ತುಮಕೂರು
ತುಮಕೂರು ನಗರದಲ್ಲಿ ಬೀಡಾಡಿ ಹಂದಿಗಳ ಹಾವಳಿ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಮತ್ತೆ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಸೋಮವಾರ ಆರಂಭಿಸಿದೆ.
ಪಾಲಿಕೆಯ ಆಯುಕ್ತ ಟಿ.ಭೂಪಾಲನ್ ಅವರ ಸೂಚನೆ ಮೇರೆಗೆ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಪೊಲೀಸ್ ಬೆಂಗಾವಲಿನೊಂದಿಗೆ ಸೋಮವಾರ ಬೆಳಗ್ಗೆ ನಗರದ ವಿವಿಧೆಡೆ ದಿಢೀರನೆ ಕಾರ್ಯಾಚರಣೆ ಕೈಗೊಂಡರು. ಚಿಕ್ಕನಾಯಕನಹಳ್ಳಿಯಿಂದ ಹಂದಿ ಹಿಡಿಯುವವರ ತಂಡವೊಂದನ್ನು ಕರೆಸಿದ್ದು, ಆ ತಂಡವು ಪಾಲಿಕೆ ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿತು.
ನಗರದ ಎಸ್.ಐ.ಟಿ. ಬಡಾವಣೆಯ ದೋಭಿಘಾಟ್ ಸುತ್ತಮುತ್ತ, ಬಟವಾಡಿ ಬಳಿಯ ಅಕ್ಕತಂಗಿ ಕೆರೆ ಆಸುಪಾಸು, ಬಟವಾಡಿ ಪ್ರದೇಶ, ಅಲ್ಲೇ ಸಮೀಪದ ಮಹಾಲಕ್ಷ್ಮೀ ನಗರ ಮೊದಲಾದೆಡೆ ಸೋಮವಾರ ಬೀಡಾಡಿ ಹಂದಿಗಳನ್ನು ಹಿಡಿದು ಸಾಗಿಸಲಾಯಿತು. ಮಧ್ಯಾಹ್ನ 12-30 ರ ಹೊತ್ತಿಗೆ ಸುಮಾರು 60 ಬೀಡಾಡಿ ಹಂದಿಗಳನ್ನು ಹಿಡಿಯಲಾಗಿತ್ತು. ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್, ಆರೋಗ್ಯ ನಿರೀಕ್ಷಕರುಗಳಾದ ನಟೇಶ್, ಹೃತಿಕ್, ಷಡಕ್ಷರಿ, ಸಚಿನ್, ಚಿಕ್ಕಸ್ವಾಮಿ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಪಾಲಿಕೆ ವತಿಯಿಂದ ಈ ಕಾರ್ಯಾಚರಣೆ ನಡೆಯಲಿದೆಯೆಂಬ ಸುಳಿವನ್ನು ಅದು ಹೇಗೋ ಪಡೆದುಕೊಂಡ ಕೆಲವು ಹಂದಿ ಸಾಕಾಣಿಕೆದಾರರು ತಕ್ಷಣವೇ ಎಚ್ಚೆತ್ತುಕೊಂಡು ನಗರದ ಬನಶಂಕರಿ ಬಡಾವಣೆ, ಶಾಂತಿನಗರ ಮೊದಲಾದೆಡೆ ತಮಗೆ ಸೇರಿದ ಬೀಡಾಡಿ ಹಂದಿಗಳನ್ನು ತಾವೇ ಹಿಡಿದು ಒಯ್ದರೆಂದು ಹೇಳಲಾಗಿದೆ.