರುದ್ಧವಾಗಿದ್ದು ಇದು ರೈತರ ಮರಣ ಶಾಸನವಾಗಿದೆ ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೋಳಿ ಶ್ರೀನಿವಾಸ್, ಇಮ್ರಾಜ್ ಮೊದಲಾದವರು ಮಾತನಾಡಿ ಸರ್ಕಾರ ತನ್ನ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು
ಕರ್ನಾಟಕ ರಾಜ್ಯ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣ, ರಾಜ್ಯ ರೈತ ಸಂಘ ಹೊಸಳ್ಳಿ ಚಂದ್ರಪ್ಪ ಬಣ, ಕರ್ನಾಟಕ ರಕ್ಷಣಾ ವೇದಿಕೆ, ಕಾಂಗ್ರೆಸ್ ಪಕ್ಷ, ಸಿಐಟಿಯು, ಇಟ್ಟಿಗೆ ಹಮಾಲರ ಸಂಘ, ದಲಿತ ಪರ ಸಂಘಟನೆ, ಅಂಗನವಾಡಿ ನೌಕರರ ಸಂಘಟನೆ, ಕಾಮನಬಿಲ್ಲು ಫೌಂಡೇಶನ್, ದಲಿತ ಸಂಘ, ಫುಟ್ಪಾತ್ ವ್ಯಾಪಾರಿಗಳ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪಿಎಸ್‍ಐ ಕೆ.ಟಿ.ರಮೇಶ್ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ