ಕ್ರಿಯಾಯೋಜನೆ ತಯಾರಿಸದೆ ತಾರತಮ್ಯ: ಆರೋಪ

ತುರುವೇಕೆರೆ

      ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರಮೇಶ್ ನಾನು ಸರ್ಕಾರಿ ಅಧಿಕಾರಿ ಎಂಬುದನ್ನು ಮರೆತು ಬಾಣಸಂದ್ರ ಹಾಗೂ ದಂಡಿನಶಿವರ ಜಿ.ಪಂ. ಕ್ಷೇತ್ರಗಳಿಗೆ ಕಾಮಗಾರಿಯ ಕ್ರಿಯಾಯೋಜನೆ ತಯಾರಿಸದೆ ತಾರತಮ್ಯ ಮಾಡಿದ್ದಾರೆ ಎಂದು ಬಾಣಸಂದ್ರ ಜಿಪಂ ಸದಸ್ಯೆ ರೇಣುಕಕೃಷ್ಣಮೂರ್ತಿ ಆರೋಪಿಸಿದ್ದಾರೆ.

         ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕು ಬರವನ್ನು ಎದುರಿಸುತ್ತಿದ್ದು, ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತತ್ವಾರ, ಜನ- ಜಾನುವಾರುಗಳು ಸಂಕಷ್ಟಗಳನ್ನು ಎದುರಿಸಬೇಕಿದೆ. ಇಂತಹ ಸಂದರ್ಭದಲ್ಲಿ ಬಾಣಸಂದ್ರ ಜಿ.ಪಂ. ಕ್ಷೇತ್ರದ 110 ಕ್ಕೂ ಹೆಚ್ಚು ಹಳ್ಳಿಗಳ ಸಮಸ್ಯೆಗೆ ಸ್ಪಂದಿಸಿ ಕೆಲ ಅಗತ್ಯ ಕಾಮಗಾರಿಗಳ ಪಟ್ಟಿಯನ್ನು ಇಲಾಖೆ ಎಂಜಿನಿಯರ್‍ಗೆ ನೀಡಲಾಗಿತ್ತು. ಆದರೆ ಇದಾವುದನ್ನೂ 2018-19ನೇ ಸಾಲಿನ ಎನ್.ಆರ್.ಡಬ್ಲ್ಯೂಡಿಪಿ ಮತ್ತು ಎಸ್‍ಜಿಪಿ ಯೋಜನೆಯ ಕ್ರಿಯಾಯೋಜನೆಗೆ ಸೇರಿಸದೆ ಇಲಾಖೆಯ ಪ್ರಭಾರ ಎಇಇ ರಮೇಶ್, ಎಇ ರವಿಕುಮಾರ್ ಧೋರಣೆ ಅನುಸರಿಸಿದ್ದಾರೆ. ಈ ಕೂಡಲೇ ಎಇಇ ರಮೇಶ್‍ರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು

           ತುರುವೇಕೆರೆ ಕಚೇರಿಗೆ ತಿಂಗಳುಗಟ್ಟಲೆಯಾದರೂ ಬರುವುದಿಲ್ಲ. ಇನ್ನು ಕಾಮಗಾರಿಗಳ ಸ್ಥಳ ವೀಕ್ಷಣೆ ನಡೆದಿಲ್ಲ. ಹೀಗಾಗಿ 2017-18ನೇ ಸಾಲಿನಲ್ಲಿ ಕೈಗೊಂಡ ಹತ್ತಾರು ಓವರ್ ಟ್ಯಾಂಕ್‍ಗಳು ಕಳಪೆಯಿಂದ ಕೂಡಿದೆ. ಬಾಣಸಂದ್ರ ಜಿಪಂ ವ್ಯಾಪ್ತಿಯ 6 ಓವರ್ ಟ್ಯಾಂಕ್‍ಗಳಿಗೆ ಈವರೆಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಚುನಾಯಿತ ಪ್ರತಿನಿಧಿಗಳಾದ ನಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಧೋರಣೆ ಅನುಸರಿಸುತ್ತಿದ್ದಾರೆ. ಎಇಇ ಧೋರಣೆಯಿಂದಾಗಿ ಬಾಣಸಂದ್ರ ಹಾಗೂ ದಂಡಿನಶಿವರ ಜಿಪಂ ಕ್ಷೇತ್ರದ ನೂರಾರು ಹಳ್ಳಿಗಳ ಸಹಸ್ರಾರು ಜನತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲಾಡಳಿತ ಬೇರೆ ತಾಲ್ಲೂಕುಗಳಿಗೆ 25-30 ಕೋಟಿಗಳ ಕಾಮಗಾರಿಗಳನ್ನು ಅನುಮೋದಿಸಿದೆ. ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹಾಗೂ ಮಾಯಸಂದ್ರ ಜಿ.ಪಂ. ಕ್ಷೇತ್ರಕ್ಕೆ 5.00 ಕೋಟಿ ಕಾಮಗಾರಿ ಅನುಮೋದಿಸಿ ನಮ್ಮ ಕ್ಷೇತ್ರಗಳಿಗೆ ಅನ್ಯಾಯವೆಸಗಿದೆ ಎಂದು ದೂರಿದರು.

          ಉಪಮುಖ್ಯಮಂತ್ರಿಗಳಿಗೆ ಪತ್ರ: ಈ ಅಧಿಕಾರಿಗಳ ವಿರುದ್ಧ ಜಿಪಂ ಸಭೆಯಲ್ಲಿ ಮಾತನಾಡಿ ಅಧ್ಯಕ್ಷರು ಹಾಗೂ ಸಿಇಒರವರಿಗೆ ಈಗಾಗಲೇ ಲಿಖಿತ ದೂರು ನೀಡಲಾಗಿದೆ. ಉಪಮುಖ್ಯಮಂತ್ರಿಗಳಾದ ಡಾ|| ಜಿ.ಪರಮೇಶ್ ಹಾಗೂ ಇಲಾಖಾ ಸಚಿವರಿಗೆ ದೂರು ನೀಡಲಾಗುವುದು ಎಂದರು.

         ಗೋಷ್ಠಿಯಲ್ಲಿ ದಂಡಿನಶಿವರ ತಾಪಂ ಅಧ್ಯಕ್ಷೆ ನಾಗರತ್ನರವೀಂದ್ರ, ಸದಸ್ಯರಾದ ತೀರ್ಥಕುಮಾರ್‍ರವಿಕುಮಾರ್, ಹೇಮಾವತಿ ಶಿವಾನಂದ್, ತೇಜಾವತಿನಾಗೇಶ್ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link