ಬೆಂಗಳೂರು
ಬಿಜೆಪಿ ಶಾಸಕ ಉಮೇಶ್ ಕತ್ತಿ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಬಿಜೆಪಿಯ ಸಂಪರ್ಕದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಉಮೇಶ್ ಕತ್ತಿ ನಿನ್ನೆ ಹೇಳಿಕೆ ನೀಡಿದ್ದರು. ಕತ್ತಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕರಾದ ಉಮೇಶ್ ಕತ್ತಿ, ಈಶ್ವರಪ್ಪ ಈ ಮೂವರು ರಾಜ್ಯದಲ್ಲಿರುವ ನಿಜವಾದ ಅತೃಪ್ತ ಆತ್ಮಗಳು. ಅತೃಪ್ತಿ, ಹತಾಶಗಳಿಂದಲೇ ಇವರೆಲ್ಲ ಬೇರೆಯವರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, 24 ಗಂಟೆಯ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಏನಾಗುತ್ತದೆ ಎನ್ನುವುದು ಉಮೇಶ್ ಕತ್ತಿಯವರಿಗೆ ಗೊತ್ತಾಗಲಿದೆ. ಕಾಂಗ್ರೆಸ್ ಪಕ್ಷದ ಶಾಸಕರೆಲ್ಲರೂ ತಮ್ಮ ಸಂಪರ್ಕದಲ್ಲಿ ಇದ್ದು, ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಉಮೇಶ್ ಕತ್ತಿಯವರು ಹೇಳಿಕೆ ನೀಡಿ ಈಗಾಗಲೇ 24 ತಾಸು ಆಗಿದೆ. ಸರ್ಕಾರಕ್ಕೆ ಏನೂ ಆಗಿಲ್ಲ. ಹೀಗಾಗಿ ಉಮೇಶ್ ಕತ್ತಿಯವರೇ ರಾಜೀನಾಮೆ ಕೊಡಬೇಕು ಎಂದು ತಿರುಗೇಟು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ