ಮೂರು ಕರುಗಳಿಗೆ ಜನ್ಮನೀಡಿದ ಎಮ್ಮೆ…!!

ಬರಗೂರು:

         ಎಮ್ಮೆಯೊಂದು ಮೂರು ಕರುಗಳಿಗೆ ಜನ್ಮನೀಡಿ ಅಚ್ಚರಿ ಮೂಡಿಸಿರುವ ಘಟನೆ ದೊಡ್ಡಬಾಣಗೆರೆ ಕಾಡುಗೊಲ್ಲರ ಹಟ್ಟಿಯಲ್ಲಿ ಮಂಗಳವಾರ ನಡೆದಿದೆ. ಹಿರಿಯ ಜನಪದ ಕಲಾವಿದೆ ಮಾರಕ್ಕ ಸಣ್ಣಚಿತ್ತಯ್ಯ ಅವರು ಸಾಕಿರುವ ಎಮ್ಮೆಯೊಂದು ಮೂರು ಕರುಗಳಿಗೆ ಸುಸಲಿತವಾಗಿ ಜನ್ಮನೀಡಿದೆ. ತಾಯಿ ಮತ್ತು ಕರುಗಳು ಆರೋಗ್ಯದಿಂದ ಇವೆ.

            ಮಾರಕ್ಕ ಸಣ್ಣಚಿತ್ತಯ್ಯ ಮಾತನಾಡಿ ಕಳೆದ 10 ವರ್ಷಗಳ ಹಿಂದೆ ಹಾರೋಗೆರೆ ಲೋಕಣ್ಣ ಅವರಿಂದ ರೂ.10 ಸಾವಿರಕ್ಕೆ ಎಮ್ಮೆ ಕೊಂಡುತಂದಿದ್ದೆ. ಈಗ 6ನೇ ಸೂಲಿಗೆ 3 ಕರುಗಳನ್ನು ಹಾಕಿದೆ. ನನಗೀಗ 87 ವರ್ಷಗಳಿರಬಹುದು. ನಾವು ಮೊದಲಿನಿಂದಲೂ ದನಕುರಿ, ಮೇಕೆ, ಎತ್ತು, ಎಮ್ಮೆ, ಕತ್ತೆ, ನಾಯಿಗಳನ್ನು ಸಾಕುತ್ತಿದ್ದೇವೆ.

           ನಮ್ಮ ಮನೆಯಲ್ಲಿ ಮೊದಲಭಾರಿಗೆ ನಾವು ಸಾಕಿದ್ದ ಎಮ್ಮೆ ಮಂಗಳವಾರ ಬೆಳಿಗ್ಗೆ 7 ಗಂಟೆಯಲ್ಲಿ 3 ಮುದ್ದಾದ ಕರುಗಳಿಗೆ ಜನ್ಮನೀಡಿದೆ. ಅದರಲ್ಲಿ 2 ಹೆಣ್ಣು ಮತ್ತು 3ನೆಯದ್ದು ಗಂಡು ಕರುಗಳು ಜನಿಸಿ ಅಚ್ಚರಿ ಮೂಡಿಸಿವೆ. ಕರುಗಳು ಮತ್ತು ತಾಯಿ ಆರೋಗ್ಯದಿಂದಿವೆ. ಎಮ್ಮೆಯೊಂದು 3 ಕರುಗಳಿಗೆ ಜನ್ಮನೀಡಿರುವುದು ನಮ್ಮ ಸುತ್ತಲಿನ ಗ್ರಾಮಗಳಲ್ಲಿ ಇದೆ ಮೊದಲು.

          ನಮ್ಮೂರಿನ ಜನರೆಲ್ಲರೂ ಬಂದು ನೋಡಿಕೊಂಡು ಸಂತಸ , ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನಗೆ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಇದ್ದಾರೆ. ಆದರೆ ಮೊದಲಿನಿಂದಲೂ ನಾವು ದನಕರು, ಎಮ್ಮೆಕರು, ಕುರಿಮರಿ, ಮೇಕೆಮರಿಗಳನ್ನು ನಮ್ಮ ಮಕ್ಕಳಂತೆ ಸಾಕುತ್ತಿದ್ದೇವೆ. ಈಗ ಇರುವ ಮೊಮ್ಮಕ್ಕಳ ಜೊತೆಗೆ ಇನ್ನೂ 3 ಜನ ಸೇರ್ಪಡೆಯಾಗಿದ್ದಾರೆ ಎಂಬ ಸಂತಸ ಮೂಡಿದೆ. ಪಶುಪಾಲನಾ ಇಲಾಖೆಯ ಕಡೆಯಿಂದ ಎಮ್ಮೆ ಮತ್ತು ಕರುಗಳಿಗೆ ಏನಾದರೂ ಮೇವು, ಔಷಧಿ ಕೊಡುವುದಾದರೆ, ವೈದ್ಯರು ತಿಳಿಸಬೇಕು ಎಂದು ಮಾರಕ್ಕ ಸಣ್ಣಚಿತ್ತಯ್ಯ ಮನವಿ ಮಾಡಿದರು. ಮಗಳು ರಂಗಮ್ಮ, ಮೊಮ್ಮಗ ಶಿವಣ್ಣಗೌಡ, ಮೊಮ್ಮಗಳು ಶಿಲ್ಪಳೊಂದಿಗೆ ಎಮ್ಮೆಮತ್ತು ಕರುಗಳ ಹಾರೈಕೆಯಲ್ಲಿ ತೊಡಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ