ಚಿತ್ರದುರ್ಗ:
ವಿಜ್ಞಾನಿಗಳೇ ಮೂಢನಂಬಿಕೆಯನ್ನು ನಂಬುತ್ತಿರುವ ಇಂದಿನ ಕಾಲದಲ್ಲಿ ಶಿಕ್ಷಣದ ಮೂಲಕ ಸೌಹಾರ್ಧ ಸಮಾಜ ಸೃಷ್ಟಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರು ಹಾಗೂ ಸಾಹಿತಿಗಳ ಮೇಲಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಶ್ರೀಕಂಠ ಕೊಡಿಗೆ ಹೇಳಿದರು.
ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಜಿಲ್ಲಾ ಶಾಖೆ, ಚಿತ್ರದುರ್ಗ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಇವರುಗಳ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.
ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಪರಿಪಾಠವನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಶಿಕ್ಷಣದ ಮೂಲಕ ತಿಳಿಸಬೇಕು. ಮಕ್ಕಳ ಮನಸ್ಸಿಗೆ ವಿಷ ಬೀಜ ಬಿತ್ತಿದರೆ ಸಮಾಜದ ಸ್ವಾಸ್ಥ್ಯ ಹಾಳಾಗುವುದಲ್ಲದೆ ದೇಶ ದೇಶಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆಯುಂಟಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ ವ್ಯಕ್ತಿತ್ವ ದೊಡ್ಡದು ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಿ ಎಂದು ಉಪನ್ಯಾಸಕರುಗಳಿಗೆ ಕರೆ ನೀಡಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮೊದಲ ಶಿಕ್ಷಕರಲ್ಲ. ಸಾವಿತ್ರಿಬಾಪುಲೆ ಮೊದಲ ಶಿಕ್ಷಕಿ ಎನ್ನುವುದನ್ನು ಮರೆಯಬಾರದು. ಕೋಮುವಾದಿ ಮನಸ್ಸುಗಳು ಒಂದು ಸಮುದಾಯವನ್ನು ದೊಡ್ಡದನ್ನಾಗಿ ಮಾಡಲು ಹೊರಟಿವೆ. ಹಾಗಾಗಿ ತಳಸಮುದಾಯದ ಸಾಧಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ವಿಷಾಧಿಸಿದರು.
ಶಿಕ್ಷಕರುಗಳ ಕೆಲಸ ಎಂದರೆ ಸಮಾಜದಲ್ಲಿ ಪ್ರತಿಯೊಬ್ಬರನ್ನು ವಿದ್ಯಾವಂತರನ್ನಾಗಿ ಮಾಡುವ ಪವಿತ್ರವಾದ ವೃತ್ತಿ. ರಾಜಕಾರಣಿಗಳಿಗೆ ಬಿಡುವು ಇರುವುದಿಲ್ಲ ನಿಜ. ಆದರೆ ಇಂತಹ ಕಾರ್ಯಕ್ರಮಗಳಿಗೆ ಅಹಂಕಾರವನ್ನು ಬಿಟ್ಟು ಬರಬೇಕು. ಎಲ್ಲರೂ ಉಪದೇಶ ಮಾಡುವವರೆ ಆದರೆ ಪಾಲಿಸುವವರು ಯಾರು ಎಂದು ಖಾರವಾಗಿ ಪ್ರಶ್ನಿಸಿದ ಡಾ.ಶ್ರೀಕಂಠ ಕೊಡಿಗೆ ನಿಮ್ಮ ಕೆಲಸ ಪ್ರಾಮಾಣಿಕವಾಗಿದ್ದರೆ ಎಲ್ಲರೂ ನಿಮಗೆ ಸಲಾಂ ಹೊಡೆಯುತ್ತಾರೆ.
ಒಂದು ವೇಳೆ ನಿಮ್ಮ ಕೆಲಸದಲ್ಲಿ ದೋಷವಿದ್ದರೆ ನೀವುಗಳೇ ಎಲ್ಲರಿಗೂ ಸಲಾಂ ಹೊಡೆಯಬೇಕಾಗುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಆಳುವವರು ಕಿರುಕುಳ ನೀಡುತ್ತಲೆ ಇರುತ್ತಾರೆ. ನಿರ್ಭಯವಾಗಿ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ವಾತಾವರಣ ನಿರ್ಮಾಣವಾಗಿದೆ. ನೈತಿಕವಾಗಿ ದುರ್ಬಲರಾಗಿರುವ ರಾಜಕಾರಣಿಗಳು ಹಾಗೂ ಶಿಕ್ಷಕರುಗಳಿಂದ ಯಾರನ್ನು ಹೆದುರಿಸಲು ಆಗುವುದಿಲ್ಲ. ಐದು ವರ್ಷ ಅಧಿಕಾರ ಸಿಕ್ಕರೆ ಸಾಕು ಕೋಟಿಗಟ್ಟಲೆ ಅಕ್ರಮ ಆಸ್ತಿ ಸಂಪಾದನೆ ಮಾಡಿಕೊಳ್ಳುತ್ತಾರಲ್ಲ ಅವುಗಳೆಲ್ಲಾ ಎಲ್ಲಿಂದ ಬಂದವು ಎನ್ನುವುದನ್ನು ಪ್ರಶ್ನಿಸುವಂತಾಗಬೇಕು ಎಂದರು.
ರಾಜಕಾರಣಿಗಳೊಬ್ಬರೆ ಸಮಾಜ ದ್ರೋಹಿಗಳಲ್ಲ. ಕೆಲವು ಐ.ಎ.ಎಸ್., ಐ.ಪಿ.ಎಸ್.ಅಧಿಕಾರಿಗಳು ಸಮಾಜ ದ್ರೋಹಿಗಳಿದ್ದಾರೆ. ಅನಕ್ಷರಸ್ಥ ಜಾತಿವಾದಿಗಳನ್ನು ಅಕ್ಷರಸ್ಥ ಜಾತಿವಾದಿಗಳನ್ನಾಗಿ ಮಾಡುವುದು. ಅನಕ್ಷರಸ್ಥ ಕೋಮುವಾದಿಗಳನ್ನು ಅಕ್ಷರಸ್ಥ ಕೋಮುವಾದಿಗಳನ್ನಾಗಿ ಮಾಡುವವರೆ ನಿಜವಾದ ಭಯೋತ್ಪಾದಕರು. ಎಲ್ಲರೂ ಜಾತಿವಾದಿಗಳಾಗುವುದಾದರೆ ಶಿಕ್ಷಣದ ಅಗತ್ಯವೇನಿದೆ ಎಂದು ಆತ್ಮವಾಲೋಕನ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಸಮುದಾಯಕ್ಕೆ ತಿಳಿಸಿದರು.
ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ವೇತನಕ್ಕೆ ಸಾಕಷ್ಟು ತಾರತಮ್ಯವಿದೆ. ಅದಕ್ಕಾಗಿ ಸೌಲಭ್ಯಗಳಿಗಾಗಿ ನೀವುಗಳು ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ. ಸರ್ಕಾರ ನಿಮಗೆ ಸಂವಿಧಾನಾತ್ಮಕವಾಗಿ ಸವಲತ್ತುಗಳನ್ನು ಕೊಡಬೇಕು. ನೀವುಗಳು ಭಿಕ್ಷೆಯನ್ನೇನು ಕೇಳುತ್ತಿಲ್ಲ. ವೇತನ ಶ್ರೇಣಿಯನ್ನು ಪುನರ್ ಪರಿಷ್ಕರಿಸಿ ಹೊಸ ಆಯೋಗವನ್ನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಸಿ.ಶೋಭ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಕಳೆದ ವರ್ಷಕ್ಕಿಂತ ಈ ಬಾರಿಯ ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗಬೇಕಾದರೆ ಉಪನ್ಯಾಸಕರುಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಎಲ್ಲಾ ಮಕ್ಕಳನ್ನು ನಿಮ್ಮ ಮಕ್ಕಳಂತೆಯೇ ನೋಡಿಕೊಂಡು ಸಮಾಜದಲ್ಲಿ ಸತ್ಪ್ರೆಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸಣ್ಣಪುಟ್ಟ ವ್ಯತ್ಯಾಸ, ಮನಸ್ತಾಪಗಳನ್ನು ಬದಿಗಿಟ್ಟು ಮಕ್ಕಳ ಹಾಗೂ ಅವರ ಪೋಷಕರುಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಉಪನ್ಯಾಸಕರುಗಳಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್ ಮಾತನಾಡಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾದ್ಯಂತ ಮೂವತ್ತು ಸಾವಿರ ಉಪನ್ಯಾಸಕರುಗಳನ್ನು ಸೇರಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸಿದ್ದೇವೆ. ಎಂಟು ಹತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಕೆಲವೊಮ್ಮೆ ಹೋರಾಟದಲ್ಲಿ ಹೊಂದಾಣಿಕೆ ಮಾಡಿಕೊಂಡರು ಸರ್ಕಾರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಘನತೆಗೆ ತಕ್ಕಂತೆ ವೇತನ ಕೊಡಬೇಕಾದರೆ ಮೊದಲು ಕುಮಾರನಾಯ್ಕ ವರದಿಯನ್ನು ಅನುಷ್ಟಾನಗೊಳಿಸಿ. ವರ್ಗಾವಣೆ ನೀತಿಯಲ್ಲಿ ತಾರತಮ್ಯವಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ಅಭಿಯಾನ ನೀತಿಯನ್ನು ಜಾರಿಗೆ ತರುವ ಮುನ್ನ ಗುರುಗಳ ಘನತೆಗೆ ತಕ್ಕಂತೆ ಸ್ಥಾನಮಾನ ಕಲ್ಪಿಸಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ಉಪನ್ಯಾಸಕ ಎ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ 2008-09 ರಲ್ಲಿ ಸಂಘ ಪ್ರಾರಂಭಗೊಂಡು ಅಂದಿನಿಂದ ಇಲ್ಲಿಯವರೆಗೂ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ಮಾಡಲಾಗುತ್ತಿದೆ. ಇನ್ನು ಮುಂದೆ ತ್ರೀವ್ರ ಸ್ವರೂಪದ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿ ಮಾತನಾಡಿ ವೇತನ ತಾರತಮ್ಯ ನಿವಾರಣೆಗಾಗಿ ಕುಮಾರನಾಯ್ಕ ವರದಿ ಅನುಷ್ಟಾನ, ಎರಡನೇ ವೇತನ ಬಡ್ತಿ ಹಾಗೂ ಕಾಲ್ಪನಿಕ ವೇತನ ಬಡ್ತಿಗಾಗಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಇದಕ್ಕೆ ಎಲ್ಲಾ ಉಪನ್ಯಾಸಕರುಗಳು ಸಂಘಕ್ಕೆ ಬೆಂಬಲವಾಗಿರುವಂತೆ ವಿನಂತಿಸಿದರು.
ಸಂಘದ ಕಾರ್ಯಾಧ್ಯಕ್ಷ ಎಸ್.ಆರ್.ವೆಂಕಟೇಶ್, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರುಗಳಾದ ಬಿ.ಪಾಲಾಕ್ಷಿ, ಹೆಚ್.ವೆಂಕಟೇಶಲು, ನಿವೃತ್ತ ಡಿ.ಸಿ.ಪಿ.ವಿ.ತಿಮ್ಮಪ್ಪ, ಉಪನ್ಯಾಸಕರುಗಳಾದ ಎನ್.ದೊಡ್ಡಪ್ಪ ಸೇರಿದಂತೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
