4ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ : ಖಾದರ್

ಚಿತ್ರದುರ್ಗ:

        ವಸತಿಹೀನರಿಗೆ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷ ಮನೆಗಳನ್ನು ಕಟ್ಟಿಕೊಡುವ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ನಗರಾಭಿವೃದ್ದಿ ಮತ್ತು ವಸತಿ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.

       ದಾವಣಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮೈಸೂರಿಗೆ ಪ್ರಯಾಣಿಸುತ್ತಿದ್ದ ಅವರು ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ನಿವಾಸಕ್ಕೆ ಬುಧವಾರ ರಾತ್ರಿ ಭೇಟಿ ನೀಡಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು.

       ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಜಾಗವಿದ್ದರೆ ಮನೆಗಳನ್ನು ಈ ವರ್ಷ ನಿರ್ಮಿಸಲಾಗುವುದು. ಜಮೀನು ಇಲ್ಲದಿದ್ದರೆ ಖಾಸಗಿಯವರಿಂದ ಭೂಮಿಯನ್ನು ಖರೀಧಿಸಿ ಮನೆಗಳನ್ನು ಕಟ್ಟಿಕೊಡಲಾಗುವುದು. ಮಹಾನಗರಪಾಲಿಕೆಗಳಲ್ಲಿ ಎಕರೆಗೆ 50 ಲಕ್ಷ ರೂ., ನಗರಸಭೆ ವ್ಯಾಪ್ತಿಯಲ್ಲಿ ಎಕರೆಗೆ 35 ಲಕ್ಷ ರೂ., ಗ್ರಾಮ ಮಟ್ಟದಲ್ಲಿ ಹದಿನೈದರಿಂದ ಇಪ್ಪತ್ತು ಲಕ್ಷ ರೂ.ಗಳನ್ನು ನೀಡಿ ಖಾಸಗಿಯವರಿಂದ ಭೂಮಿಯನ್ನು ಖರೀಧಿಸಲಾಗುವುದು ಎಂದು ತಿಳಿಸಿದರು.

        ಇನ್ನು ಮುಂದೆ ಕಟ್ಟಡಗಳನ್ನು ಕಟ್ಟುವವರು, ಲೇಔಟ್ ನಿರ್ಮಿಸುವವರು ನಗರಸಭೆ ಮತ್ತು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಲೈಸೆನ್ಸ್ ಪಡೆಯುವುದು ಕಷ್ಟವಾಗುತ್ತದೆ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಲು ಏಕಗವಾಕ್ಷಿ ಪದ್ದತಿಯನ್ನು ಜಾರಿಗೆ ತರಲಾಗುವುದು. ಆನ್‍ಲೈನ್‍ನಲ್ಲಿಯೇ ಅರ್ಜಿಗಳನ್ನು ಸಲ್ಲಿಸಬೇಕು. ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಒಂದು ತಿಂಗಳೊಳಗೆ ಲೈಸೆನ್ಸ್ ಕೈಸೇರಲಿದೆ. ಅರ್ಜಿ ಸಲ್ಲಿಸಿದ ಮರುದಿನವೇ ಎಲ್ಲಾ ಇಲಾಖೆಗೆ ಹೋಗಿ ಒಂದು ವಾರದೊಳಗೆ ಸಂಪೂರ್ಣ ಮಾಹಿತಿ ಪಡೆಯಬೇಕು.

       ಸ್ಪಾಟ್ ಇನ್ಸ್‍ಪೆಕ್ಷ್‍ನ್‍ಗೆ ಬರದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಇನ್ನು ಮುಂದೆ ಮೊಬೈಲ್ ಟವರ್‍ಗಳನ್ನು ಬೇಕಾಬಿಟ್ಟಿಯಾಗಿ ಎಲ್ಲಿ ಬೇಕೆಂದರಲ್ಲಿ ಯಾರ ಮನೆಯ ಮೇಲಾದರೂ ಅಳವಡಿಸುವಂತಿಲ್ಲ. ಒಂದು ವೇಳೆ ಟವರ್ ಹಾಕಬೇಕಾದರೆ ನಿಗಧಿತ ಶುಲ್ಕ ಪಾವತಿಸಿ ನೊಂದಣಿ ಮಾಡಿಸಿಕೊಳ್ಳಬೇಕು. ಕಟ್ಟಡಗಳ ಮೇಲೆ ಟವರ್ ಹಾಕಬೇಕಾದರೆ ಮಾನ್ಯತೆ ಪಡೆದ ಇಂಜಿನಿಯರ್‍ಗಳು ಕಟ್ಟಡ ಗಟ್ಟಿಮುಟ್ಟಾಗಿದೆಯೋ ಇಲ್ಲವೋ ಎನ್ನುವುದನ್ನು ದೃಢೀಕರಿಸಬೇಕು. ಜೊತೆಗೆ ಕಟ್ಟಡದ ಮಾಲೀಕನ ಅನುಮತಿ ಬೇಕು ಎಂದು ಟವರ್ ಅಳವಡಿಸುವವರನ್ನು ಎಚ್ಚರಿಸಿದರು.

         ಶಾಲಾ-ಕಾಲೇಜು, ಆಸ್ಪತ್ರೆ, ಧಾರ್ಮಿಕ ಕೇಂದ್ರಗಳಿಂದ ಐವತ್ತು ಮೀಟರ್ ದೂರದಲ್ಲಿ ಟವರ್ ಇರಬೇಕು.ಸುತ್ತಮುತ್ತಲಿನ ಜನರಿಗೆ ತೊಂದರೆಯಾಗದಂತೆ ಸೈಲೆಂಟ್ ಜನರೇಟರ್ ಅಳವಡಿಸಬೇಕು. ಟವರ್ ಬಗ್ಗೆ ಯಾರಿಗೆ ದೂರು ಕೊಡಬೇಕು ಎನ್ನುವುದು ಈವರೆವಿಗೂ ಜನಸಾಮಾನ್ಯರಿಗೆ ಗೊತ್ತಿಲ್ಲ. ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಈಗ ಅಳವಡಿಸಿರುವ ಎಲ್ಲಾ ಟವರ್‍ಗಳ ವಾರಸುದಾರರು ಈ ಕಾನೂನನ್ನು ಪಾಲಿಸಬೇಕು. ಮೂವಿಂಗ್ ಟವರ್ ಕೂಡ ನೊಂದಣಿ ಮಾಡಿಸಿ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ದೇಶದಲ್ಲಿಯೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಕಾನೂನು ಜಾರಿಯಾಗುತ್ತಿದೆ ಎಂದರು.

         ಇಲ್ಲಿಯವರೆಗೂ ಮನೆ ಕಟ್ಟುವವರು ನಿಯಮ ಪಾಲಿಸದಿದ್ದರೆ ಮಾಲೀಕರಿಗೆ ಮಾತ್ರ ಶಿಕ್ಷೆ ಆಗುತ್ತಿತ್ತು. ಈಗ ಮನೆ ಕಟ್ಟಲು ಲೈಸೆನ್ಸ್ ನೀಡಿದವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.

         ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್.ಸಮ್ಮಿಶ್ರ ಸರ್ಕಾರಕ್ಕೆ ಯಾವ ಗಂಡಾಂತರವಿಲ್ಲ. ಕೋಮುವಾದಿ ಬಿಜೆಪಿ.ಯವರು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನಿಗಧಿಪಡಿಸುವುದು ಕೇಂದ್ರ ಸರ್ಕಾರ. ಬೆಳಗಾಂನಲ್ಲಿ ಮುಗ್ದ ರೈತರನ್ನು ಎತ್ತಿಕಟ್ಟುತ್ತಿರುವ ಬಿಜೆಪಿ.ಸರ್ಕಾರ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕಳಂಕ ತರಲು ಹೊರಟಿದೆ. ಎಲ್ಲಾ ಜಿಲ್ಲಾಧಿಕಾರಿಗಳ, ರೈತರ ಹಾಗೂ ಕಾರ್ಖಾನೆ ಮಾಲೀಕರ ಸಭೆ ಕರೆದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಕಬ್ಬಿನ ಬಾಕಿ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರೆ ರೈತರು ಒಪ್ಪಲಿಲ್ಲ. ರಾಜ್ಯ ಸರ್ಕಾರವನ್ನು ಕೇಳುವ ಬದಲು ರೈತರು ಕೇಂದ್ರವನ್ನು ಏಕೆ ಕೇಳುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

         ರಾಜ್ಯ ಸರ್ಕಾರ ರೈತರ ಪರವಾಗಿದೆ. ರೆಫೆಲ್ ಹಗರಣ ನಡೆಸಿರುವ ಕೇಂದ್ರ ಸರ್ಕಾರಕ್ಕೆ ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದರು ಸುಮ್ಮನಿರುವುದನ್ನು ನೋಡಿದರೆ ತಪ್ಪು ಮಾಡಿದ್ದಾರೆಂದು ಗೊತ್ತಾಗುತ್ತದೆ. ಸಿ.ಬಿ.ಐ.ಮುಖ್ಯಸ್ಥರನ್ನು ಪ್ರಧಾನಿ ಕಡ್ಡಾಯವಾಗಿ ರಜೆ ಮೇಲೆ ಕಳಿಸಿರುವುದು ಏಕೆ. ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ನೆರೆಯ ರಾಷ್ಟ್ರಗಳು ನಮ್ಮನ್ನು ಬಿಟ್ಟು ಚೈನಾದ ಪರವಾಗಿವೆ. ಇದಕ್ಕೆ ಕೇಂದ್ರದ ವೈಫಲ್ಯವೇ ಕಾರಣ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ನಂಬಿಸಿ ಪ್ರಧಾನಿ ಮೋದಿ ವಂಚಿಸಿದ್ದಾರೆ. ಕಾಂಗ್ರೆಸ್‍ನವರು ಇದುವರೆವಿಗೂ ಯಾರು ಪಾಕಿಸ್ತಾನಕ್ಕೆ ಹೋಗಿ ಟೀಕುಡಿದು ಬಂದಿಲ್ಲ. ನಮ್ಮ ಸೈನಿಕರನ್ನು ಕೊಂದವರ ಬಳಿ ಹೋಗಿ ಪ್ರಧಾನಿ ಮೋದಿ ಟೀಕುಡಿದು ಬಂದು ಭಾರತದ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವುದರಿಂದ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ದೇಶದ ಜನ ಕೋಮುವಾದಿ ಬಿಜೆಪಿ.ಗೆ ತಕ್ಕ ಪಾಠ ಕಲಿಸುವುದರಲ್ಲಿ ಅನುಮಾನವಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

        ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಅರ್ಫಾನ್, ಕೆ.ಪಿ.ಸಿ.ಸಿ. ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ರವಿಕುಮಾರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link