ಬೆಂಗಳೂರು
ಜೆಡಿಎಸ್ ನಲ್ಲಿ ಉಳಿದಿರುವ ಸಚಿವ ಸ್ಥಾನಗಳ ಭರ್ತಿಗೆ ಹೊಸ ಹೊಸ ಪಂಚಾಂಗದ ಪ್ರಕಾರ ಒಳ್ಳೆಯ ಮುಹೂರ್ತ ನೋಡಿ ಸಚಿವ ಸ್ಥಾನ ಭರ್ತಿ ಮಾಡಲಾಗುವುದು ಎಂದು ಜೆಡಿಎಸ್ ನಾಯಕ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.ಸಂಕ್ರಾಂತಿ ನಂತರ ಸೂಕ್ತ ದಿನ ಗೊತ್ತು ಮಾಡಿ ಸಂಪುಟ ವಿಸ್ತರಿಸುವುದಾಗಿ ಸುಳಿವು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ಹೊಸ ಪಂಚಾಂಗದ ನಿರೀಕ್ಷೆಯಲ್ಲಿದ್ದೇವೆ. ಇನ್ನೇನು ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಸಂಕ್ರಾಂತಿಗೆ ಹೊಸ ಪಂಚಾಂಗ ಕೈ ಸೇರಲಿದೆ. ನಂತರ ತನ್ನ ಪಾಲಿನ ಎರಡು ಸ್ಥಾನಗಳ ಭರ್ತಿಗೆ ಮುಹೂರ್ತ ನಿಗದಿ ಮಾಡುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗಬಾರದು ಎಂಬ ಕಾರಣದಿಂದ ಸಂಪುಟ ವಿಸ್ತರಣೆ ಮಾಡಲಾಗಿದೆ. ಮೈತ್ರಿ ಪಕ್ಷದಲ್ಲಿ ತಲೆದೋರಿಸುವ ಅಸಮಾಧಾನವನ್ನು ಆ ಪಕ್ಷದವರೇ ನೋಡಿಕೊಳ್ಳುತ್ತಾರೆ. ಕಾಂಗ್ರೆಸಿನಲ್ಲಿ ದೊಡ್ಡದೊಡ್ಡ ನಾಯಕರು ಸಚಿವ ಸಂಪುಟ ಪುನಾರಚನೆ ನಂತರ ಉಂಟಾಗಿರುವ ಅಸಮಾಧಾನವನ್ನು ಸರಿಮಾಡುತ್ತಾರೆ. ರಮೇಶ್ ಜಾರಕಿಹೊಳಿ ಬಗ್ಗೆಯಾಗಲಿ ಅವರ ಜೊತೆಗಿರುವವರ ಕುರಿತಾಗಲೀ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು.
ಮತ್ತೊಂದೆಡೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವಡೆಗೌಡ ಮಾತನಾಡಿ, ಜೆಡಿಎಸ್ ನಿಂದಲೂ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಆದರೆ ಇದಕ್ಕೆ ಇನ್ನೂ ಸಮಯಬೇಕು ಎಂದರು.
ಮಂತ್ರಿಮಂಡಲ ವಿಸ್ತರಣೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನ ತಲೆ ದೋರಿಲ್ಲ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಕಾಂಗ್ರೆಸಿನಿಂದ ಯಾರೂ ಸಹ ರಾಜೀನಾಮೆ ನೀಡುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
