ಬೆಂಗಳೂರು
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಪ್ರಯತ್ನವಿಲ್ಲದೆಯೇ ಕಾಂಗ್ರೆಸ್ ಆಂತರಿಕ ಗೊಂದಲಗಳಿಂದ ಕುಸಿದು ಬೀಳಲಿದೆ. ಬಿಜೆಪಿಯ 104 ಶಾಸಕರಲ್ಲಿ ಒಂದು ಸಂಖ್ಯೆಯೂ ಕಡಿಮೆಯಾಗುವುದಿಲ್ಲ.ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ಶಾಸಕರ ಖರೀದಿಗಾಗಿ ವಿಫಲ ಪ್ರಯತ್ನ ನಡೆಸಿದ್ದಾರೆಂದು ಆರೋಪಿಸಿದರು.
ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಯಾವ ಕ್ಷಣದಲ್ಲಾದರೂ ಪತನವಾಗಬಹುದು. ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ. ಅಂತೆಯೇ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲವೆಂದು ಈಶ್ವರಪ್ಪ ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಗೆ ಗೈರು ಹಾಜರಾಗಿರುವುದಕ್ಕು ನಮಗೂ ಯಾವುದೇ ಸಂಬಂಧವಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ,ಶಾಸಕಾಂಗ ಪಕ್ಷದ ನಾಯಕರು ಸಭೆ ಕರೆದರೆ ಶಾಸಕರು ಗೈರಾಗುತ್ತಾರೆ ಎಂದರೆ ಶಾಸಕರ ಮೇಲೆ ನಿಮಗೆ ಹಿಡಿತವಿಲ್ಲ, ನಿಮ್ಮವರೇ ನಿಮಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ.ಆದರೆ ಅನಾವಶ್ಯಕವಾಗಿ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದೀರಿ, ನಿಮಗೆ ನಾಚಿಕೆ ಮಾನ ಮರ್ಯಾದೆ ಏನಾದರು ಇದೆಯಾ ಎಂದು ಸಿದ್ದರಾಮಯ್ಯ ಅವರನ್ನು ಈಶ್ವರಪ್ಪ ತರಾಟೆ ತೆಗೆದುಕೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ನಾಲಿಗೆ ಮೇಲೆ ಹಿಡಿತ ಇಲ್ಲದವರಂತೆ ಮಾತನಾಡುತ್ತಾರೆ, ಮದ್ಯ ವ್ಯಸನಿಗಳ ಹಾಗೆ ಮಾತನಾಡುವುದಿಲ್ಲ, ಮಾದಕ ವ್ಯೆಸನಿಗಳು ಕೂಡಾ ಸಿದ್ದರಾಮಯ್ಯ ಬಳಸಿದ ಪದ ಬಳಸುವುದಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಅವರೇ ಮುಳುಗಿಸಿದ್ದಾರೆ.ಆದರೆ ಬಿಜೆಪಿ ಪಕ್ಷವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ, ಪಕ್ಷದ ಕಾರ್ಯಕ್ರಮದ ನಿಮಿತ್ತ ಶಾಸಕರೆಲ್ಲಾ ದೆಹಲಿಗೆ ತೆರಳಿದ್ದೆವು. ಲೋಕಸಭಾ ಚುನಾವಣೆ ತಯಾರಿ, ಕ್ಷೇತ್ರಗಳಲ್ಲಿನ ಸಿದ್ದತೆ ಬಗ್ಗೆ ವರಿಷ್ಠರು ಚರ್ಚೆ ನಡೆಸಲು ಶಾಸಕರು ವಾಸ್ತವ್ಯ ಹೂಡಬೇಕಾಗಿ ಬಂದಿತು. ನಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದರೆ ನಾವು ಚುರುಮುರಿ ತಿನ್ನುತ್ತಾ ಕುಳಿತುಕೊಳ್ಳಬೇಕೆ ಎಂದು ಪ್ರಶ್ನಿಸಿದ ಈಶ್ವರಪ್ಪ.? ನಮಗೂ ರಾಜಕಾರಣ ಮಾಡಲು ಬರುತ್ತದೆ ಎಂದು ತೋರಿಸಿದ್ದೇವೆ.ನಿನ್ನೆಯ ಶಾಸಕಾಂಗ ಸಭೆಗೆ ನಾಲ್ಕು ಜನ ಶಾಸಕರು ಗೈರಾಗಿರುವುದು ಮೊದಲ ಹೊಡೆತ. ಇದರಿಂದ ಪಾಠ ಕಲಿತರೆ ಒಳಿತು. ಇಲ್ಲದಿದ್ದಲ್ಲಿ ರಾಜ್ಯದ ಜನತೆಯೇ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಈಶ್ವರಪ್ಪ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ