ಮರಳು ತುಂಬುವ ಕಾರ್ಯಕ್ರಮ

ಹೊನ್ನಾಳಿ:

           ಜಿಲ್ಲಾಡಳಿತ ಮೊದಲು ಸಮರ್ಪಕವಾಗಿ ಮರಳು ವಿತರಿಸುವತ್ತ ಕ್ರಮ ಜರುಗಿಸಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.

          ಸೋಮವಾರ ಹೊನ್ನಾಳಿಯ ತುಂಗಭದ್ರಾ ನದಿಯಲ್ಲಿ ನಡೆದ ಮರಳು ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೇಲಿಮಲ್ಲೂರು ಗ್ರಾಮದ ರೈತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂಬ ಸುದ್ದಿ ತಿಳಿದು ಜನಪ್ರತಿನಿಧಿಗಳೊಡನೆ ಮಂಗಳವಾರ ಗ್ರಾಮಕ್ಕೆ ತೆರಳಿ ರೈತರು-ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

           ಹೊನ್ನಾಳಿಯಲ್ಲಿ ಐದು ಬಾರಿ ಅಧಿಕಾರಿಗಳ ಸಭೆ ನಡೆಸಿದರೂ ಆಶ್ರಯ ಮನೆಗಳ ನಿರ್ಮಾಣಕ್ಕೆ ಮರಳು ಸಕಾಲಕ್ಕೆ ಲಭಿಸದಿರುವ ಹಿನ್ನೆಲೆಯಲ್ಲಿ ಸೋಮವಾರ ಜನಸಾಮಾನ್ಯರೊಂದಿಗೆ ತುಂಗಭದ್ರಾ ನದಿಗೆ ಇಳಿದು ಮರಳು ತುಂಬಬೇಕಾಯಿತು. ಆದ್ದರಿಂದ, ಮರಳು ಸುಲಭವಾಗಿ ಜನರಿಗೆ ಲಭಿಸುವಂತೆ ಜಿಲ್ಲಾಡಳಿತ ಹಾಗೂ ಇತರ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

          ಜನರು ಮೊದಲು ಒಗ್ಗಟ್ಟಿನಿಂದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸರಕಾರದ ಮರಳು ನೀತಿ ಏನೇ ಇರಲಿ, ಮೊದಲು ಬಡವರಿಗೆ ಮರಳು ಕಡಿಮೆ ದರದಲ್ಲಿ ದೊರೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಹೋರಾಟ ಮಾಡಿದ್ದೇನೆ. ನನ್ನ ಜನರಿಗಾಗಿ ನಾನು ಜೈಲಿಗೆ ತೆರಳಲೂ ಸಿದ್ಧ ಎಂದು ತಿಳಿಸಿದರು.

          ಹೊನ್ನಾಳಿ ವಿಧಾನಸಭಾ ಕ್ಷೇತ್ರದ ನ್ಯಾಮತಿ ಮತ್ತು ಹೊನ್ನಾಳಿ ವ್ಯಾಪ್ತಿಯ ತುಂಗಭದ್ರಾ ನದಿ ಪಾತ್ರದ ಮರಳು ಬ್ಲಾಕ್‍ಗಳಲ್ಲಿ ಹೇರಳ ಮರಳು ಸಂಪತ್ತಿದೆ. ಎಲ್ಲಾ ಬ್ಲಾಕ್‍ಗಳನ್ನು ಜಿಲ್ಲಾಡಳಿತ ಸರಕಾರ ಜನತೆಯ ಹಿತ ಕಡೆಗಣಿಸಿ ಟೆಂಡರ್‍ದಾರರಿಗೆ ಹೆಚ್ಚಿನ ಬಿಡ್‍ಗೆ ಪರವಾನಗಿ ನೀಡಿದೆ. ಇದರಿಂದ ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮರಳು ಬೇರೆ ಬೇರೆ ಜಿಲ್ಲೆಗಳಿಗೆ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದೆ. ಹಾಗಾಗಿ, ಎರಡೂ ತಾಲೂಕುಗಳ ಆಶ್ರಯ ಫಲಾನುಭವಿಗಳಿಗೆ, ಸಾಮಾನ್ಯ ಜನತೆಗೆ, ಸರಕಾರಿ ಕಾಮಗಾರಿಗಳಿಗೆ ಮರಳು ದೊರೆಯದಂತಾಗಿದೆ ಎಂದರು.

ಆಗ್ರಹ:

        ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರಕಾರ ಘೋಷಿಸಬೇಕು. ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.

          ಜಿಪಂ ಸದಸ್ಯ ಸಿ. ಸುರೇಂದ್ರನಾಯ್ಕ, ತಾಪಂ ಉಪಾಧ್ಯಕ್ಷ ರವಿಕುಮಾರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಕೆರೆ ಎ.ಎಂ. ನಾಗರಾಜ್, ಎಪಿಎಂಸಿ ನಿರ್ದೇಶಕ ಕೆ.ಪಿ. ಕುಬೇರಪ್ಪ, ತುಳಕಿ ಹಾಲೇಶಪ್ಪ ಸೇರಿದಂತೆ ಗ್ರಾಮಸ್ಥರು, ರೈತರು, ಅನೇಕ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap