ಚಿತ್ರದುರ್ಗ:
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸುತ್ತಿರುವುದು ಅನಿವಾರ್ಯ. ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿ ವಿರೋಧಿಗಳಿಗೆ ಅನುಕೂಲ ಮಾಡುವ ಕೆಲಸವಾಗಬಾರದು. ಈ ವಿಚಾರವನ್ನು ಎ.ಐ.ಸಿ.ಸಿ.ಯುವ ನೇತಾರ ರಾಹುಲ್‍ಗಾಂಧಿ ಗಮನಕ್ಕೆ ತಂದಿದ್ದೇವೆ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಶಿವಮೂರ್ತಿನಾಯ್ಕ ಹೇಳಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ವರ್ಷದಿಂದ ಚಿತ್ರದುರ್ಗ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದೇನೆ. ಶಾಸಕನಾಗಿ, ಅಬಕಾರಿ ಸಚಿವನಾಗಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಾಕಷ್ಟು ರಾಜಕೀಯದಲ್ಲಿ ಪಳಗಿದ್ದೇನೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ನನಗೆ ಟಿಕೇಟ್ ನೀಡುವಂತೆ ವರಿಷ್ಟರಲ್ಲಿ ಮನವಿ ಮಾಡಿದ್ದೇನೆ ಎಂದರು.
ಅಲೆಮಾರಿ, ಅರೆಅಲೆಮಾರಿ, ಆದಿವಾಸಿಗಳು, ಹಿಂದುಳಿದ ವರ್ಗಗಳ ನಿಯೋಗದೊಂದಿ ರಾಹುಲ್‍ಗಾಂಧಿಯನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಭಾರತದಲ್ಲಿ ದಾಖಲೆ ಇಲ್ಲದ ಗ್ರಾಮಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡಿ ಮೂಲಭೂತ ಸೌಲಭ್ಯಗಳನ್ನು ಅಖಿಲ ಭಾರತ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸುವಂತೆ ಆಗ್ರಹಿಸಿದ್ದೇವೆ. ಪ್ರತ್ಯೇಕ ನಿಗಮ ರಚಿಸಿ. ಕ್ರಿಯಾ ಯೋಜನೆ ಇಲ್ಲವೇ ಪ್ಯಾಕೇಜ್ ರೂಪದಲ್ಲಾದರೂ ಅನುಕೂಲ ಕಲ್ಪಸಿ. ಹಿಂದುಳಿದವರಿಗೂ ಪ್ರತ್ಯೇಕ ಸಚಿವಾಲಯ ಕೊಡಬೇಕು. ಪ್ರಗತಿಪರ ಚಿಂತನೆಯುಳ್ಳ ಪಕ್ಷ ಕಾಂಗ್ರೆಸ್‍ನಿಂದ ಮಾತ್ರ ಅಲೆಮಾರಿ, ಅರೆಅಲೆಮಾರಿ, ಆದಿವಾಸಿಗಳು, ಹಿಂದುಳಿದವರ ಬದುಕು ಸುಧಾರಣೆಯಾಗಲು ಸಾಧ್ಯ ಎಂದು ತಿಳಿಸಿದರು.
ವಾಸಿಸುವವನೇ ನೆಲದೊಡೆಯೇ ಎಂಬ ಕಾನೂನು ಜಾರಿಗೆ ತರಬೇಕು. ಗುಲ್ಬರ್ಗಕ್ಕೆ ರಾಹುಲ್‍ಗಾಂಧಿ ಬರುತ್ತಾರೆ. ಅಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಇವರುಗಳೆಲ್ಲಾ ಇರುತ್ತಾರೆ ಅಲ್ಲಿ ಹೋಗಿ ನಮ್ಮ ಬೇಡಿಕೆಗಳನ್ನು ಮಂಡಿಸಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್.ಸೇರಿಕೊಂಡು ಮ್ಯಾಚ್‍ಫಿಕ್ಸಿಂಗ್ ಮಾಡಿಕೊಂಡರೆ ಎದುರಾಳಿಗಳಿಗೆ ಗೆಲುವು ಸುಲಭವಾಗಲಿದೆ ಎನ್ನುವುದನ್ನು ಕಾರ್ಯಕರ್ತರು ರಾಹುಲ್‍ಗಾಂಧಿಗೆ ಮನವರಿಕೆ ಮಾಡಲಿದ್ದಾರೆ. ಅಲೆಮಾರಿ, ಅರೆಅಲೆಮಾರಿ, ಆದಿವಾಸಿಗಳು, ಹಿಂದುಳಿದವರ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿ ಪಾರ್ಲಿಮೆಂಟ್‍ಗೆ ವರದಿ ಸಲ್ಲಿಸಬೇಕಾಗಿದೆ. ಚಿತ್ರದುರ್ಗ ಹಿಂದುಳಿದ ಜಿಲ್ಲೆ ಬರಪೀಡಿತ ಪ್ರದೇಶ.
ಈ ಮಣ್ಣಿಗೆ ಹೊಂದಿಕೊಂಡಿರುವವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆದ್ಯತೆ ಕೊಡಿ ಎನ್ನುವುದು ನನ್ನ ಬೇಡಿಕೆ. ದುರ್ಬಲ ಅಭ್ಯರ್ಥಿಗಳನ್ನು ಮೈತ್ರಿ ಸರ್ಕಾರ ಕಣಕ್ಕಿಳಿಸಿದರೆ ವಿರೋಧಿಗಳಿಗೆ ಗೆಲುವು ಸುಲಭವಾಗಲಿದೆ ಎನ್ನುವುದು ಕಾಂಗ್ರೆಸ್ ಮತ್ತು ಜೆಡಿಎಸ್.ನಾಯಕರುಗಳಿಗೆ ಗೊತ್ತಿರಬೇಕು. ರಾಜ್ಯದ ಐದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಯಾವುದೇ ಕಾರಣಕ್ಕೂ ಮ್ಯಾಚ್ ಫಿಕ್ಸಿಂಗ್ ಆಗಬಾರದು ಎನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ನಾನೂ ಕೂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಸ್ಪರ್ಧಾಕಾಂಕ್ಷಿಯಾಗಿದ್ದೇನೆ.
ವರಿಷ್ಟರು ಒಮ್ಮೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.ಪರಿಶಿಷ್ಟ ಜಾತಿಯಲ್ಲಿ ನೂರ ಒಂದು ಜಾತಿಗಳಿವೆ. ಈ ಸಮುದಾಯದವರು ಚುನಾವಣೆಯಲ್ಲಿ ಗೆಲ್ಲಬೇಕಾದರೆ ಬೇರೆ ಜಾತಿಯವರ ಬೆಂಬಲ ಬೇಕು. ಚಿತ್ರದುರ್ಗ ಕ್ಷೇತ್ರದಲ್ಲಿ ಅಂದಾಜು ಮೂರು ಲಕ್ಷದಷ್ಟು ಲಂಬಾಣಿ ಜನಾಂಗದವರಿದ್ದಾರೆ. ಪ್ರಜಾಪ್ರಭುತ್ವ ಪರಿಪೂರ್ಣವಾಗಬೇಕಾದರೆ ಎಲ್ಲಾ ಜನಾಂಗಕ್ಕೂ ಪ್ರಾತಿನಿಧ್ಯ ಕೊಡಬೇಕು ಎಂದು ಆಗ್ರಹಿಸಿದರು.ನಾಗೇಂದ್ರ, ಸುರೇಶ್, ಉಮಾಪತಿ, ವೀರೇಂದ್ರಕುಮಾರ್, ದೇವರಾಜ್, ಅಕ್ಷಯ್‍ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.