ದುರ್ಗಕ್ಕೆ ರೈಲು ಭಾಗ್ಯ ತಂದು ಕೊಟ್ಟ ಷರೀಫ್

ಚಿತ್ರದುರ್ಗ;

       ಕಾಂಗ್ರೆಸ್‍ನ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಅವರ ನಿಧನ ಕೋಟೆನಾಡಿನ ಜನರಲ್ಲಿ ತೀವ್ರ ನೋವು ತರಿಸಿದೆ. ಹಿರಿಯ ನಾಯಕನ ಅಗಲಿಕೆಯ ವಿಚಾರ ತಿಳಿದು ಕೋಟೆನಾಡು ಶೋಕಾಚರಣೆಯಲ್ಲಿ ಮುಳುಗಿದೆ.

        ಕೇಂದ್ರ ರೈಲ್ವೆ ಸಚಿವರಾಗಿದ್ದ ಅವರು ತವರು ಜಿಲ್ಲೆ ಚಿತ್ರದುರ್ಗಕ್ಕೆ ರೈಲು ಸಂಚಾರದ ಭಾಗ್ಯ ತಂದುಕೊಟ್ಟಿದ್ದರು. ಅವರ ಕಾಲದಲ್ಲಿಯೇ ಕರ್ನಾಟಕದಲ್ಲಿ ರೈಲ್ಚೆ ಕ್ಷೇತ್ರ ಸಾಕಷ್ಟು ಪ್ರಗತಿ ಕಂಡಿದೆ. ಸುಧಾರಣೆಯೂ ಆಗಿದೆ.

       1993 ನವಂಬರ್ 3ರಂದು ಚಳ್ಳಕೆರೆ ತಾಲ್ಲೂಕಿನ ಪುಟ್ಟಹಳ್ಳಿಯೊಂದರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಸಿ.ಕೆ.ಜಾಫರ್ ಷರೀಫ್, ತಮ್ಮ ಸಾಮಾಜಿಕ ಕಾಳಜಿ, ಬದ್ದತೆ ಮತ್ತು ರಾಜಕೀಯ ಪ್ರಬುಧ್ದ ನಡೆಯಿಂದಾಗಿ ದೆಹಲಿಯ ಮಟ್ಟದವರೆಗೂ ದೊಡ್ಡ ಮಟ್ಟದ ನಾಯಕರಾಗಿ ಬೆಳೆದವರು.

       ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೂಲಕ ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ತಮ್ಮ ರಾಜಕೀಯ ಜೀವನ ಶುರುವಿಟ್ಟುಕೊಂಡಿದ್ದ ಷರೀಫ್ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಗೆದ್ದು ಕೇಂದ್ರದಲ್ಲಿ ರಾಜಕೀಯವಾಗಿ ಪ್ರಬಲರಾದರು.
ಕಾಂಗ್ರೆಸ್ ವಿಭಜನೆಯಾದಾಗ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ ಅಧಿಕಾರವಹಿಸಿಕೊಂಡ ಜಾಫರ್ ಷರೀಫ್ ಅವರು, ರಾಜ್ಯದಲ್ಲಿ ರೈಲ್ವೆಯ ಗೇಜ್ ಮಾರ್ಪಾಡು ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಶಿಮೂಶ ಸಂತಾಪ;

       ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‍ನ ಹಿರಿಯ ಧುರೀಣ ಸಿ.ಕೆ. ಜಾಫರ್ ಷರೀಷ್ ಅವರ ನಿಧನಕ್ಕೆ ಚಿತ್ರದುರ್ಗ ಶ್ರೀಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.

       ಶ್ರೀಮಠದೊಂದಿಗೆ ನಿಕಟಸಂಪರ್ಕವನ್ನು ಇಟ್ಟುಕೊಂಡಿದ್ದ ಷರೀಫ್ ಅವರನ್ನು ಕಳೆದ ವರ್ಷ ಶ್ರೀಮಠದಿಂದ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರು ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಚಿತ್ರದುರ್ಗ ಭಾಗಕ್ಕೆ ರೈಲ್ವೆ ಯೋಜನೆಯನ್ನು ಜಾರಿಗೊಳಿಸಿದ್ದರು ಎಂದು ಶ್ರೀಗಳು ಸ್ಮರಿಸಿದ್ದಾರೆ

ಕಾಂಗ್ರೆಸ್ ಮುಖಂಡರ ಸಂತಾಪ;

        ಕೇಂದ್ರದ ಮಾಜಿ ರೈಲ್ವೆ ಮಂತ್ರಿ ಸಿ.ಕೆ.ಜಾಫರ್‍ಷರೀಫ್‍ರವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಭೀಮಸಮುದ್ರದ ವರ್ತಕರಾದ ಜಿ.ಎಸ್.ಮಂಜುನಾಥ್‍ರವರು ತೀವ್ರ ಸಂತಾಪ ಸೂಚಿಸಿದ್ದಾರೆ.

       ಕಾಂಗ್ರೆಸ್‍ನಲ್ಲಿ ತಳಹಂತದಿಂದ ಪಕ್ಷಕ್ಕಾಗಿ ಸೇವೆ ಸಲ್ಲಿಸಿ ಕೇಂದ್ರ ಮಂತ್ರಿಯಾಗಿದ್ದ ಸಿ.ಕೆ.ಜಾಫರ್‍ಷರೀಫ್‍ರವರ ಕಾಳಜಿಯೇ ರಾಯದುರ್ಗ-ಚಿತ್ರದುರ್ಗ ರೈಲು ಮಾರ್ಗಕ್ಕೆ ಕಾರಣ. ನಮ್ಮ ತಂದೆಯವರಾದ ಮಾಜಿ ಶಾಸಕ ಡಿ.ಶಿವಪ್ಪನವರ ಜೊತೆ ಆತ್ಮೀಯ ಒಡನಾಡಿಯಾಗಿದ್ದರಲ್ಲದೆ ನಮ್ಮ ಕುಟುಂಬದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು ಎಂದು ಸ್ಮರಿಸಿಕೊಂಡ ಜಿ.ಎಸ್.ಮಂಜುನಾಥ್‍ ರವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಸೇತುರಾಮ್ ಕಂಬನಿ;

       ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ.ಸೇತುರಾಮ್ ಅವರ ತೀವ್ರ ಸಂತಾಪ ಸೂಚಿಸಿದ್ದಾರೆ

      ಷರೀಫ್ ಅವರು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜಿಲ್ಲೆಗೂ ರೈಲ್ವೆ ಸಂಚಾರದ ವ್ಯವಸ್ಥೆ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap