ನವದೆಹಲಿ
ಪಕ್ಷದ ನಿರ್ಣಯದಿಂದ ಅಸಮಾಧಾನಗೊಂಡಿದ್ದರೆ ಬಿಜೆಪಿ ಬಿಟ್ಟು ತೊಲಗಿ ಎಂದು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಹೇಳಿದ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇಂದು ನಡೆದ ಸಮಾವೇಶದಲ್ಲಿ ಪಾಲ್ಗೊಂಡಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರ ನಡೆ ಪಕ್ಷದ ನಾಯಕರನ್ನು ಮತ್ತಷ್ಟು ಕೆರಳಿಸಿದೆ.
ಇಂದು ಪಶ್ಚಿಮ ಬಂಗಾಳದಲ್ಲಿ ಆಯೋಜಿಸಿರುವ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶದಲ್ಲಿ ಶತ್ರುಘ್ನ ಸಿನ್ಹಾ ಪಾಲ್ಗೊಂಡು ಸ್ವಪಕ್ಷ ಬಿಜೆಪಿಗೆ ಸವಾಲೆಸೆದಿದ್ದಾರೆ.
ಯಶವಂತ ಸಿನ್ಹಾ, ಅರುಣ ಶೌರಿ ಹಾಗೂ ಇನ್ನಿತರ ನಾಯಕರ ಸಮ್ಮುಖದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ನಿಜ ಮಾತನಾಡುವುದು ಬಂಡಾಯ ಎಂದು ಪರಿಗಣಿಸುವುದಾದರೆ, ನಾನು ಬಂಡಾಯ ಎದ್ದಿದ್ದೇನೆ. ಈ ಕುರಿತು ದೇಶದ ಜನರಿಗೆ ಉತ್ತರಿಸುತ್ತೇನೆ ಎಂದರು.
ನಾನು ಕೇವಲ ಕನ್ನಡಿ ತೋರಿಸಲು ಪಯತ್ನಿಸಿದ್ದೇನೆ. ಆದರೆ, ಅದನ್ನು ಬಂಡಾಯ ಎಂದು ಪರಿಗಣಿಸಿ ಪಕ್ಷದಿಂದ ತೆಗೆದು ಹಾಕಿದರೆ ನಾನು ಹೊರಹೋಗಲು ಸಿದ್ಧ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿನ್ಹಾ ಅವರ ಹೇಳಿಕೆಯನ್ನು ಬಿಜೆಪಿಯ ಕೆಲ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಪಕ್ಷದ ವರಿಷ್ಠರು ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿಯ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ವಾಜಪೇಯಿ ಸರ್ಕಾರದಲ್ಲಿ ಶತ್ರುಘ್ನ ಸಿನ್ಹಾ ಅವರು ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ್ದ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಮಸೂದೆ ಸೇರಿದಂತೆ ಇನ್ನಿತರ ನಿರ್ಣಯಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.
ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಆಯೋಜಿಸಿರುವ ಸಮಾವೇಶವನ್ನು”ಅವಕಾಶವಾದಿ ರಾಜಕೀಯ” ಎಂದು ರೂಡಿ ಟೀಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/09/shatrughan-sinha-759.gif)