ದಾವಣಗೆರೆ:
ಅಟಲ್ ಬಿಹಾರಿ ವಾಜಪೇಯಿ ಅವರು ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶವೇ ಮುಖ್ಯ ಎಂಬ ಬದ್ಧತೆಯನ್ನು ರೂಢಿಸಿಕೊಂಡಿದ್ದರು ಎಂದು ಕಾರ್ಕಳದ ಆದರ್ಶ ಗೋಖಲೆ ಸ್ಮರಿಸಿದರು.
ನಗರದ ಪಿ.ಬಿ. ರಸ್ತೆಯ ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಾಲಯದ ಆರವಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಾಕಾರರಾಗಿ ಅವರು ಮಾತನಾಡಿದರು.
ಅಧಿಕಾರ ಇಂದು ಇರುತ್ತೆ, ನಾಳೆ ಹೋಗುತ್ತೆ. ಆದರೆ, ನಾವು ಮಾಡಿದ ಜನಪರ ಕಾರ್ಯಗಳು ಸದಾ ಉಳಿಯುತ್ತವೆ ಎಂಬುದನ್ನು ವಾಜಪೇಯಿ ಅರತಿದ್ದರು. ಅವರು ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಬದ್ಧತೆಯನ್ನು ಹೊಂದಿದ್ದರು. ಎಲ್.ಕೆ.ಅಡ್ವಾಣಿ ಪಕ್ಷ ಬೆಳೆಸಿದರೆ, ಅವರು ತಮ್ಮ ಜ್ಞಾನ ಭಂಡಾರದ ಮೂಲಕ ಪಕ್ಷ ಕಟ್ಟಿದರು ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಪತ್ರಕರ್ತ, ಕವಿ, ಅಜಾತಶತ್ರು ಆಗಿದ್ದರು. ಭಾರತ ದೇಶ ಇಂದು ತಲೆ ಎತ್ತುವಂತೆ ಮಾಡಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲಲ್ಲಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತಕೊಂಡ್ಡೊಯ್ಯಲು ಸಾಧ್ಯವಾಗಲಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶಕಂಡ ಅಪರೂಪದ ವ್ಯಕ್ತಿ, ಅಜಾತ ಶತ್ರು. ಅವರು ತಮಗಾಗಿ ಏನು ಬಯಸದೇ ದೇಶದ ಹಿತಕ್ಕಾಗಿ ಜೀವನ ನಡೆಸಿದವರಾಗಿದ್ದಾರೆ. ಅವರು ದೇಶದ ಅಭಿವೃದ್ಧಿ ಬಗ್ಗೆ ಹೊಂದಿದ್ದ ಕನಸು ಸಾಕಾರಗೊಳ್ಳಲು ಮತ್ತೂಮ್ಮೆ ದೇಶದ ಪ್ರಧಾನಿಯನ್ನಾಗಿ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೆ ತರಬೇಕೆಂದು ಕಿವಿಮಾತು ಹೇಳಿದರು.
ನದಿ ಜೋಡಣೆ ಯೋಜನೆ ವಾಜಪೇಯಿ ಅವರ ಕನಸಾಗಿತ್ತು. ಆದರೆ, 2004ರ ಚುನಾವಣೆಯಲ್ಲಿ ಬಹುಮತ ಸಿಗದೇ ಆ ಕನಸು ನನೆಗುದಿಗೆ ಬೀಳುವಂತಾಯಿತು. ಈಗ ಅವರ ಅನೇಕ ಕನಸು ಈಡೇರಿಸುವಲ್ಲಿ ಮೋದಿ ಉತ್ಸುಕರಾಗಿದ್ದಾರೆ. ಹಾಗಾಗಿ ಅವರನ್ನು ಮುಂಬರುವ ಚುನಾವಣೆಯಲ್ಲಿ ಮತ್ತೂಮ್ಮೆ ಪ್ರಧಾನಿಯಾಗಿ ಅಧಿಕಾರಕ್ಕೆ ತರುವ ಜವಾಬ್ದಾರಿ ದೇಶದ ಪ್ರತಿಯೊಬ್ಬರ ಮೇಲಿದೆ ಎಂದ ಅವರು, ಗ್ರಾಮ್ ಸಡಕ್, ಸುವರ್ಣ ಚತುಷ್ಪಥ, ಸರ್ವ ಶಿಕ್ಷಣ ಅಭಿಯಾನ, ಇಸ್ರೋ ಉಪಗ್ರಹ ಉಡಾವಣೆ, ಅಂತ್ಯೋದಯ, ವಾಲ್ಮೀಕಿ, ಅಂಬೇಡ್ಕರ್ ವಸತಿ ಮನೆ ಯೋಜನೆ ಮುಂತಾದ ಅನೇಕ ಜನಪರ ಯೋಜನೆಗಳನ್ನು ಅಟಲ್ ಬಿಹಾರಿ ವಾಜಪೇಯಿ ಜಾರಿಗೆ ತಂದಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶಾಸಕರಾದ ಶಾಸಕ ಎಸ್.ಎ. ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಜಗಳೂರು ಶಾಸಕ ಎಸ್.ವಿ. ರಾಮಮಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ