ನರೇಗಾ ಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್ ವಿತರಣೆಗೆ ಆಗ್ರಹ

ದಾವಣಗೆರೆ:

       ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಸೌಲಭ್ಯ ಪಡೆಯಲು ಅನುವಾಗುವಂತೆ ತಕ್ಷಣವೇ ಸ್ಮಾರ್ಟ್‍ಕಾರ್ಡ್ ವಿತರಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಎಐಟಿಯುಸಿ ಸಂಯೋಜಿತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನರೇಗಾ ಕಾರ್ಮಿಕರು ಪ್ರತಿಭಟನೆ ನಡೆಸಿದರು.

       ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ನರೇಗಾ ಕಾರ್ಮಿಕರು, ತಮಗೆ ಸ್ಮಾರ್ಟ್‍ಕಾರ್ಡ್ ವಿತರಿಸಲು ವಿಳಂಬ ಧೋರಣೆ ತೋರಿಸುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆವರಗೆರೆ ಚಂದ್ರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯ ಕಲ್ಪಿಸಬೇಕೆಂದು 2017ರ ಮೇ.1ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈ ಕಾರ್ಮಿಕರಿಗೆ ಇದು ವರೆಗೂ ಯಾವುದೇ ಸೌಲಭ್ಯ ದೊರೆತಿಲ್ಲ ಎಂದು ಆರೋಪಿಸಿದರು.

       ಮಂಡಳಿಯಿಂದ ಸೌಲಭ್ಯ ಪಡೆಯಲು ಉದ್ಯೋಗ ಖಾತರಿ ಜಾಬ್ ಕಾರ್ಡ್ ಹೊಂದಿರುವವರಿಗೆ, ಸ್ಮಾರ್ಟ್ ಕಾರ್ಡ್ ಮಾಡಿಕೊಡುವಂತೆ ಮಂಡಳಿಯು ಖಾಸಗಿ ಏಜೇನ್ಸಿಗೆ ಗುತ್ತಿಗೆ ನೀಡಿದೆ. ಆದರೆ, ಏಜೆನ್ಸಿಯವರು ಸಿಬ್ಬಂದಿ ಕೊರತೆ ನೆಪ ಹೇಳಿ, ಕಾರ್ಡ್ ವಿತರಿಸಲು ವಿಳಂಬ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ಖಾತರಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಕೊಟ್ಟಿಲ್ಲ ಎಂದು ಆರೋಪಿಸಿದರು.

       ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉದ್ಯೋಗ ಖಾತರಿ ಕೂಲಿ ಕಾರ್ಮಿಕರು ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡು, ಸೌಲಭ್ಯ ಪಡೆಯಲು ಸಾಕಷ್ಟು ವಿಳಂಬವಾಗುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ತಕ್ಷಣವೇ ಸ್ಮಾರ್ಟ್ ಕಾರ್ಡ್ ಕೊಡಬೇಕು ಅಥವಾ ಸ್ಮಾರ್ಟ್ ಕಾರ್ಡ್‍ಗೆ ವಿಳಂಬವಾದರೆ ನೇರವಾಗಿ ಫಲಾನುಭವಿಯೇ ಕಾರ್ಡನ್ನು ಕಾರ್ಮಿಕ ಇಲಾಖೆಯಿಂದ ಮಾಡಿಕೊಟ್ಟು, ಉದ್ಯೋಗ ಖಾತರಿ ಕಾರ್ಮಿಕರು ಮಂಡಳಿ ಸೌಲಭ್ಯ ಪಡೆಯಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ನಳಿನಾಕ್ಷಿ, ರೇಣುಕಮ್ಮ, ಮುದುಕಪ್ಪ, ರವಿಕುಮಾರ, ಎ.ಎಂ.ಸುಧಾ, ಪರಮೇಶ್ವರಪ್ಪ, ಬಿ.ರೇಖಾ, ಮಂಜಪ್ಪ, ಬಿ.ಎನ್.ಜ್ಯೋತಿ, ರಾಧಾ, ನಾಗಮ್ಮ, ಪ್ರೇಮಲೀಲಾ, ಎಸ್.ಬಿ.ಲೀಲಾವತಿ, ಎಸ್.ಎಸ್.ಏಕಾಂತಪ್ಪ, ಮಂಜಪ್ಪ, ಮೂರ್ತಿ, ಸಾಕಮ್ಮ, ತಿಪ್ಪಮ್ಮ, ಯು.ಪ್ರೇಮ, ಕೌಸಲ್ಯ, ದಿಲ್ಷಾದ್, ಲಕ್ಷ್ಮೀ, ನಾಗವೇಣಿ, ನಾಗಮ್ಮ, ದುರುಗಮ್ಮ, ಸವಿತಾ, ನೀಲಮ್ಮ, ಲೋಲಾಕ್ಷಮ್ಮ, ರೇಣುಕಮ್ಮ, ಗಂಗಿಬಾಯಿ, ರತ್ನಮ್ಮ, ಸಾಕಮ್ಮ, ಚಂದ್ರಮ್ಮ, ವಿಶಾಲಮ್ಮ, ಗುರುಶಾಂತಮ್ಮ, ಸಕ್ರಿಬಾಯಿ, ಬೇಗಂ, ಟಿ.ಬಿ.ಆಶಾ, ಚಂದ್ರಮ್ಮ, ಸಿ.ನಾಗರತ್ನ, ಸೌಭಾಗ್ಯ, ಚಂದ್ರಪ್ಪ, ಸತೀಶ, ದೇವೇಂದ್ರಪ್ಪ, ಕಮಲಮ್ಮ, ಇ.ಜಿ.ಚಂದ್ರಪ್ಪ, ಮಂಜಪ್ಪ, ಎ.ಕೆ.ಶಿವಮೂರ್ತೆಪ್ಪ, ಮಹದೇವಮ್ಮ, ಸರೋಜಮ್ಮ, ಸತೀಶ, ಸುರೇಶಪ್ಪ, ಚಂದ್ರಮ್ಮ, ತಿಪ್ಪೇಸ್ವಾಮಿ, ನಾಗರಾಜಪ್ಪ, ಪರಮೇಶ್ವರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ