ಮಗನಿಗೆ ಗೌಡರ ಕಿವಿಮಾತು…!!

ಬೆಂಗಳೂರು

       ಕಬ್ಬು ಬೆಳೆಗಾರರ ಸಮಸ್ಯೆಗೆ ಮುಂದಿನ ವಿಧಾನಸಭಾ ಅಧಿವೇಶನದ ಒಳಗೆ ಪರಿಹಾರ ಕಂಡುಕೊಳ್ಳುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳಿದ್ದಾರೆ.

       ಕಬ್ಬು ಬೆಳೆಗಾರರ ಬಾಕಿ ವಿಚಾರ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರನ್ನು ಅವರ ಪದ್ಮನಾಭನಗರದ ನಿವಾಸದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿದ್ದ ಸಂದರ್ಭದಲ್ಲಿ ಆದಷ್ಟು ಶೀಘ್ರ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ರೂಪಿಸುವಂತೆ ಮಾಜಿ ಪ್ರಧಾನಿ ಸಲಹೆ ಮಾಡಿದರು ಎನ್ನಲಾಗಿದೆ.

       ಬೆಳಗಾವಿಯಲ್ಲಿ ಡಿಸೆಂಬರ್ 10 ರಿಂದ ಚಳಿಗಾಲದ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಅಧಿವೇಶನದ ಮೇಲೆ ಈ ಸಮಸ್ಯೆಯ ಕರಿನೆರಳು ಬೀಳಲಿದ್ದು, ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ದೇವೇಗೌಡರು ಸೂಚ್ಯವಾಗಿ ಹೇಳಿದರು ಎನ್ನಲಾಗಿದೆ.

       ಕಬ್ಬು ಬೆಳೆಗಾರರ ಸಮಸ್ಯೆ ಅಧಿವೇಶನದ ಒಳಗೆ ಪರಿಹಾರ ಕಾಣದಿದ್ದರೆ ಅಧಿವೇಶನದ ಒಳಗೂ, ಹೊರಗೂ ಬಿಜೆಪಿ ಹೋರಾಟಕ್ಕೆ ಮುಂದಾಗುವುದು ನಿಶ್ಚಿತ. ಇದರಿಂದ ಸಮ್ಮಿಶ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕುತ್ತದೇ. ವಿಳಂಬ ಮಾಡದೇ ಸಮಸ್ಯೆಗೆ ಪರಿಹಾರ ಸೂತ್ರ ರೂಪಿಸಿ ಎಂದು ದೇವೇಗೌಡರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹೇಳಿದರು ಎಂದು ಮೂಲಗಳು ಹೇಳಿವೆ.

      ಕಬ್ಬು ಬಾಕಿ ವಿಚಾರ ಸಮಸ್ಯೆ ಬಗೆಹರಿಯದಿದ್ದರೆ ಅಧಿವೇಶನದ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಯಾಗುವ ಮಾಹಿತಿಗಳಿವೆ. ಅದಕ್ಕೆ ಅವಕಾಶ ಕೊಡಬೇಡಿ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಮಾರಕವಾಗದಂತೆ ಎಚ್ಚರ ವಹಿಸಿ ಎಂದು ಮಾಜಿ ಪ್ರಧಾನಿಗಳು ಕಿವಿ ಮಾತು ಹೇಳಿದರು ಎಂದು ಹೇಳಲಾಗಿದೆ.

       ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಗೌಡರೊಂದಿಗೆ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಿದರು.

      ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಸಂಬಂಧ ನಿನ್ನೆ ವಿಧಾನಸೌಧದಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ಮುಖಂಡರು ಹಾಗೂ ಕಬ್ಬು ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸುಮಾರು 6 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿ, ಕಬ್ಬು ಬಾಕಿಯನ್ನು ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸೂಚನೆ ನೀಡಿದ್ದರು.

      ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸೂತ್ರಗಳನ್ನು ರೂಪಿಸಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಮತ್ತೊಮ್ಮೆ ಸಭೆ ನಡೆಸಿ ಈ ಸಮಸ್ಯೆ ಸಂಪೂರ್ಣ ಪರಿಹಾರಕ್ಕೆ ಮನಸ್ಸು ಮಾಡಿದ್ದಾರೆ. ಹಾಗಾಗಿಯೇ ಅವರು ಈ ಸಭೆ ಬಳಿಕ ನಿನ್ನೆ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link