ಬೆಂಗಳೂರು
ಕಳೆದ ವರ್ಷ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಉಟೋಪಚಾರ, ಮತ್ತಿತರ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿರುವುದಗಿ ತಮ್ಮ ಮೇಲೆ ಹೊರಿಸಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಮಗಿನ್ನೂ 10 ವರ್ಷ ಸೇವಾ ಅವಧಿ ಇದ್ದು, ವಿಧಾನಸಭೆ ಕಾರ್ಯದರ್ಶಿ ಜಾಗದಲ್ಲಿ ಬೇರೊಬ್ಬರನ್ನು ತರಲು ಉದ್ದೇಶಪೂರ್ವಕವಾಗಿ ತಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್.ಮೂರ್ತಿ ಆರೋಪಿಸಿದ್ದಾರೆ.
ಜಾತಿ ದ್ವೇಷದ ಹೆಸರಿನಲ್ಲಿ ತಮ್ಮ ವಿರುದ್ಧ ಕುತಂತ್ರ ಮಾಡಲಾಗಿದ್ದು, ಈ ಆದೇಶವನ್ನು ನ್ಯಾಯಾಲಯಲದಲ್ಲಿ ಪ್ರಶ್ನಿಸುವುದಾಗಿ ಮೂರ್ತಿ ಘೋಷಿಸಿದ್ದಾರೆ.
ವಿಧಾನಸಭೆ ಸಚಿವಾಲಯ ಅಮಾನತು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಅವರು, 2016-17 ಅಧಿವೇಶನ ಖರ್ಚುವೆಚ್ಚಗಳನ್ನು ಪರಿಶೋಧಿಸಲು ಸಿಎಜಿಗೆ ಅವಕಾಶವಿದೆ. ಆದರೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಆರ್ಥಿಕ ಇಲಾಖೆಯಿಂದ ವರದಿ ಪಡೆದಿರುವುದು ಸರಿಯಾದ ಕ್ರಮವಲ್ಲ. ಹಿಂದಿನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಂದ ಹಾಲಿ ಸಭಾಧ್ಯಕ್ಷರು ಯಾವುದೇ ಮಾಹಿತಿ ಪಡೆದಿಲ್ಲ. ಟೆಂಡರ್ ಇಲ್ಲದೇ 8.60 ಕೋಟಿ ರೂ. ವಸ್ತುಗಳನ್ನು ಖರೀದಿ ಮಾಡಿರುವುದಾಗಿ ತಮ್ಮ ಮೇಲೆ ಹೊರಿಸಿರುವುದು ಸುಳ್ಳು ಆರೋಪ ಎಂದರು.
ತಾವು ಕಾನೂನಿನ ಚೌಕಟ್ಟಿನಡಿ ಕೆಲಸ ಮಾಡಿದ್ದು, ಹಿಂದಿನ ಸಭಾಧ್ಯಕ್ಷರು ತಮ್ಮ ಮೇಲೆ ಯಾವುದೇ ಆರೋಪ ಮಾಡಿಲ್ಲ. ಈಗಿನ ಸಭಾಧ್ಯಕ್ಷ ರಮೇಶ್ ಕುಮಾರ್ ಮತ್ತು ತಮ್ಮ ಮಧ್ಯೆ ಆಡಳಿತಾತ್ಮಕ ವಿಚಾರಗಳಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಹೀಗಾಗಿ ಉದ್ದೇಶಪೂರ್ವಕವಾಗಿ ಅವರು ತಮ್ಮನ್ನು ಅಮಾನತು ಮಾಡಲಾಗಿದೆ ಎಂದರು.
ಶಾಸಕರ ಭವನದಲ್ಲಿ ಟೆಂಡರ್ ಇಲ್ಲದೇ ಸೌರ ವಿದ್ಯುತ್ ಘಟಕ ನಿರ್ಮಿಸಲು ಹೊರಟಿದ್ದು, ಇದನ್ನು ತಾವು ಪ್ರಶ್ನಿಸಿದ್ದು ಮತ್ತು ಈ ಇಡೀ ಪ್ರಕ್ರಿಯೆಯನ್ನು ಕಾನೂನು ವ್ಯಾಪ್ತಿಗೆ ತರಲು ಪ್ರಯತ್ನಿಸಿದ್ದರಿಂದ ತಮ್ಮ ಮೇಲೆ ಹಗೆತನ ಸಾಧಿಸಲಾಗಿದೆ. ಯಾವುದೇ ಅಧಿಕಾರಿಗಳನ್ನು ಅಮಾನತುಗೊಳಿಸುವ ಮುನ್ನ ನಿಯಮಾವಳಿಗಳಂತೆ ತಪ್ಪಿತಸ್ಥರಿಂದ ಮಾಹಿತಿ ಪಡೆಯಬೇಕು. ಆದರೆ ತಮ್ಮಿಂದ ಯಾವುದೇ ಮಾಹಿತಿ ಕೋರದೇ ಅಮಾನತು ಮಾಡಲಾಗಿದೆ. ಅಮಾನತು ಆದೇಶ ಪ್ರತಿಯಲ್ಲಿ ಡಿ.27 ರ ದಿನಾಂಕವನ್ನು ನಮೂದಿಸಲಾಗಿದ್ದು, ಇಂದು ತಮಗೆ ಅಧಿಸೂಚನೆ ಪ್ರತಿ ಕಳುಹಿಸಲಾಗಿದೆ ಎಂದರು.
ಡಾ.ಜಿ.ಪರಮೇಶ್ವರ್ ಈಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದು, ಸಚಿವರ ಅನುಮೋದನೆಯಿಲ್ಲದೆಯೇ ದುರುದ್ದೇಶಪೂರಕವಾಗಿ ತಮ್ಮನ್ನು ಬಲಿಪಶುಮಾಡಲಾಗಿದೆ. ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಎಸ್.ಮೂರ್ತಿ ಗಂಭೀರ ಆರೋಪ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ