ದಾವಣಗೆರೆ:
ರಾಜ್ಯ ಸರ್ಕಾರ ತಕ್ಷಣವೇ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಕಾಲ್ಪನಿಕ ವೇತನ ಮತ್ತು ನಿಶ್ಚಿತ ಪಿಂಚಣಿ ಸೌಲಭ್ಯ ಕಲ್ಪಿಸದಿದ್ದರೆ, ಬೆಳಗಾವಿಯ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಎಚ್ಚರಿಸಿದೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ, ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಹಳೇಯ ನಿಶ್ಚಿತ ಪಿಂಚಣಿಯೂ ಇಲ್ಲ ಹಾಗೂ 2006ರಿಂದ ಈಚೆಗೆ ಜಾರಿಯಾದ ವಂತಿಗೆ ಆಧಾರಿತ ಹೊಸ ಪಿಂಚಣಿ ಸೌಲಭ್ಯ ಸಹ ಇಲ್ಲವಾಗಿದೆ. ಆದ್ದರಿಂದ ನಿವೃತ್ತಿಯ ನಂತರ ಜೀವನ ಭದ್ರತೆಯ ಸಮಸ್ಯೆ ಕಾಡುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು.
ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಹಲವು ಬಾರಿ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೂ, ಯಾವುದೇ ಪ್ರಯೋಜನ ಆಗದ ಕಾರಣ ಕಳೆದ ಅಕ್ಟೋಬರ್ 11ರಿಂದ 21ರ ವರೆಗೆ ಬೆಂಗಳೂರಿನಲ್ಲಿ ಅನಿರ್ಧಿಷ್ಠಾವಧಿ ಧರಣಿ ಕೈಗೊಂಡು ಹೋರಾಟ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಮ್ಮ ಸಂಘದ ಪ್ರತಿನಿಧಿಗಳನ್ನು ಕರೆದು ಚರ್ಚಿಸಿ, ಬೇಡಿಕೆ ಈಡೇರಿಸಲು ಎಷ್ಟು ಹಣ ಬೇಕಾಗುವುದು ಎಂಬುದರ ಬಗ್ಗೆ ಹಣಕಾಸು ಇಲಾಖೆಯಿಂದ ಮಾಹಿತಿ ಪಡೆದು, ಉಪ ಚುನಾವಣೆ ನಡೆದ ಬಳಿಕ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದಾದ ಮೇಲೆ ಹಬ್ಬ ಮುಗಿಯಲಿ ಎಂದಿದ್ದರು. ಈಗ ಚುನಾವಣೆ, ಹಬ್ಬ ಸಹ ಮುಗಿದಿವೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದು ಕೊಂಡು, ಅನುದಾನಿತ ಶಾಲಾ-ಕಾಲೇಜು ನೌಕರರು ಸೇವೆಗೆ ಸೇರಿದ ದಿನವನ್ನು ಪರಿಗಣಿಸಿ ಕಾಲ್ಪನಿಕ ವೇತನ ಹಾಗೂ ಹಳೇಯ ನಿಶ್ಚಿತ ಪಿಂಚಣಿ ಯೋಜನೆ ಸೌಲಭ್ಯವನ್ನು ಕಲ್ಪಿಸದಿದ್ದರೆ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಅನುದಾನಿತ ನೌಕರರು ಅನಿರ್ಧಿಷ್ಠಾವಧಿ ಅಹೋರಾತ್ರಿ ಉಪವಾಸ ಸತ್ಯಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಮಂತ್ರೋಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮರೆಡ್ಡಿ, ಬಸವಲಿಂಗಪ್ಪ ಹುಗ್ಗಿ, ಶಾಂತಲಾದೇವಿ, ಧನ್ಯಕುಮಾರ್, ಅಂಜಿನಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
