ಚಳ್ಳಕೆರೆ
ಕೊರೋನಾ ಪಾಸಿಟಿವ್ ಹೊಂದಿದ ಉತ್ತರ ಪ್ರದೇಶದ23 ರೋಗಿಗಳನ್ನು ಉತ್ತಮ ಚಿಕಿತ್ಸೆ ನೀಡುವ ಮೂಲಕ ಅವರನ್ನು ಗುಣಮುಖರನ್ನಾಗಿ ಮಾಡಿದ ತಾಲ್ಲೂಕು ಆರೋಗ್ಯ ಇಲಾಖೆ ಮತ್ತು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗಕ್ಕೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ ಅವರುಗಳ ಮೇಲೆ ಪುಪ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಡಳಿತದ ಪರವಾಗಿ ಅವರನ್ನು ಅಭಿನಂದಿಸಿದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಜಿಲ್ಲಾ ಕೇಂದ್ರ ಕೋವಿಡ್ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡುತ್ತಿದ್ದು, ಹಲವಾರು ವಿರೋಧಗಳ ನಡುವೆಯೂ ಸಹ ನಾವು ಇಲ್ಲಿನ ಹೊರವಲಯದ ಬಿಸಿಎಂ ಹಾಸ್ಟಲ್‍ನಲ್ಲಿ ಅವರನ್ನು ಇಟ್ಟು ಚಿಕಿತ್ಸೆ ನೀಡಿದ್ದು, ನಿನ್ನೆ ಬಂದ ವೈದ್ಯಕೀಯ ವರದಿ ಪ್ರಕಾರ ಎಲ್ಲರೂ ಗುಣಮುಖರಾಗಿದ್ದು, ಅವರನ್ನು ಅವರ ಊರುಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಪಾಸಿಟಿವ್ ಪ್ರಕರಣದ ಎಲ್ಲರಿಗೂ ಯಾವುದೇ ರೀತಿ ಆತಂಕವಿಲ್ಲದೆ ಇಲ್ಲಿನ ವೈದ್ಯರು, ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸಿದೆ. ನಿಮ್ಮೆಲ್ಲರನ್ನು ಜಿಲ್ಲಾಡಳಿತದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಗುಣಮುಖ ಹೊಂದಿದ 23 ಜನರನ್ನು ಸರಥಿ ಸಾಲಿನಲ್ಲಿ ನಿಲ್ಲಿಸಿ ಅವರ ಮೇಲೆ ವೈದ್ಯರು ಮತ್ತು ಜಿಲ್ಲಾಧಿಕಾರಿಗಳ ತಂಡ ಪುಪ್ಪಾರ್ಚನೆ ಮಾಡಿದಾಗ ಎಲ್ಲರ ಮುಖದಲ್ಲೂ ಸಂತಸ ಎದ್ದು ಕಾಣುತ್ತಿದ್ದು, ಉತ್ತರ ಪ್ರದೇಶ ಶಿವನಾಥಪಾಲ್, ಸುರೇಶ್, ಶಿವಕುಮಾರ್ ಮುಂತಾದವರು ಮಾತನಾಡಿ, ಉತ್ತರ ಪ್ರದೇಶದಿಂದ ಬಂದ ನಮಗೆ ಇಲ್ಲಿನ ಪೊಲೀಸರು ತಡೆದು ವಸತಿ ಕ್ವಾರಂಟೈನ್ ಮಾಡಿದಾಗ ಎಲ್ಲರಲ್ಲೂ ಭಯ ಉಂಟಾಗಿತ್ತು. ಕೊರೋನಾ ಪಾಸಿಟಿವ್ ಎಂದು ತಿಳಿದಾಗ ನಮಗೆ ದಿಕ್ಕೆತೋಚದಂತಾಯಿತು. ಆಗ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ವರ್ಗ ನಮಗೆ ದೈರ್ಯ ತುಂಬಿ ಎಲ್ಲಾ ರೀತಿಯ ಚಿಕಿತ್ಸೆ ನೀಡಿ ಪ್ರತಿನಿತ್ಯವೂ ನಮಗೆ ಎಲ್ಲಾ ಸೌಕರ್ಯ ಒದಗಿಸಿದ್ದು, ದೇವರ ರೂಪದಲ್ಲಿ ಬಂದ ವೈದ್ಯರು ನಮ್ಮೆಲ್ಲರಿಗೂ ಹೊಸ ಬದುಕು ನೀಡಿದ್ದು, ಎಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಕಾಡಾ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ್, ಉಪವಿಭಾಗಾಧಿಕಾರಿ ಪ್ರಸನ್ನ, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಡಿವೈಎಸ್ಪಿ ಕೆ.ವಿ.ಶ್ರೀಧರ್, ನಿರ್ಗಮನ ಸಿಎಂಒ ಬಸವರಾಜು, ಟಿಎಚ್‍ಒ ಡಾ.ಪ್ರೇಮಸುಧಾ, ಡಾ.ಅಮಿತ್ ಗುಪ್ತ, ಡಾ.ನಾಗರಾಜು, ವೃತ್ತ ನಿರೀಕ್ಷ ಈ.ಆನಂದ, ಪಿಎಸ್‍ಐಗಳಾದ ರಾಘವೇಂದ್ರ, ಮಹೇಶ್‍ಹೊಸಪೇಟೆ, ಆರ್‍ಆರ್‍ಟಿ ತಂಡದ ಮುಖ್ಯಸ್ಥರಾದ ಪ್ರಸನ್ನಕುಮಾರ್, ಗಂಗಾಧರ, ಚಂದ್ರಪ್ಪ, ಎಸ್.ಬಿ.ತಿಪ್ಪೇಸ್ವಾಮಿ, ಎನ್.ಪ್ರೇಮಕುಮಾರ್, ಎಚ್.ತಿಪ್ಪೇಸ್ವಾಮಿ, ಶುಶ್ರೂಷಕಿ ನಾಗರತ್ನ, ಮಮತ, ಚಾಲಕ ರಾಮಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ