ಕುಣಿಗಲ್ :
ದೇಶಕ್ಕೆ ಅಥವಾ ರಾಜ್ಯಕ್ಕೆ ಕೊಡುಗೆ ನೀಡಿದ ಮಹಾತ್ಮರ ಜಯಂತಿ ಆಚರಣೆಗಳ ವೇಳೆ ಬರೀ ಮೆರವಣಿಗೆ, ಘೋಷಣೆಗಳ ಅಬ್ಬರ ಮಾಡುವುದರಲ್ಲಿ ಅರ್ಥವಿಲ್ಲ ಅವರು ನೀಡಿದ ಮಾರ್ಗದರ್ಶನವನ್ನ ಇಂದು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ಕಟ್ಟುವ ಮನಸ್ಸು ಮಾಡಬೇಕೆಂದು ಶಾಸಕ ಡಾ|| ರಂಗನಾಥ್ ಅಭಿಪ್ರಾಯ ಪಟ್ಟರು.
ತಾಲ್ಲೂಕು ಆಡಳಿತ ಹಾಗೂ ಮುಸ್ಲೀಂ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಜಿಕೆಬಿಎಂಸ್ ಮೈದಾನದಲ್ಲಿರುವ ಬಯಲು ರಂಗ ಮಂದಿರದಲ್ಲಿ ನಡೆದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ರವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ದೇಶಕ್ಕಾಗಲಿ ರಾಜ್ಯಕ್ಕಾಗಲಿ ಕೊಡುಗೆ ನೀಡಿದವರ ಜಯಂತಿಗಳನ್ನು ಆಚರಿಸುವಾಗ ಅವರ ಬದುಕು, ಜೀವನ ಶೈಲಿ, ಚಿಂತನೆ, ಸಾಧನೆಗಳನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಾಗಬೇಕು ಇತಿಹಾಸದಲ್ಲಿ ಹುತಾತ್ಮರಾದ ಮಹಾನ್ ಪುರುಷರ ಸಾಧನೆಗಳು ಅದ್ಬುತವಾಗಿವೆ ಅಂತಹವರ ಬದುಕುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದೇಶ ಅಭಿವೃದ್ದಿಯತ್ತ ಸಾಗುತ್ತದೆ ಎಂದರು.
ಟಿಪ್ಪು ದೇಶದ ಅಭಿವೃದ್ದಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ, ಸಂಸ್ಕøತಿ, ಬೇಸಾಯ, ಕೈಗಾರಿಕೆಗೆ ಒತ್ತು ನೀಡಿದ್ದರು, 250 ವರ್ಷಗಳ ಹಿಂದೆಯೇ ಮಧ್ಯ ನಿಶೇಧ ಹೇರಿದ್ದರೆಂದರೆ ಜನರ ಬಗ್ಗೆ ಇದ್ದ ಕಾಳಜಿ ತೋರಿಸುತ್ತದೆ. ಟಿಪ್ಪು ಹಿಂಧೂ ವಿರೋಧಿ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ನಾವು ಎಲ್ಲಿಯೂ ಕೇಳಿಲ್ಲ ಓದಿಯೂ ಇಲ್ಲ ರಾಜಕೀಯದ ದುರಾಸೆಗೆ ಕೆಲವರು ಇಲ್ಲ ಸಲ್ಲದನ್ನು ಹೇಳುವುದು ಸರಿಯಲ್ಲ ಎಂದು ಟೀಕಾಪ್ರಹಾರ ಮಾಡಿದರು.
ತುಮಕೂರು ವಿಶ್ವ ವಿದ್ಯಾಲಯದ ಸಮಾಜ ಕಾರ್ಯವಿಭಾಗದ ಸಂಶೋಧನ ವಿದ್ಯಾರ್ಥಿ ಅಬ್ದುಲ್ ವಾಬುಬ್ ಮಾತನಾಡಿ ಟಿಪ್ಪು ಒಬ್ಬ ಆದರ್ಶ ರಾಜ, ದೇಶದ ಸಾರಿಗೆ ಸಂಪರ್ಕಕ್ಕೆ ಅಡಿಗಲ್ಲು ಹಾಕಿದವರು, ಖಾಸಗಿ ಲೇವಾದೇವಿಗೆ ನಿಶೇಧ ಹೇರಿ ಸರ್ಕಾರಿ ಸ್ವಾಮ್ಯದ ಲೇವಾದೇವಿ ಕಲ್ಪಿಸಿದ್ದರು. ಅವರ ಕಾಲದಲ್ಲಿಯೇ ವ್ಯವಸಾಯಕ್ಕೆ ಬಡ್ಡಿರಹಿತ ಸಾಲ ನೀಡುವ ವ್ಯವಸ್ಥೆ ಇತ್ತು, ರೇಷ್ಮೆ ಪರಿಚಯಿಸಿದ ಮೊದಲ ವ್ಯಕ್ತಿ, ಕೃಷಿ ಮತ್ತು ಕೈಗಾರಿಕೆ ಗಳೆರಡರಲ್ಲೂ ಆಸಕ್ತಿ ಅವರಲ್ಲಿ ಅಪಾರವಾಗಿತ್ತು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜು, ಡಿವೈಎಸ್‍ಪಿ ರಾಮಲಿಂಗೇಗೌಡ, ಪುರಸಭಾ ಉಪಾಧ್ಯಕ್ಷರಾದ ಅರುಣ್‍ಕುಮಾರ್, ಜಿ.ಪಂ.ಸದಸ್ಯೆ ಅನಸೂಯಮ್ಮ ವೈಕೆಆರ್, ಪುರಸಭಾ ಸದಸ್ಯರಾದ ರೆಹಮಾನ್ ಷರೀಫ್, ಪಾಪಣ್ಣ, ಸಮೀಉಲ್ಲಾ, ಸಿಪಿಐ ಅಶೋಕ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ರಮೇಶ್, ಬಿ.ಇ.ಒ. ಸಿದ್ದಯ್ಯ, ಹಿರಿಯ ವಕೀಲರಾದ ಮಮತಾಜ್‍ಅಹಮದ್, ಮುಖಂಡರಾದ ಅಬ್ದುಲ್‍ಹಮೀದ್, ಬೇಗೂರು ರಾಮಣ್ಣ, ಜಾಮಿಯ ಮಸೀದಿಯ ಮೌಲಾನ ಮಹಮ್ಮದ್ ಸಾಜಿದ್ ಮತ್ತು ಇತರೆ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
