ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಚಳ್ಳಕೆರೆ ನಗರದ ಕೀರ್ತಿಯನ್ನು ರಾಜ್ಯಮಟ್ಟದ ತನಕ ಕೊಂಡೊಯುವಲ್ಲಿ ಇಲ್ಲಿನ ಆರ್ಯವೈಶ್ಯ ಸಮುದಾಯ ಯಶಸ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಶೈಕ್ಷಣಿಕ, ಸಾಂಸ್ಕತಿ ಹಾಗೂ ಧಾರ್ಮಿಕ ವಿಚಾರಗಳನ್ನು ಸಾರ್ವಜನಿಕರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜಾಗೃತಿಗೊಳಿಸುತ್ತಿರುವುದು ಸಂತಸ ವಿಷಯವೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ವಾಸವಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಜ್ಜಂಪುರದ ಸುಬ್ರಮಣ್ಯ ಶ್ರೇಷ್ಠಿ ರುಕ್ಮೀಣಮ್ಮ ಪ್ರತಿಷ್ಠಾನ, ವಾಸವಿ ವನಿತಾ ಮಂಡಳಿಯ 19ನೇ ವರ್ಷ ರಾಜ್ಯಮಟ್ಟದ ಭಗವದ್ಗೀತ ಕಂಠಪಾಠ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಚಳ್ಳಕೆರೆ ನಗರದ ಕ್ರೀಡಾ ಹಾಗೂ ಸಾಂಸ್ಕತಿಕ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಪಡೆಯುತ್ತಿದ್ದು, ಆರ್ಯವೈಶ್ಯ ಸಮುದಾಯದ ಎಲ್ಲಾ ಸಂಘಟನೆಗಳು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಶಕ್ತಿಯನ್ನು ವೃದ್ದಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ವಿಶೇಷವಾಗಿ ವಿವಿಧ ಹಂತಗಳಲ್ಲಿ ಆಯೋಜಿಸಲ್ಪಟಿರುವ ಕ್ವೀಜ್ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅದೇ ರೀತಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಈ ಮಣ್ಣಿನ ಸಂಸ್ಕಾರವನ್ನು ಸದಾ ಹಸಿರಾಗಿಸುವಲ್ಲಿ ನೆರವಾಗುತ್ತದೆ. ವಾಸವಿ ವನಿತಾ ಮಂಡಳಿ ಎಲ್ಲಾ ಸಂಘಟನೆಗಳೊಂದಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಿ ಉತ್ತಮ ಸಾರ್ಥಕತೆಯತ್ತ ಮುನ್ನಡೆದಿದೆ ಎಂದರು.
ವಾಸವಿ ಪದವಿ ಪೂರ್ವ ಕಾಲೇಜು ಮತ್ತು ಸಮುದಾಯದ ಕೆಲವೊಂದು ಬೇಡಿಕೆಗಳ ಬಗ್ಗೆ ಈಗಾಗಲೇ ಮನವಿ ಮಾಡಿದ್ದೀರಿ, ನಾನು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಕ್ಷೇತ್ರದಲ್ಲಿ ಸಾಧಿಸಿರುವ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಮ್ಮ ಸಮುದಾಯ ನನಗೆ ಹೆಚ್ಚು ಬೆಂಬಲ ನೀಡಿದೆ. ಇತ್ತೀಚೆಗೆ ನಡೆದ ನಗರಸಭಾ ಚುನಾವಣೆಯಲ್ಲೂ ಸಹ ಸಮುದಾಯ ನನ್ನನ್ನೇ ಪ್ರೋತ್ಸಾಹಿಸಿದೆ ಎಂದರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ರಾಮಮೋಹನ್ ಮಾತನಾಡಿ, ಚಳ್ಳಕೆರೆ ನಗರ ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರು ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷವಾಗಿ ನಮ್ಮ ಸಮುದಾಯದ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ. ಸಮುದಾಯದ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕಾರ ನೀಡಿದ್ಧಾರೆಂದರು.
ಜಿಲ್ಲಾ ಕರ್ನಾಟಕ ಆರ್ಯವೈಶ್ಯ ಮಹಾಸಭೆಯ ಜಿಲ್ಲಾ ಉಪಾಧ್ಯಕ್ಷ ಸಿ.ಎಸ್.ಪ್ರಸಾದ್ ಮಾತನಾಡಿ, ಸಮುದಾಯ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲಾ ಸಮುದಾಯದಲ್ಲೂ ಜಾಗೃತಿಯನ್ನು ಮೂಡಿಸುತ್ತಿದೆ. ಇಂದು ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳಲ್ಲಿ ಎಲ್ಲರೂ ಎಲ್ಲಾ ರೀತಿಯ ಸಹಕಾರ ನೀಡಿದ್ಧಾರೆ. ಆರ್ಯವೈಶ್ಯ ಸಮುದಾಯ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತದೆ. ನಮ್ಮ ಪ್ರತಿಯೊಂದು ಕಾರ್ಯಕ್ರಮಕ್ಕೂ ಸಹಕಾರ ನೀಡುತ್ತಿರುವ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ಇತಿಹಾಸದಲ್ಲಿ ಅಭೂತ ಪೂರ್ವ ಅಭಿವೃದ್ಧಿಯನ್ನು ಸಾಧಿಸಿದ್ದು, ಸಂತಸ ತಂದಿದೆ ಎಂದರು.
ವಾಸವಿ ವನಿತಾ ಮಂಡಳಿ ಕಾರ್ಯದರ್ಶಿ ಆಶಾಮಧು ಮಾತನಾಡಿ, ನಮ್ಮ ಮಹಿಳಾ ಸಂಘದ 5ನೇ ವರ್ಷಕೋತ್ಸವದ ಜೊತೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ವಾಸವಿ ವನಿತಾ ಮಂಡಳಿ ಮುಂಬರುವ ದಿನಗಳಲ್ಲೂ ಸಹ ಇನ್ನೂ ಹೆಚ್ಚು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸವಿ ವನಿತಾ ಮಂಡಳಿ ಅಧ್ಯಕ್ಷೆ ಸಂಧ್ಯಾವೆಂಟಕಚಲ ವಹಿಸಿದ್ದರು. ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಸುಮಂಗಳ, ವಾಸವಿ ಕ್ಲಬ್ ಅಧ್ಯಕ್ಷ ಸಿ.ಎಸ್.ನರಸಿಂಹಗುಪ್ತ, ನಿರ್ದೇಶಕ ಪಿ.ಆರ್.ಪದ್ಮನಾಭಗುಪ್ತ, ಎನ್.ಪದ್ಮನಾಭ, ಕೆ.ವಿ.ಅಮರೇಶ್, ಕಾಶಿವಿಶ್ವನಾಥಶೆಟ್ಟಿ, ಸರೋಜಾ, ಶಾರದ, ಅಶೋಕಕುಮಾರ್‍ಗುಪ್ತ, ಟಿ.ಪ್ರಸನ್ನಗುಪ್ತ, ಟಿ.ಡಿ.ಅನಿಲ್‍ಕುಮಾರ್, ಎನ್.ನಾಗಭೂಷಣ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
