“ಕರ್ನಾಟಕ ದರ್ಶನ” ಪ್ರವಾಸಕ್ಕೆ ಹಸಿರು ಬಾವುಟದ ಮೂಲಕ ಶಾಸಕ ಎಸ್.ವಿ.ರಾಮಚಂದ್ರ ಚಾಲನೆ

ಜಗಳೂರು :

       ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ‘ಒಂದು ರಾಜ್ಯ, ಒಂದು ಜಗತ್ತು’ ಎಂಬ ಘೋಷಣೆಯೊಂದಿಗೆ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳುವ ಅವಕಾಶ ಕಲ್ಪಿಸಿರುವುದು ಉತ್ತಮ ಯೋಜನೆಯಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

     ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಭಾನುವಾರ 2018-19 ನೇ ಸಾಲಿನ 8 ನೇ ತರಗತಿ ವಿದ್ಯಾರ್ಥಿಗಳ “ಕರ್ನಾಟಕ ದರ್ಶನ” ಪ್ರವಾಸಕ್ಕೆ ಹಸಿರು ಬಾವುಟದ ಮೂಲಕ ಚಾಲನೆ ನೀಡಿ ಶುಭ ಹಾರೈಸಿ ಮಾತನಾಡಿದರು.

       ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ.ಜಾ.ಯ 30, ಪ.ವ.ದ 19 ಹಾಗೂ ಇತರೆ ವರ್ಗದ 51 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 100 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪ್ರವಾಸ ಕೈಗೊಳ್ಳಲಿದ್ದು, 4 ದಿನಗಳ ಪ್ರವಾಸವಾಗಿರುತ್ತದೆ.

         ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದರಿಂದ ರಾಜ್ಯದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಅಂಶ ತಿಳಿಯುವುದರ ಮೂಲಕ ಮುಂದಿನ ದಿನಗಳಲ್ಲಿ ಸಂಶೋಧನೆ ಕೈಗೊಳ್ಳಲು ಅನುಕೂಲವಾಗುತ್ತದೆ. ಇಲ್ಲಿಯವರೆಗೆ ಪುಸ್ತಕದಲ್ಲಿ ಮಾತ್ರ ಓದಿ ತಿಳಿದಿದ್ದ ಸ್ಥಳಗಳಿಗೆ ಭೇಟಿ ನೀಡಿ ಅದರ ಮಹತ್ವ, ಹಿನ್ನೆಲೆ ತಿಳಿದು ಜ್ಞಾನ ಹೆಚ್ಚಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

        ಶಾಲಾ ಮಕ್ಕಳು ಹಾಗೂ ಪೋಷಕರು ಸರ್ಕಾರ ನೀಡುವ ಯೋಜನೆ ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಸರ್ಕಾರವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್, ವಿದ್ಯಾರ್ಥಿವೇತನ ಸೇರಿದಂತೆ ಹಲವು ಯೋಜನೆ ರೂಪಿಸಿ ಅನುಷ್ಟಾನಗೊಳಿಸುತ್ತಿದೆ. ಅಲ್ಲದೆ, ಶೈಕ್ಷಣಿಕ ಪ್ರವಾಸ ಸೌಲಭ್ಯ ಸಹ ಒದಗಿಸಿದೆ ಎಂದವರು ಹೇಳಿದರು.

        ಪ್ರವಾಸ ಕೈಗೊಂಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕಿಟ್ ಬ್ಯಾಗ್ ನೀಡಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿ ಯುವರಾಜ್ ನಾಯ್ಕ್, ಇಸಿಒ ಶಿವಣ್ಣ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಇ.ಸತೀಶ್, ಕಲ್ಲಿನಾಥ್, ಶಿವಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಸೋಮನಹಳ್ಳಿ ಶ್ರೀನಿವಾಸ್ ಸೇರಿದಂತೆ ಬಿಇಓ ಇಲಾಖೆ ಸಿಬ್ಬಂದಿ, ಶಿಕ್ಷಕರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link