ಎಸಿಬಿ ಬಳಿ ಬಹಿಷ್ಕಾರದಿಂದ ಮುಕ್ತಿ ಕೇಳಿ ಕಣ್ಣೀರಿಟ್ಟ ದಂಪತಿಗಳು

ಹುಳಿಯಾರು

        ಒಂದು ವರ್ಷಗಳ ಹಿಂದೆ ನಮಗೆ ಬಹಿಷ್ಕಾರ ಹಾಕಲಾಗಿತ್ತು ಸ್ವಾಮಿ. ವರ್ಷದಿಂದಲೂ ಯಾವ ಅಧಿಕಾರಿಯೂ ನಮ್ಮ ಪರ ಬಂದಿಲ್ಲ ಸ್ವಾಮಿ, ಬಹಿಷ್ಕಾರದಿಂದ ನೊಂದು ಬೆಂದು ಹೋಗಿದ್ದೇವೆ ಸ್ವಾಮಿ, ನೀವಾದರೂ ನಮಗೆ ಬಹಿಷ್ಕಾರದಿಂದ ಮುಕ್ತಿ ಕೊಡಿಸಿ ನೆಮ್ಮದಿಯಿಂದ ಬಾಳುವಂತೆ ಮಾಡಿ ಸ್ವಾಮಿ ಎಂದು ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದ ಮೈಲಾರಪ್ಪ ದಂಪತಿಗಳು ಎಸಿಬಿ ಎದುರು ಗುರುವಾರ ಕಣ್ಣೀರಿಟ್ಟ ಘಟನೆ ನಡೆದಿದೆ.

       ಹುಳಿಯಾರಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರ ನಿಗ್ರಹದಳದಿಂದ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಈ ಘಟನೆ ನಡೆದಿದೆ.

        ನಮ್ಮ ಜಮೀನಿನಲ್ಲಿ ಪಂಚಾಯ್ತಿ ಅನುಮತಿ ಪಡೆದು ಪಂಚಾಯ್ತಿ ನಿರ್ದೇಶನದಂತೆ ನಾವು ಮನೆ ಕಟ್ಟಿದ್ದೇವೆ. ಆದರೆ ಗ್ರಾಮದ ಮುಖಂಡರು ಏಕಾಏಕಿ ಮನೆ ಒತ್ತುವರಿ ಮಾಡಿರುವುದಾಗಿ ಏಕಪಕ್ಷೀಯ ನಿರ್ಧಾರಕ್ಕೆ ಬಂದು ನಮ್ಮನ್ನು ಬಹಿಷ್ಕಾರ ಹಾಕಿದ್ದಾರೆ.

      ಬಹಿಷ್ಕಾರದಿಂದಾಗಿ ಊರಿನ ಅಂಗಡಿಗೆ ಹೋಗಿ ನಾವೇನೂ ತರೋಗಿಲ್ಲ, ದೇವಸ್ಥಾನಕ್ಕೆ ಹೋಗಂಗಿಲ್ಲ, ಊರಿನವರು ಮಾತನಾಡಿಸುವುದಿರಲಿ ಊರಿನವರು ಒಂದನಿ ನಿರು ಸಹ ನಮಗೆ ಕೊಡಂಗಿಲ್ಲ ಅನ್ನುವಂತೆ ಅಲಿಖಿತ ಅದೇಶ ಮಾಡಿದ್ದಾರೆ ಎಂದು ಆರೋಪಿಸಿದರು.

      ಈ ಸಂಬಂಧ ಈಗಾಗಲೇ ಪತ್ರಿಕೆಯಲ್ಲಿ ಸುದ್ದಿ ಬಂದಿದ್ದು ಪೊಲೀಸ್ ಇಲಾಖೆಯವರು ಠಾಣೆಗೆ ಎರಡೂ ಕಡೆಯವರನ್ನು ಕರೆಸಿದರಾದರೂ ಬಹಿಷ್ಕಾರಕ್ಕೆ ಮುಕ್ತಿ ಕೊಡಿಸಿಲ್ಲ, ಮಾಧ್ಯಮದವರೂ ಸಹ ಊರಿಗೆ ಬಂದು ಬಹಿಷ್ಕಾರ ಹಿಂಪಡೆಯುವಂತೆ ಕೇಳಿಕೊಂಡರೂ ಒಪ್ಪದೆ ಅವರನ್ನೂ ಸಹ ಹಿಂದಕ್ಕೆ ಕಳುಹಿಸಿದ್ದಾರೆ. ಹಾಗಾಗಿ ಊರಿನವರನ್ನು ಮಾತನಾಡಿಸದೆ ಇರಲಾಗುತ್ತಿಲ್ಲ, ದೇವಸ್ಥಾನ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗದೆ ಮನೆಯಲ್ಲಿರಲಾಗುತ್ತಿಲ್ಲ, ನೆರೆಹೊರೆಯವರ ಶುಭಕಾರ್ಯಗಳಿಗೆ ಹೋಗದೆ, ನಮ್ಮ ಮನೆಗೆ ಅವರನ್ನು ಕರೆಸದೆ ಬಾಳಲಾಗುತ್ತಿಲ್ಲ.

      ದಯಮಾಡಿ ಮೊದಲಿನಂತೆ ಊರಿನವರೊಂದಿಗೆ ಸೌಹಾರ್ದತೆಯಿಂದ ಬಾಳುವಂತೆ ಮಾಡಿ ಎಂದು ಕೋರಿದರು. ಈ ವಿಚಾರವನ್ನು ತುಮಕೂರು ಎಸಿಬಿ ಅಧಿಕಾರಿಯಾದ ವಿ.ರಘುಕುಮಾರ್ ಅವರು ಗಂಭೀರವಾಗಿ ಪರಿಗಣಿಸಿ ತಕ್ಷಣ ಪಿಎಸ್‍ಐ ಅವರನ್ನು ಸಭೆಗೆ ಕರೆಸಿಕೊಂಡು ಏನ್ರಿ ಇದು ಈ ಕಾಲದಲ್ಲೂ ಬಹಿಷ್ಕಾರ ಪದ್ಧತಿ ಜೀವಂತವಾಗಿರುವ ದೂರು ಬಂದಿದೆಯಲ್ರಿ. ಇದು ಅಧಿಕಾರಿಗಳಷ್ಟೇ ಅಲ್ಲ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರ.

        ತಕ್ಷಣ ಈ ದೂರಿನ ಸಂಬಂಧ ಸತ್ಯಾಸತ್ಯೆಯ ವರದಿ ಕೊಡಿ. ಬಹಿಷ್ಕಾರ ಹಾಕಿರುವುದು ಸತ್ಯವಾಗಿದ್ದರೆ ಅವರೆಷ್ಟೇ ಪ್ರಭಾವಿಗಳಾಗಿರಲಿ, ಅವರೆಷ್ಟೆ ಜನರಿರಲಿ ಕೇಸ್ ಬುಕ್ ಮಾಡಿ ಕಂಬಿ ಎಣಿಸಲು ಕಳಿಸ್ರಿ ಎಂದು ಮೌಖಿಕ ಆದೇಶ ನೀಡಿದರು.ಈ ಸಭೆಯಲ್ಲಿ ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ, ಕಮದಾಯ ತನಿಖಾಧಿಆಕರಿ ಮಂಜುನಾಥ್, ಪಪಂ ಆಡಳಿತಾಧಿಕಾರಿ ಮಂಜುನಾಥ್, ಪಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಗಣೇಶ್ ಸೇರಿದಂತೆ ಸದಸ್ಯರು, ಸಾರ್ವಜನಿಕರು, ಕೆಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap