ನನಗೆ ಲೋಕಸಭೆ ಟಿಕೆಟ್ ನೀಡಿ : ರೇವಣ್ಣ

ಬೆಂಗಳೂರು

        ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಮಂತ್ರಿಗಿರಿಗಾಗಿ ಯತ್ನಿಸಿ ವಿಫಲರಾದ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಇದೀಗ ಬಹಿರಂಗವಾಗಿಯೇ ತಮಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಕಾಂಗ್ರೆಸ್ ವರಿಷ್ಟರನ್ನು ಆಗ್ರಹಿಸಿದ್ದಾರೆ.

         ಸುದ್ದಿಗೋಷ್ಟಿಯಲ್ಲಿ ಕುರುಬ ಸಮುದಾಯದ ಕಾರ್ಯಕ್ರಮಗಳ ವಿವರ ನೀಡಿದ ನಂತರ ಮಾತನಾಡಿದ ಅವರು, ಇತ್ತೀಚಿನ ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಮಂತ್ರಿಯಾಗಲು ನಾನು ಬಯಸಿದ್ದೆ ಎಂದು ಹೇಳಿದರು.

        ಆದರೆ ನನಗೆ ಮಂತ್ರಿಗಿರಿ ಸಿಗಲಿಲ್ಲ. ಈ ಮಧ್ಯೆ ವಿಧಾನಪರಿಷತ್ತಿನ ಸದಸ್ಯ ಸ್ಥಾನದ ಅವಧಿಯೂ ಮುಗಿಯುತ್ತಾ ಬಂದಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ವರಿಷ್ಟರನ್ನು ಆಗ್ರಹಿಸಿದರು.

       ಮಾಗಡಿ, ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಪಕ್ಷದ ವತಿಯಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದೆ. ಕಳೆದ ಚುನಾವಣೆಯಲ್ಲಿ ಪಕ್ಷದ ವರಿಷ್ಟರ ಸೂಚನೆಯಂತೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದೆ.ಅಲ್ಲಿ ಗೆಲ್ಲಲಾಗದಿದ್ದರೂ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಕಾರಣನಾದೆ. ಇವತ್ತು ಆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಮುಖ್ಯಮಂತ್ರಿಯಾಗಿದ್ದಾರೆ.

         ಹೀಗೆ ನಿರಂತರವಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ನಾನು ದುಡಿಯುತ್ತಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಅವರು ವರಿಷ್ಟರನ್ನು ಒತ್ತಾಯ ಮಾಡಿದರು.

        ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವ ಕಾರಣಕ್ಕೂ ಅದು ಅಲುಗಾಡುವುದಿಲ್ಲ. ಅದನ್ನು ಬೀಳಿಸುತ್ತೇವೆ ಎಂದು ಯಾರಾದರೂ ಭಾವಿಸಿದರೆ ಅದು ಭ್ರಮೆ ಮಾತ್ರ ಎಂದು ಅವರು ವ್ಯಂಗ್ಯವಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ