ತಪ್ಪು ಮಾಡುವ ಮಕ್ಕಳನ್ನು ದೂರವಿಡಬೇಡಿ ಶಾಸಕ ಜೆ.ಸಿ.ಮಾಧುಸ್ವಾಮಿ

ಹುಳಿಯಾರು:

       ಏನೂ ಮಾಡದ ಒಳ್ಳೆಯವರಿಗಿಂತ ಏನೋ ಮಾಡಲು ಹೋಗಿ ತಪ್ಪು ಮಾಡುವವರನ್ನು ಕ್ಷಮಿಸುತ್ತೇನೆ ಎಂದು ವಿವೇಕಾನಂದ ಹೇಳಿದ್ದಾರೆ. ಹಾಗಾಗಿ ತಪ್ಪು ಮಾಡುವ ಮಕ್ಕಳನ್ನು ದೂರವಿಡದೆ ಅವರನ್ನು ಕ್ಷಮಿಸಿ ಎಲ್ಲ ಮಕ್ಕಳಂತೆ ಶಿಕ್ಷಣ ಕೊಡಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಶಿಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ.

      ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಜೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ಬೈಸಿಕಲ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ಈಗ ಅಂತರ್ಜಾಲದಲ್ಲಿ ಎಲ್ಲವನ್ನೂ ತರ್ಕ ಬದ್ಧವಾಗಿ ಕಲಿಯಬಹುದಾಗಿದೆ, ಎಲ್ಲಾ ವಿಷಯಗಳನ್ನು ಅರ್ಥ ಮಾಡಿಸುವ ಸ್ಟಡಿ ಮೆಟಿರಿಯಲ್ಸ್ ಅಲ್ಲಿದೆ. ಹಾಗಾಗಿಯೇ ಪುಸ್ತಕದಲ್ಲಿರುವುದನ್ನೇ ಕಲಿಯಲು ಶಾಲೆ ಮತ್ತು ಶಿಕ್ಷಕರೇಕೆ ಬೇಕು ಎನ್ನುವ ಕಾಲ ಬಂದಿದೆ. ಪಕ್ಕದ ರಾಜ್ಯದಲ್ಲಿ ಈಗಾಗಲೇ ಹೋಂ ಸ್ಕೂಲ್ ಆರಂಭವಾಗಿದ್ದು ನಮ್ಮ ರಾಜ್ಯಕ್ಕೆ ಬರುವ ಮುಂಚೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಪಠ್ಯ ಭೋದನೆಗೆ ಮಾತ್ರ ಶಿಕ್ಷಣ ಸೀಮಿತವಾಗದೆ ಮಕ್ಕಳಿಗೆ ಎಲ್ಲದರ ಬಗ್ಗೆಯೂ ತಿಳಿಸುವ, ಕಲಿಸುವ ಕೆಲಸ ಮಾಡಬೇಕಿದೆ ಎಂದರು.

        ಪರ್ವತ ದೂರದಿಂದ ನೋಡಿದರೆ ಎತ್ತರವಾಗಿ ಕಾಣುತ್ತದೆ. ಎತ್ತರಕ್ಕೆ ಹೆದರಿ ಕೈ ಕಟ್ಟಿ ಕೂರದೆ ಅದನ್ನು ಹತ್ತಿದರೆ ನಿಮ್ಮ ಕಾಲ ಕೆಳಗೆ ಪರ್ವತ ಇರುತ್ತದೆ. ಹಾಗಾಗಿ ಸಾಧನೆಗೆ ಹೆದರಿ ಕೈ ಚಲ್ಲಿ ಕೂರದೆ ಸಾಧಿಸುವ ಛಲ ಬೆಳಸಿಕೊಳ್ಳಿ ಎಂದರಲ್ಲದೆ ಪ್ರತಿಯೊಬ್ಬರಲ್ಲೂ ಶಕ್ತಿ ಇದ್ದೇ ಇರುತ್ತದೆ. ಇದನ್ನು ಅರಿತು ಬಳಕೆ ಮಾಡಿಕೊಂಡವರು ಸಾಧಕರಾಗುತ್ತಾರೆ. ಹಾಗಾಗಿ ನಿಮ್ಮಲ್ಲಿರುವ ಶಕ್ತಿ ಏನೆಂಬುದನ್ನು ಮೊದಲು ಅರಿಯಬೇಕು. ಸಾಧಕರ, ದಾರ್ಶನಿಕರ ಪುಸ್ತಕಗಳನ್ನು ಓದುವ ಅಭಿವೃಚಿ ಬೆಳಸಿಕೊಳ್ಳಬೇಕು. ಪ್ರತಿಯೊಂದು ವಿಷಯವನ್ನೂ ಪರೀಕ್ಷೆಯ ದೃಷ್ಠಿಯಿಂದ ಕಂಠಪಾಠ ಮಾಡದೆ ಅರ್ಥ ಮಾಡಿಕೊಳ್ಳಬೇಕು ಎಂದರು.

       ಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಹುಳಿಯಾರು ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಕೆಂಕೆರೆ ಗ್ರಾಪಂ ಅಧ್ಯಕ್ಷೆ ಆಶಾಉಮೇಶ್, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಉಪ ಪ್ರಾಚಾರ್ಯೆ ಡಿ.ಇಂದಿರಾ, ಪಿಆರ್‍ಸಿ ಸಂಗಮೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜು ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link