ಕೊಂಡಜ್ಜಿ ಸ್ಕೌಟ್ಸ್ ತರಬೇತಿ ಕೇಂದ್ರಕ್ಕೆ 1.5 ಕೋಟಿ ಮಂಜೂರು-ಪಿ.ಜಿ.ಆರ್.ಸಿಂಧ್ಯಾ

ದಾವಣಗೆರೆ 

          ದಾವಣಗೆರೆ ಕೊಂಡಜ್ಜಿ ಸ್ಕೌಟ್ಸ್ ತರಬೇತಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಒಂದೂವರೆ ಕೋಟಿ ಮಂಜೂರು ಮಾಡಿದ್ದು, ಶೀಘ್ರದಲ್ಲಿಯೇ ಹಣ ಬಿಡುಗಡೆಯಾಗಲಿದೆ. ಈ ಕೇಂದ್ರದ ಮೂಲ ಭೂತ ಸೌಕರ್ಯಗಳನ್ನು ಹೆಚ್ಚಿಸಲಾಗುವುದು ಎಂದು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

         ಕೊಂಡಜ್ಜಿಯಲ್ಲಿ ಆಯೋಜಿಸಲಾಗಿದ್ದ ಜವಾಹರಲಾಲ್ ನೆಹರು ಪುಣ್ಯಸ್ಮರಣೆ ಮತ್ತು ಮಕ್ಕಳ ದಿನಾಚರಣೆ, ರಾಷ್ಟಪತಿ ಸ್ಕೌಟ್ಸ ಗೈಡ್ಸ ತರಬೇತಗಿ ಶಿಬಿರದ ಉದ್ಘಾಟನಾ ಶಿಬಿರ ಹಾಗೂ ಕೊಂಡಜ್ಜಿ ಬಸಪ್ಪನವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಾರದಲ್ಲಿ 20 ಲಕ್ಷ ಬಿಡುಗಡೆಯಾಗಲಿದ್ದು, ಇಲ್ಲಿಗೆ ಬರುವ ಶಿಕ್ಷಕರಿಗೆ ಸೌಲಭ್ಯಗಳಾದ ಶೌಚಾಲಯ ದುರಸ್ತಿ, ಬಿಸಿ ನೀರು ವ್ಯವಸ್ಥೆ, ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಿರಿ ಎಂದರು.

         ಬಸಪ್ಪನವರ ಜೀವನ ಚರಿತ್ರೆ ಪ್ರಾಥಮಿಕ ಹಂತದಲ್ಲಿ ಪಠವಾಗಲಿ ಇಲ್ಲಿ ಸೇವೆ ಸಲ್ಲಿಸುವ ಯಾರು ಯಾವುದೇ ನಿರೀಕ್ಷ್ಷೆಗಳನ್ನಿಟ್ಟುಕೊಂಡು ಬಂದಿಲ್ಲ. ಕೇವಲ ದೇಶ ಸೇವೆಯಷ್ಟೆ ಅವರ ಉದ್ದೇಶ ಇಂದಿನ ಶಿಬಿರದಲ್ಲಿ ಎಲ್ಲರೂ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿಕೊಂಡು ಬಂದಿದ್ದಾರೆ. ಬಸಪ್ಪನವರು ಇಂತಹ ಒಂದು ಸಂಸ್ಥೆ ಕಟ್ಟಲು ಬಹಳ ಶ್ರಮ ಪಟ್ಟಿದ್ದಾರೆ ಎಂದರು.

           ಅಂತಹವರ ಆದರ್ಶ, ಚಿಂತನೆ, ಶಿಸ್ತು ಸಂಯಮವನ್ನು ಇಂದಿನ ಮಕ್ಕಳು ಅಳವಡಿಸಿಕೊಳ್ಳಬೇಕು. ಇಂತಹ ಸಂಸ್ಥೆಯ ಅಭ್ಯುದಯಕ್ಕಾಗಿ ಕುಮಾರಸ್ವಾಮಿಯವರ ಸರ್ಕಾರ ಹಣಕಾಸಿನ ನೆರವು ನೀಡಿದೆ. ಈ ಹಿಂದಿನ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ಕೂಡ ಆರ್ಥಿಕ ನೆರವು ನೀಡಿದ್ದಾರೆ ಎಂದು ಸ್ಮರಿಸಿದರು. ಭಾರತದಲ್ಲಿ ವಲ್ರ್ಡ್ ಜಾಂಬೂರಿ ಆಗಬೇಕೆಂಬುದು ನನ್ನ ಜೀವನ ಉದ್ದೇಶ ಹಾಗೂ ಬೆಂಗಳೂರಿನಲ್ಲಿ ವಲ್ರ್ಡ್ ಜಾಂಬೂರಿ ಆಯೋಜಿಸಿ ಭಾರತದ ಮಕ್ಕಳನ್ನ ಪ್ರಪಂಚಕ್ಕೆ ಪರಿಚಯಿಸಬೇಕು. ಹಾಗಾಗಿ ಮುಂದಿನ ವಲ್ರ್ಡ ಜಾಂಬೂರಿ ಉತ್ಸವವನ್ನು ಬೆಂಗಳೂರಿನಲ್ಲಿ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದರು.

            ಇಂಜನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಈಗಿರುವ ಕೋಟಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಮೀಸಲಾತಿ ಹೆಚ್ಚಿಸಿದರೆ ಸಾಕಷ್ಟು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಅನುಕೂಲವಾಗಲಿದೆ. ಈಗಾಗಲೇ ನೀವುಗಳು ಸಂಸ್ಥೆಯ ವಿವಿಧ ಪರೀಕ್ಷೆಗಳನ್ನು ಪಾಸು ಮಾಡಿದ್ದೀರಿ. ಈ ಅಂಶಗಳನ್ನು ಅದರೊಂದಿಗೆ ಪರಿಗಣಿಸಲಾಗುವುದು. ಹಾಗೂ ಅತೀ ಹೆಚ್ಚು ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

             ಸರ್ವಧರ್ಮ ಸಮನ್ವಯತೆಯೇ ಸ್ಕೌಟ್ಸ್ ಗೈಡ್ಸ್ ಉದ್ದೇಶ. ಇಲ್ಲಿ ಎಲ್ಲಾ ಜಾತಿ ಧರ್ಮದ ಮಕ್ಕಳು ಭಾಗವಹಿಸುತ್ತಾರೆ. ಆದರೆ ನಾವೆಲ್ಲ ಭಾರತೀಯ ಮಕ್ಕಳು ಎಂದು ಭಾವಿಸುತ್ತಾರೆ ಹಾಗಾಗಿ ನಾವು ಎಲ್ಲಾ ಜಾತಿ ಧರ್ಮಗಳನ್ನು ಗೌರವಿಸೋಣ ಯಾವುದನ್ನು ಅಲ್ಲಗಳಿಯುವುದು ಬೇಡ, ದ್ವೇಷಿಸುವುದು ಬೇಡ ರಾಜ್ಯ ದೇಶದ ಎಲ್ಲಾ ಜನತೆಯನ್ನು ಒಟ್ಟಿಗೆ ಕರೆದುಕೊಂಡು ಹೋಗುವಂತಹ ಕಾರ್ಯ ನಿಮ್ಮಿಂದಾಗಲಿ ಎಂದರು.

           ಬುದ್ದ ಬಸವರ ಕರ್ಮಭೂಮಿ ಈ ನಾಡು ಬಸವಣ್ಣನವರ ಕಾಯಕ ಮತ್ತು ದಾಸೋಹಕ್ಕೆ ಬಹಳ ಪ್ರಖ್ಯಾತಿ ಇದೆ. ಕಾಯಕ ದಾಸೋಹ ಅಂದರೆ ಉತ್ಪಾದನೆ ಮತ್ತು ವಿತರಣೆ ಎಂದರ್ಥ. ಬುದ್ದ, ಕಾರ್ಲಮಾಕ್ರ್ಸ ಎಲ್ಲರೂ ಹೇಳಿದ್ದೂ ಇದನ್ನೆ ಆದರೆ ಬಸಪ್ಪನವರು ಅದನ್ನು ಮಾಡಿಸಿ ತೋರಿಸಿದರು ಎಂದರು

           ಮಾಜಿ ಕೇಂದ್ರ ಸಚಿವರಾಗಿದ್ದ ಬಸಪ್ಪನವರು ಇಂತಹ ಒಂದು ಕೇಂದ್ರ ಸ್ಥಾಪನೆಗೆ ವಿಧಾನಸೌಧದಲ್ಲಿ ಬೇಡಿ ಜಾಗ ಪಡೆದಿದ್ದಾರೆ. ಒಬ್ಬ ಮಾಜಿ ಕೇಂದ್ರ ಮಂತ್ರಿಯಾಗಿದ್ದುಕೊಂಡು ಅಧಿಕಾರಿ ಗುಮಾಸ್ತನ ಬಳಿ ಹೋಗಿ ಭೂಮಿ ಪಡೆದಿದ್ದಾರೆ ಇಂತಹ ಸರ್ವಧರ್ಮ ಸಮನ್ವಯಕ್ಕೆ ಶ್ರಮಿಸದ ಬಸಪ್ಪನವರ ಆದರ್ಶಗಳನ್ನು ಅವರ ಕುಟುಂಬ ಇಂದಿಗೂ ಪಾಲಿಸುತ್ತಿದೆ. ನಾವುಗಳು ಅವರ ಕಾರ್ಯಗಳನ್ನು ಮುಂದುವರೆಸುವುದರಿಂದ ಅವರಿಗೆ ಗೌರವ ನೀಡಬೇಕು ಎಂದರು. ಇಲ್ಲಿ ಭಾಗವಹಿಸುವವರಿಗೆ, ತರಬೇತುದಾರರಿಗೆ ನಾವು ಏನನ್ನು ಕೊಡುವುದಿಲ್ಲ ಕೇವಲ ಕೆ.ಎಸ್.ಆರ್.ಟಿ.ಸಿ ಪಾಸ್ ಕೊಡಬಹುದಷ್ಟೆ ಆದರೂ ನಿಸ್ವಾರ್ಥದಿಂದ ಸೇವೆ ಸಲ್ಲಿಸಲು ಬರುತ್ತಾರೆ ಎಂದರು.

            ದಾವಣಗೆರೆ ವಿ.ವಿಯ ಉಪಕುಲಪತಿ ಶರಣಪ್ಪ ಹಲಸೆ ಮಾತನಾಡಿ ಇಲ್ಲಿ ಸೇರಿರುವ ಮಕ್ಕಳು ಕರುಣೆ ಸಹಬಾಳ್ವೆ ಸ್ನೇಹ ಮುಂತಾದ 12 ಅಂಶಗಳಿಗೆ ಒತ್ತು ಕೊಟ್ಟಿರುತ್ತಾರೆ. ಎಂದೆಂದಿಗೂ ನಾವು ದೇಶ ಸೇವೆಗೆ ಸಿದ್ದ ಎಂದು ಜಾತಿ ಮತ ಪಂಥ ಭೇದವಿಲ್ಲದೆ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂತಹ ಉತ್ತಮ ಸತ್ಪ್ರಜೆಗಳನ್ನು ಸೃಷ್ಠಿ ಮಾಡುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ಉದ್ದೇಶ ಎಂದರು.

             ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಚಾಲಕರಾದ ಮಂಜುಳಾ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿ ಒಟ್ಟು 16 ಜಿಲ್ಲೆಗಳ 500 ವಿದ್ಯಾರ್ಥಿಗಳು ಶಿಬಿರದಲ್ಲಿ ಹಾಜರಿದ್ದಾರೆ. ಸರ್ವಧರ್ಮ ಪ್ರಾರ್ಥನೆ ನಾಯಕತ್ವ ತರಬೇತಿ, ಸಾಹಸಕ್ರೀಡೆ, ರಾಷ್ಟಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.

            ಕಾರ್ಯಕ್ರಮದಲ್ಲಿ ಕೊಂಡಜ್ಜಿ ಷಣ್ಮುಖಪ್ಪ, ಗ್ರಾ.ಪಂ ಅಧ್ಯಕ್ಷೆ ವಿಶಾಲಾಕ್ಷಮ್ಮ, ಪುಟ್ಟಮ್ಮ ಮಹಾರುದ್ರಯ್ಯ, ಜಯಪ್ರಕಾಶ ಚಿಗಟೇರಿ, ಷಡಾಕ್ಷರಪ್ಪ, ಗುರುಮೂರ್ತಿ, ವಿಜಯಕುಮಾರ, ದಾದಾ ಪೀರ್ ನವಿಲೇಹಾಳ್ ಮುಂತಾದವರು ಉಪಸ್ಥಿತಿರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link