ದಾವಣಗೆರೆ :
ಸೂರ್ಯ-ಚಂದ್ರ ಇರುವ ವರೆಗೂ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಮೀಸಲಾತಿಯ ಅವಶ್ಯಕತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೂವಿನಮಡು ಅಂಜಿನಪ್ಪ ತಿಳಿಸಿದ್ದಾರೆ.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ . ಬಿ . ಆರ್ . ಅಂಬೇಡ್ಕರ್ ಅವರ 62ನೇ ಪರಿನಿಬ್ಬಾಣ ದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ತುಳಿತಕ್ಕೆ ಒಳಗಾಗಿದ್ದ ಸಮುದಾಯಗಳ ಅದೆಷ್ಟೋ ಜನರು ಇನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಆದರೆ, ಕೆಲ ಸಂವಿಧಾನ ವಿರೋಧಿಗಳು ಮೀಸಲಾತಿಯನ್ನು ರದ್ದು ಪಡಿಸುವ, ಮರು ಪರಿಶೀಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಡಾ.ಅಂಬೇಡ್ಕರ್ ಅವರ ಕನಸಿನಂತೆ ತಳ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ, ಸೂರ್ಯ-ಚಂದ್ರ ಇರುವ ವರೆಗೂ ಮೀಸಲಾತಿಯ ಅವಶ್ಯಕತೆ ಇದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಆಶಯದಂತೆ ಎಲ್ಲಾ ಜಾತಿ, ಧರ್ಮಿಯರು ಸಮಾನವಾಗಿ ಬಾಳುವಂತೆ ಮಾಡುವ ಮಹತ್ತರ ಜವಾಬ್ದಾರಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೇಲಿದೆ ಎಂದರು.
ಸಮಿತಿಯ ರಾಜ್ಯ ಸಂಚಾಲಕ ಕಬ್ಬಳ್ಳಿ ಮೈಲಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮನ್ನು ಅಗಲಿ ಇಂದಿಗೆ 62 ವರ್ಷಗಳು ಕಳೆದಿವೆ. ಆದರೆ, ಅವರ ಆಶಯದಂತೆ ಇನ್ನೂ ಮೀಸಲಾತಿ ಹಂಚಿಕೆ ಆಗದಿರುವುದು ಇಂದು ಸಮಾಜದಲ್ಲಿರುವ ಅಸಮಾನತೆಗೆ ಕಾರಣವಾಗಿದೆ. ಹೀಗಾಗಿ ಅವರ ಆಶಯವನ್ನು ಸಾಕಾರಗೊಳಿಸಬೇಕಾದರೆ, ಸಂಘಟಿತ ಹೋರಾಟ ಅವಶ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಪುಣಭಗಟ್ಟೆ ನಿಂಗಪ್ಪ, ಕೊಡಗನೂರು ಲಕ್ಷ್ಮಣ್, ಗುಮ್ಮನೂರು ರಾಮಚಂದ್ರಪ್ಪ, ಆನಗೋಡು ಪ್ರಶಾಂತ್, ಲೋಕಿಕೆರೆ ಕರಿಯಪ್ಪ, ವಾಸುದೇವ್ ಗಾಂಧಿನಗರ, ಕಬ್ಬಳ್ಳಿ ಪರಸಪ್ಪ, ನಾಗನೂರು ರಾಜು, ಬೇತೂರ್ ಕುಮಾರ್, ಕೊಲ್ಕುಂಟೆ ಚಂದ್ರಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
