ಸಾಮರಸ್ಯ ಬೆಳೆಸಲು ಸ್ಕೌಟ್ & ಗೈಡ್ಸ್ ಸಹಕಾರಿ

ದಾವಣಗೆರೆ:

      ಶಿಸ್ತಿನ ಜೊತೆಗೆ ನಾವೆಲ್ಲರೂ ಒಂದೇ ಎಂಬ ಸಾಮರಸ್ಯದ ಭಾವನೆ ಬೆಳೆಸಲು ಸ್ಕೌಟ್ಸ್ ಅಂಡ್ ಗೈಡ್ಸ್ ಸಹಕಾರಿಯಾಗಿದೆ ಎಂದು ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

      ನಗರದ ಕಾಯಿಪೇಟೆಯಲ್ಲಿನ ಶ್ರೀಬಸವೇಶ್ವರ ದೇವಸ್ಥಾನದ ಆವರಣದಿಂದ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಉತ್ತರ ವಲಯದ ವತಿಯಿಂದ ಏರ್ಪಡಿಸಿದ್ದ ಜನಜಾಗೃತಿ ಜಾಥಾಕ್ಕೆ ಶನಿವಾರ ಶ್ರೀಗಳು ಚಾಲನೆ ನೀಡಿದರು.

      ಶಿಸ್ತಿಗೆ ಇನ್ನೊಂದು ಹೆಸರಾಗಿರುವ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯು ಮಕ್ಕಳಲ್ಲಿ ಶಿಸ್ತು ಬೆಳೆಸುವುದರ ಜೊತೆಗೆ ನಾವೆಲ್ಲರೂ ಒಂದೇ ಎಂಬ ಸಾಮರಸ್ಯದ ಭಾವನೆ ಬೆಳೆಸಲಿದೆ. ಅಲ್ಲದೆ, ಈ ಸಂಸ್ಥೆಯು ತ್ಯಾಗ ಮನೋಭಾವ, ಮಾನವೀಯ ಮೌಲ್ಯಗಳನ್ನು ಕಲಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಲಿದೆ ಎಂದರು.

         ಒಳ್ಳೆಯ ಬಟ್ಟೆ ಹಾಕಿ ಮಕ್ಕಳು ಸುಂದರವಾಗಿ ಕಾಣುವಂತೆ ಮಾಡುವುದೇ ಶಿಸ್ತು ಅಲ್ಲ. ಸಮಯ ಪ್ರಜ್ಞೆಯ ಜೊತೆಗೆ ಯಾವ ಸ್ಥಳದಲ್ಲಿ ನಮ್ಮ ನಡವಳಿಕೆ ಹೇಗಿರಬೇಕೆಂಬುದೇ ಶಿಸ್ತು ಆಗಿದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವಾಗಿದ್ದು, ದೇಶ ಭಕ್ತಿ, ವಿನಯತೆ, ಪ್ರಾಮಾಣಿಕತೆಯನ್ನು ಸ್ಕೌಟ್ ಅಂಡ್ ಗೈಡ್ಸ್ ಕಲಿಸಲಿದೆ ಎಂದು ಹೇಳಿದರು.

        ಜೀವನದಲ್ಲಿ ಸಮಯ ಅತೀ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಇನ್ನಷ್ಟು ವಿದ್ಯಾರ್ಥಿಗಳು ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಗೆ ಸೇರ್ಪಡೆಯಾಗುವ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದರತ್ತ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

          ಶ್ರೀಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಕ್ತಾಯವಾಯಿತು.ಈ ಸಂದರ್ಭದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯ ಅನಿತಾ ಮಾಲತೇಶ್, ಸುವರ್ಣಮ್ಮ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link