ಕಳಪೆ ಕಾಮಗಾರಿಗಳ ಬಗ್ಗೆ ವಿಷಾದ

ಹರಪನಹಳ್ಳಿ:

      ಬ್ರಿಟಿಷರ ಅವಧಿಯ ಕಾಮಗಾರಿಗಳೂ ಈಗಲೂ ಗಟ್ಟಿಮುಟ್ಟಿಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೆಲವೇ ವರ್ಷಗಳಲ್ಲಿ ಶಿಥಿಲಾವ್ಯವಸ್ಥೆಗೆ ತಲುಪುತ್ತಿರುವುದು ನಮ್ಮ ದೇಶದ ದುರಂತ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಬೇಸರ ವ್ಯಕ್ತಪಡಿಸಿದರು.

       ಕರ್ನಾಟಕ ವಸತಿ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಭಾನುವಾರ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

       ಕಾಮಗಾರಿಗಳಲ್ಲಿ ಕಳಪೆ, ಭ್ರಷ್ಟಾಚಾರ ಮಾಡಲು ಆಸಕ್ತಿ ತೋರಲಾಗುತ್ತಿದೆಯೇ ಹೊರತು ಶಾಶ್ವತ ಕಾಮಗಾರಿಗೆ ಮುಂದಾಗುತ್ತಿಲ್ಲ. ಟೆಂಡರದಾರರು ಇಲ್ಲಿನ ಕಟ್ಟಡವನ್ನು ಸುಭದ್ರವಾಗಿ, ಕಳಪೆ ಆಗದಂತೆ ನಿರ್ಮಿಸಬೇಕು. ಗ್ರಾಮಸ್ಥರೂ ಇಲ್ಲಿನ ಕೆಲಸದ ಮೇಲೆ ಗಮನ ಹರಿಸಬೇಕು ಎಂದು ಹೇಳಿದರು. 

      ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಬೆಳೆಗಳು ಸಂಪೂರ್ಣ ಹಾಳಾಗಿವೆ. ಇಡೀ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕು. ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಚನ್ನಗಿರಿ ಶಾಸಕ ಮಾಡಾಳ ವಿರುಪಾಕ್ಷಪ್ಪ, ಬಿ.ಪಿ.ಹರೀಶ್ ಹಾಗೂ ನಾನೂ ಸೇರಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಆಗಿ ಮನವಿ ಮಾಡಿದ್ದೇವೆ ಎಂದರು.

      ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಕಸವನಹಳ್ಳಿಯಲ್ಲಿ 16.5 ಕೋಟಿ ವೆಚ್ಚದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ತಾಲ್ಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದೇನೆ. ಹೆಚ್ಚುವರಿಯಾಗಿ ಮೂರು ವಸತಿ ಶಾಲೆಗಳು ಆರಂಭಗೊಳ್ಳುತ್ತಿವೆ. ಇನ್ನು ನಾಲ್ಕೈದು ವಸತಿ ಶಾಲೆಗಳು ತೆರೆದರೆ ತಾಲ್ಲೂಕಿನ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬಹುದು ಎಂದರು.

       ತಾಲ್ಲೂಕಿನಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 70 ಕಡೆ ಕೊಳವೆಬಾವಿ ಕೊರೆಯಿಸಲಾಗಿದೆ. ನೀರಿನ ಲಭ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮನೆ ಮುಂದೆ ನೀರು ಲೋಪಾಗದಂತೆ ತಡೆಬೇಕು. ಶುದ್ಧ ನೀರನ್ನು ನಮ್ಮ ಮುಂದಿನ ಜನಾಂಗಕ್ಕೆ ನಾವು ಕೊಡುಗೆಯಾಗಿ ನೀಡಬೇಕು. ನೀರಿನ ಸದ್ಬಳಕೆ ಜೊತೆಗೆ ಪ್ರತಿಯೊಬ್ಬರೂ ಮರ ನೆಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ತಾಲ್ಲೂಕಿನ ಗಡಿಭಾಗದಲ್ಲಿ ರಸ್ತೆಗಳು ಬಹಳಷ್ಟು ಹದೆಗೆಟ್ಟಿವೆ. ಕಸವನಹಳ್ಳಿಯಿಂದ ಹಿಕ್ಕಿಂಗೆರೆ ಕ್ರಾಸ್ ವರೆಗಿನ ರಸ್ತೆ ಅಭಿವೃದ್ಧಿಗೆ ಶಾಸಕ ರೆಡ್ಡಿ ಅವರು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

      ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾತನಾಡಿ, ತಾಲ್ಲೂಕಿನಲ್ಲಿರುವ ವಸತಿ ಶಾಲೆಗಳು ಸ್ವಂತ ಕಟ್ಟಡವಿಲ್ಲದೇ ಖಾಸಗಿ ಕಟ್ಟಡಲ್ಲಿ ನಡೆಯುತ್ತಿವೆ. ಪ್ರತಿವರ್ಷ 13 ಸಾವಿರಕ್ಕೂ ಹೆಚ್ಚು ಅರ್ಜಿಗಳೂ ಬರುತ್ತವೆ. ಹೀಗಾಗಿ ಎಲ್ಲ ಮಕ್ಕಳಿಗೂ ಸೌಲಭ್ಯ ಸಿಗುವುದಿಲ್ಲ. ತಾಲ್ಲೂಕಿಗೆ ಇನ್ನೂ 10 ವಸತಿ ಶಾಲೆಗಳ ಅವಶ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದರು.

      ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ, ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಉಪಾಧ್ಯಕ್ಷ ಸತ್ಯನಾರಾಯಣ. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ಸದಸ್ಯರಾದ ಹುಣಸಿಹಳ್ಳಿ ಪ್ರಕಾಶ್, ಕಂಚೀಕೆರೆ ವೀರಣ್ಣ, ಶಿಂಗ್ರಹಳ್ಳಿ ನಾಗರಾಜ, ಬಿಜೆಪಿ ಅಧ್ಯಕ್ಷ ಕೆ.ಲಕ್ಷ್ಮಣ, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ಮುಖಂಡರಾದ ವೈಕೆಬಿ ದುರಗಪ್ಪ, ಕಣವಿಹಳ್ಳಿ ಮಂಜುನಾಥ್, ನಿಟ್ಟೂರು ಹಾಲಪ್ಪ, ಆರ್.ಲೋಕೇಶ್, ಬಾ.ರೇವಣ, ರಾಜಪ್ಪ, ಆರ್.ಮಲ್ಲೇಶ್, ಸತ್ತೂರು ಹಾಲೇಶ್, ರವಿಕುಮಾರ ನಾಯ್ಕ, ಯಡಿಹಳ್ಳಿ ಶೇಖರಪ್ಪ ಇತರರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link