ಹುಳಿಯಾರು
ಕಳೆದ ನಾಲ್ಕು ತಿಂಗಳಿಂದಲೂ ಪಪಂನಿಂದ ನೌಕರರಿಗೆ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಹುಳಿಯಾರು ಪಪಂ ನೌಕರರು ಕೆಲಸ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಪಪಂ ಸೇರಿದ ಸುಮಾರು 40 ಕ್ಕೂ ಹೆಚ್ಚು ಪೌರಕಾರ್ಮಿಕರು ಹಾಗೂ ನೌಕರರು ಪಂಚಾಯ್ತಿ ಕಚೇರಿ ಮುಂದೆ ಸಂಬಳಕ್ಕೆ ಒತ್ತಾಯಿಸಿ ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಭಾವಚಿತ್ರವಿಟ್ಟುಕೊಂಡು ಪ್ರತಿಭಟನೆ ಆರಂಭಿಸಿದ್ದು, ಅಧ್ಯಕ್ಷೆ ಗೀತಾ ಪ್ರದೀಪ್, ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಎಲ್.ಆರ್. ಚಂದ್ರಶೇಖರ್, ರಾಘವೇಂದ್ರ ಮತ್ತಿತರರಿಂದ ಧರಣಿನಿರತರಿಗೆ ಬೆಂಬಲ ಸೂಚಿಸಿದರು.
ಅಲ್ಲದೆ ತಾಲ್ಲೂಕು ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಮ್ಮ ಬೆಂಬಲ ಸೂಚಿಸಿದ್ದು ಸೋಮವಾರ ಸಂಬಳ ನೀಡದಿದ್ದರೆ ಪ್ರತಿಭಟನೆ ಇನ್ನಷ್ಟು ಜೋರಾಗುವ ಸೂಚನೆಗಳಿವೆ. ಈ ನಿಟ್ಟಿನಲ್ಲಿ ಧರಣಿ ಸ್ಥಳದಲ್ಲೇ ಸೋಮವಾರದಿಂದ ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ತಾಲ್ಲೂಕು ಡಿಎಸ್‍ಎಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಅವರು ಘೋಷಿಸಿದರು.
ಧರಣಿ ಸ್ಥಳಕ್ಕೆ ಆಡಳಿತಾಧಿಕಾರಿ ಮಂಜುನಾಥ್ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಗ್ರಾಮ ಪಂಚಾಯಿತಿಯಾಗಿದ್ದ ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಗೊಂಡಿವೆ. ಆದರೆ ಗ್ರಾಮ ಪಂಚಾಯಿತಿಯಲ್ಲಿದ್ದ ನೌಕರರ ಪಟ್ಟಿ ಅರ್ಬನ್ ಡೆವಲಪ್ಮೆಂಟ್ ಇಲಾಖೆಯಿಂದ ಅಧಿಕೃತವಾಗಿ ಅನುಮೋದನೆಗೊಂಡಿಲ್ಲದಿರುವುದರಿಂದ ನೌಕರರ ಸಂಬಳ ಕೊಡಲು ಸಮಸ್ಯೆ ಎದುರಾಗಿದೆ ಎಂದು ಸ್ಪಷ್ಟಪಡಿಸಿದರು.
ಪಪಂ ಅಧ್ಯಕ್ಷೆ ಗೀತಾಪ್ರದೀಪ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಗ್ರಾಪಂ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪೂರಾ ಸಂಬಳ ಕೊಟ್ಟಿದ್ದೇನೆ. ಈಗ ಪಪಂ ಆಗಿ ಮೇಲ್ದರ್ಜೆಗೇರಿ ಒಂದು ವರ್ಷವಾಗಿದ್ದರೂ ಸಹ ಇನ್ನೂ ಅನುದಾನ ಬಾರದಿರುವುದು, ಸಂಬಂಧಪಟ್ಟ ನಗರಾಭಿವೃದ್ಧಿ ಇಲಾಖೆಯಾಗಲಿ ಅಥವಾ ಜಿಲ್ಲಾಧಿಕಾರಿಗಳಾಗಲಿ ಅಥವಾ ಇನ್ನಿತರೆ ಅಧಿಕಾರಿಗಳಾಗಲಿ ಗಮನ ಹರಿಸದಿರುವುದೇ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಿದರು.
ಗ್ರಾಪಂನಲ್ಲಿದ್ದ ನಮ್ಮನ್ನು ಪಪಂಗೆ ಅಧಿಕೃತವಾಗಿ ಅನುಮೋದನೆ ಮಾಡದಿದ್ದರೂ ನಮ್ಮಿಂದ ದಿನನಿತ್ಯ ಕೆಲಸ ಪಡೆದು ಇದೀಗ ಸಂಬಳ ಕೊಡುವ ಸಮಯದಲ್ಲಿ ನಮ್ಮ ಇಲಾಖೆಗೆ ಸೇರ್ಪಟ್ಟಿಲ್ಲ ಎಂದು ಹೇಳುವುದು ತರವಲ್ಲ. ನಿಮ್ಮ ಕಾನೂನಾತ್ಮಕ ಸಮಸ್ಯೆಗೂ ನಮಗೂ ಸಂಬಂಧವಿಲ್ಲ. ಸೋಮವಾರದವರೆವಿಗೂ ಕಾಯುತ್ತೇವೆ ಅಷ್ಟರಲ್ಲಿ ಸಮಸ್ಯೆ ಪರಿಹರಿಸಿ ಸಂಬಳ ಕೊಡದಿದ್ದರೆ ಕೆಲಸ ಸ್ಥಗಿತಗೊಳಿಸಿ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್ಚರಿಸಿ ಧರಣಿ ಹಿಂಪಡೆದರು.