ದಾವಣಗೆರೆ
ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್‍ದಾರರಿಗೆ ಆರೋಗ್ಯ ವಿಮೆ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ್ ಯೋಜನೆಯನ್ನೆನೋ ಅನುಷ್ಠಾನಗೊಳಿಸಿದೆ. ಆದರೆ, ಕೆಲ ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿ ಚಿಕಿತ್ಸೆ ಸಿಗದಿರುವ ಕಾರಣ ರೋಗಿಗಳು ಹಾಗೂ ಅವರ ಸಿಬ್ಬಂದಿಗಳು ಕಂಗಾಲಾಗಿ ಹೋಗಿದ್ದಾರೆ.
ಹೌದು… ದಾವಣಗೆರೆ ತಾಲೂಕಿನ ಮಳಲಕೆರೆ ಗ್ರಾಮದ ಬಸವಾಚಾರ್ ಎಂಬುವರು ತೀವ್ರ ರಕ್ತ ವಾಂತಿಯಿಂದ ಬಳಲುತ್ತಿದ್ದ ಕಾರಣ ಇಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಸರಿಯಾದ ಚಿಕಿತ್ಸೆ ಹಾಗೂ ವೈದ್ಯರ ಆರೈಕೆ ಸಿಗದ ಕಾರಣ ರಕ್ತ ವಾಂತಿ ಮತ್ತೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಅವರನ್ನು ಗುರುವಾರ ಅಲ್ಲೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡುವಂತೆ ಪರಿಪರಿಯಾಗಿ ಬೇಡಿದರೂ ಚಿಕಿತ್ಸೆ ದೊರೆಯದಿರುವುದು ಬೆಳಕಿಗೆ ಬಂದಿರುವುದೇ ಆಯುಷ್ಮಾನ್ ಭಾರತ್‍ಗೆ ಆಸ್ಪತ್ರೆಗಳ ಸ್ಪಂದನೆ ದೊರೆಯ ದಿರುವುದಕ್ಕೆ ಉತ್ತಮ ನಿದರ್ಶನವಾಗಿದೆ.
ಬಸವಾಚಾರ್ ಅವರನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗಾಗಿ ದಾಖಲಿಸಿದ್ದರೂ, ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಮಾಡಬೇಕಿದ್ದ ವೈದ್ಯರು ಹಾಗೂ ಆಡಳಿತ ಮಂಡಳಿ ಬಡ ರೋಗಿ ಬಸವಾಚಾರ್ ಕುಟುಂಬದ ಸದಸ್ಯರಿಂದ 15 ಸಾವಿರ ಹಣ ಕಟ್ಟಿಸಿಕೊಂಡಿದ್ದಾರೆ. ಅಲ್ಲದೆ, ಇನ್ನು ಹೆಚ್ಚಿನ ಚಿಕಿತ್ಸೆಗೆ ಹಣ ಪಾವತಿಸಬೇಕೆಂದು ಹೇಳಿದ್ದಾರೆ.
ಆಸ್ಪತ್ರೆ ಸಿಬ್ಬಂದಿಗಳು ದುಡ್ಡು ಕಟ್ಟುವಂತೆ ಸೂಚನೆ ನೀಡಿದ್ದನ್ನು ಕೇಳಿ, ಬಡ ರೋಗಿ ಬಸವಚಾರ್ ಅವರ ಕುಟುಂಬದ ಸದಸ್ಯರಿಗೆ ದಿಕ್ಕೆ ತೋಚದಂತಾಗಿದೆ. ಇದ್ದ ಹಣವನ್ನು ಆಸ್ಪತ್ರೆಗೆ ಪಾವತಿಸಿದ್ದ ರೋಗಿಯ ಸಂಬಂಧಿಕರ ಬಳಿ ಹಣ ಇರಲಿಲ್ಲ. ನಮ್ಮ ಬಳಿ ಹಣವಿಲ್ಲ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಿ ಎಂಬುದಾಗಿ ಪರಿ, ಪರಿಯಾಗಿ ಬೇಡಿದರೂ ಸಹ ಚಿಕಿತ್ಸೆ ನೀಡಲಿಲ್ಲ ಎಂದು ರೋಗಿಯ ಸಂಬಂಧಿ ವೀಣಾ ಆರೋಪಿಸಿದರು.
ಆಸ್ಪತ್ರೆಯವರು ಹಣ ಪಾವತಿಸಿ ಇಲ್ಲ ರೋಗಿಯನ್ನು ಕರೆದುಕೊಂಡು ಹೋಗಿ ಎಂಬುದಾಗಿ ಹೇಳಿದ್ದರಿಂದ ದಿಕ್ಕು ತೋಚದಂತಾದ ರೋಗಿ ಸಂಬಂಧಿಕರು ಯೂರಿನ್ ಪೈಪ್ ಅಳವಡಿಕೆ ಮಾಡಿದ ರೋಗಿಯನ್ನು ಆಟೋದಲ್ಲಿ ಕೂರಿಸಿಕೊಂಡು, ಜಿಲ್ಲಾಡಳಿತದ ಮೊರೆ ಹೋದರು.
ಇವರ ಸಮಸ್ಯೆಯನ್ನು ಆಲಿಸಿದ ಹಾಗೂ ರೋಗಿಯ ಪರಿಸ್ಥಿತಿಯನ್ನು ಗಮನಿಸಿದ ಅಪರ ಜಿಲ್ಲಾಧಿಕಾರಿ ಪದ್ಮ ಬಸಂತಪ್ಪನವರು ಜಿಲ್ಲಾಸ್ಪತ್ರೆಯ ಅಧೀಕ್ಷಕರಿಗೆ ಫೋನಾಯಿಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಬಸವಾಚಾರ್ ಅವರನ್ನು ಮರಳಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು
ಕೇಂದ್ರ ಸರ್ಕಾರವು ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯ ವಿಮೆ ಯೋಜನೆಯಡಿ ಸುಮಾರು 5 ಲಕ್ಷದ ವರೆಗೆ ಚಿಕಿತ್ಸೆ ನೀಡಲು ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅಡಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಆರಂಭಿಸಿದ್ದು, ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಚಿಕಿತ್ಸೆ ಕೊಡಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ, ಈ ಯೋಜನೆಯಡಿಯಲ್ಲಿ ಕಾನ್ಸರ್‍ಗೆ ಕೀಮೋಥೆರೆಪಿ ಚಿಕಿತ್ಸೆ, ಕಾರ್ಡಿಯಾಲಜಿ ಶಸ್ತ್ರ ಚಿಕಿತ್ಸೆ, ನ್ಯೂರೋ ಸರ್ಜರಿ ಸೇರಿದಂತೆ ಒಟ್ಟು 1,354 ಬಗೆಯ ಕಾಯಿಲೆಗಳಿಗೆ ವೈದ್ಯಕೀಯ ಸೇವೆ ನೀಡುವ ಸದುದ್ದೇಶ ಹೊಂದಿದೆ. ಆದರೆ, ಕೆಲ ಆಸ್ಪತ್ರೆಗಳ ಅಸಹಕಾರದಿಂದ ಈ ಯೋಜನೆಯೂ ಹಳ್ಳ ಹಿಡಿಯುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
