ದೇಶ ರಕ್ಷಣೆಗೆ ಕೋಮುವಾದಿಗಳಿಗೆ ಸೋಲಿಸಬೇಕು

ಚಿತ್ರದುರ್ಗ:

       ದುಡಿಯುವ ಕಾರ್ಮಿಕ ವರ್ಗವನ್ನು ಉಳಿಸಿ ದೇಶವನ್ನು ರಕ್ಷಿಸಬೇಕಾಗಿರುವುದರಿಂದ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ.ಯನ್ನು ಸೋಲಿಸಬೇಕಿದೆ ಎಂದು ಎ.ಐ.ಟಿ.ಯು.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಶಿವಣ್ಣ ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.

         ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸಿ ಜ.8 ಮತ್ತು 9 ರಂದು ಚಿತ್ರದುರ್ಗದಲ್ಲಿ ಸಾರ್ವತ್ರಿಕ ಮುಷ್ಕರ ಕುರಿತು ಪತ್ರಕರ್ತರ ಭವನದಲ್ಲಿ ಗುರುವಾರ ಕರೆಯಲಾಗಿದ್ದ ವಿವಿಧ ಕಾರ್ಮಿಕ ಸಂಘಟನೆಗಳ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

         ನರೇಂದ್ರಮೋದಿ ದೇಶದ ಪ್ರಧಾನಿಯಾದಾಗಿನಿಂದಲೂ ಕಾರ್ಮಿಕರ ಜೀವನ ಅಯೋಮಯವಾಗಿದೆ. ಹಿಂದಿನ ಯು.ಪಿ.ಎ.ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ನಮಗೆ ಅಧಿಕಾರ ಕೊಡಿ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಜನರನ್ನು ನಂಬಿಸಿ ವಂಚಿಸಿರುವುದ ಬೇರೆ ಯಾವ ಪ್ರಗತಿಯೂ ಆಗಿಲ್ಲ. ಹಾಗಾಗಿ ಕಾರ್ಮಿಕ ಸಂಘಟನೆಗಳು ಈಗಾಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಕೂಲಿಕಾರ್ಮಿಕರು, ಬಡವರು, ರೈತರು, ಮಹಿಳೆಯರು, ನಿರುದ್ಯೋಗಿ ಯುವಕ-ಯುವತಿಯರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

        ನಾಲ್ಕು ನೂರು ರೂ.ಗಳಿದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಒಂದು ಸಾವಿರ ರೂ.ಗಳಿಗೆ ಏರಿಸಿದೆ.ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ ದ್ರೋಹವೆಸಗಿದೆ. ಐದುನೂರು, ಒಂದು ಸಾವಿರ ರೂ.ಮುಖಬೆಲೆಯ ನೋಟುಗಳ ಅಮಾನ್ಯೀಕರಣದಿಂದಾಗಿ ಸಣ್ಣ, ಮಧ್ಯಮ ವರ್ಗಗಳ ಫ್ಯಾಕ್ಟರಿಗಳು ಮುಚ್ಚಿ ಬೆಂಗಳೂರಿನಲ್ಲಿ ಲಕ್ಷಾಂತರ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಬಂಡವಾಳಶಾಹಿಗಳು, ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡಲು ಕೈಗಾರಿಕೆ, ರೈಲ್ವೆ, ಕೆ.ಎಸ್.ಆರ್.ಟಿ.ಸಿ., ಯೂನಿರ್ವಸಿಟಿಗಳನ್ನು ಖಾಸಗಿ ಒಡೆತನಕ್ಕೆ ವಹಿಸಿದ್ದಾರೆ. ಕಾಂಗ್ರೆಸ್, ಕಮ್ಯುನಿಸ್ಟ್, ಮುಸ್ಲಿಂಲೀಗ್ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ್ದು, ಚರಿತ್ರೆಯಲ್ಲಿ ದಾಖಲಾಗಿದೆ. ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಮೋದಿ ವಿರುದ್ದ ಎಲ್ಲಾ ಕಾರ್ಮಿಕ ಸಂಘಟನೆಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

         ಮೇಕ್ ಇನ್ ಇಂಡಿಯಾ ಮಾಡಲು ಹೊರಟಿರುವ ಮೋದಿಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಅವರ ತತ್ವ, ಸಿದ್ದಾಂತವನ್ನು ವಿರೋಧಿಸುತ್ತಿದ್ದೇವೆ. ದೇಶದಲ್ಲಿ 46 ಕೋಟಿ ಕಾರ್ಮಿಕರಿದ್ದಾರೆ. ಅದರಲ್ಲಿ ಶೇ.93 ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಅವರಿಗೆ ಸರ್ಕಾರದಿಂದ ಯಾವುದು ಸವಲತ್ತುಗಳು ಈಗಲೂ ಸಿಗುತ್ತಿಲ್ಲ ಎಂದು ಕಾರ್ಮಿಕರ ಸಂಕಷ್ಟದ ಪರಿಸ್ಥಿತಿಗೆ ಮರುಗಿದರು.

         ಒಂದು ಕೋಟಿ ಮಹಿಳಾ ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ. ಗುತ್ತಿಗೆ ಪದ್ದತಿ ಜಾರಿಯಾಗುತ್ತಿದೆ. ವಿದೇಶ ಸುತ್ತುತ್ತಿರುವ ಮೋದಿಯಿಂದ ನಮ್ಮ ದೇಶ ಹರಾಜಾಗುತ್ತಿದೆ. ಸಂವಿಧಾನದಡಿ ಸಿಗುವ ಸವಲತ್ತುಗಳನ್ನು ದೇಶದ ಜನತೆಗೆ ಮುಟ್ಟಿಸುವುದು ಪಾರ್ಲಿಮೆಂಟ್ ಕೆಲಸ. ಆದರೆ ನರೇಂದ್ರಮೋದಿ ಪ್ರಧಾನಿಯಾದಾಗಿನಿಂದಲೂ ಪಾರ್ಲಿಮೆಂಟ್‍ಗೆ ಆಗಮಿಸುತ್ತಿಲ್ಲ. ಕಾರ್ಮಿಕರ ಬಗ್ಗೆ ಅಪ್ಪಿತಪ್ಪಿಯೂ ಮೋದಿ ಬಾಯಿ ತೆರೆದಿಲ್ಲ. ಹೇಳಿದ್ದೊಂದು ಮಾಡಿದ್ದೊಂದು ಎನ್ನುವಂತಾಗಿದೆ ಅವರ ಕಾರ್ಯವೈಖರಿ ಎಂದು ಟೀಕಿಸಿದರು.

         ನಾಲ್ಕುವರೆ ವರ್ಷಗಳ ಕಾಲ ರೈತರ ಬಗ್ಗೆ ಮಾತನಾಡದ ಪ್ರಧಾನಿ ಪಾರ್ಲಿಮೆಂಟ್ ಚುನಾವಣೆ ಸಮೀಪಿಸುತ್ತಿರುವುದರಿಂದ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಸ್ವಾಮಿನಾಥನ್ ವರದಿ ಜಾರಿಗೆ ತರಲು ಆಗುತ್ತಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಹೀನಾಯವಾಗಿ ಮಾತನಾಡುತ್ತಿದ್ದಾರೆ. ಬಂಡವಾಳಶಾಹಿಗಳು, ಉಳ್ಳವರು, ಭೂಮಾಲೀಕರ ಪರವಾಗಿ ಕಾನೂನು ತರಲು ಹೊರಟಿದ್ದಾರೆ. ಸಂವಿಧಾನದಡಿ

             ಸಿಗುವ ಮೂಲಭೂತ ಹಕ್ಕುಗಳನ್ನು ಇನ್ನಾದರೂ ಉಳಿಸಿಕೊಳ್ಳದಿದ್ದರೆ ಕಾರ್ಮಿಕರಿಗೆ ಉಳಿಗಾಲವಿಲ್ಲ ಎಂದು ನೆನಪಿಸಿದರು.
ಐ.ಎನ್.ಟಿ.ಯು.ಸಿ.ರಾಜ್ಯ ಕಾರ್ಯದರ್ಶಿ ಮೆಹಬೂಬ್‍ಖಾತೂನ್ ಮಾತನಾಡಿ ನೂರು ವರ್ಷ ಇತಿಹಾಸವಿರುವ ಹೆಚ್.ಎ.ಎಲ್.ಮುಚ್ಚಿ ರಿಲೆಯನ್ಸ್, ಅಂಬಾನಿಗೆ ಕೊಟ್ಟಿರುವ ಪ್ರಧಾನಿ ನರೇಂದ್ರಮೋದಿಯಿಂದ ಕಾರ್ಮಿಕರಿಗೆ ಜೀವನ ಭದ್ರತೆಯಿಲ್ಲದಂತಾಗಿದೆ. ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಪಿ.ಎಫ್.ಗೆ ಕತ್ತರಿ ಹಾಕುತ್ತಿದ್ದಾರೆ. ಅವರ ನೋಟು ಅಮಾನ್ಯೀಕರಣ ಅವೈಜ್ಞಾನಿಕವಾಗಿರುವುದರಿಂದ ಹಣಕ್ಕಾಗಿ ಬ್ಯಾಂಕ್‍ಗಳ ಎದುರು ಸಾಲಿನಲ್ಲಿ ನಿಂತವರು ಬಡ ಕೂಲಿಕಾರ್ಮಿಕರೆ ವಿನಃ ಸಿರಿವಂತರ್ಯಾರು ಅಲ್ಲ ಎಂದು ಕೇಂದ್ರ ನಡೆಯನ್ನು ಖಂಡಿಸಿದರು.

            ನೋಟು ಅಮ್ಯಾನೀಕರಣ ಸಾಲದೆಂದು ಈಗ ಜಿ.ಎಸ್.ಟಿ.ಜಾರಿಗೆ ತಂದು ನೀರು, ಕಾಫಿ, ಇಡ್ಲಿಗೆ ತೆರಿಗೆ ಹಾಕುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಮೋದಿಯ ಮರಳು ಮಾತಿಗೆ ದೇಶದ ಯುವಕರು ಬಲಿಯಾಗಿದ್ದಾರೆ. ಬಿಜೆಪಿ.ಸ್ವಾತಂತ್ರಕ್ಕಾಗಿ ಹೋರಾಡಿದ ಒಂದು ನಿದರ್ಶನವೂ ಇಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸಲು ಹೊರಟಿದ್ದಾರೆ. ಪ್ರತಿ ಬಾರಿಯೂ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮಮಂದಿರನ್ನು ಮುಂದಿಟ್ಟುಕೊಂಡು ಜಾತ್ಯತೀತ ಭಾರತದಲ್ಲಿ ಹಿಂದು-ಮುಸ್ಲಿಂರ ಸೌಹಾರ್ಧತೆಯನ್ನು ಕದಡುತ್ತಿದ್ದಾರೆ.ದಲಿತರು, ಮುಸಲ್ಮಾನರ ಕಗ್ಗೊಲೆಯಾಗುತ್ತಿದೆ. ಮಹಿಳೆ, ಮಕ್ಕಳು, ಪೊಲೀಸರಿಗೆ ರಕ್ಷಣೆಯಿಲ್ಲದಂತಾಗಿದೆ. ಹಾಡು ಹಗಲೆ ಅತ್ಯಚಾರ ನಡೆಯುತ್ತಿದೆ. ಸಂವಿಧಾನದಡಿ ಸಿಕ್ಕಿರುವ ಮೀಸಲಾತಿಯನ್ನು ತೆಗೆಯಲು ಹೊರಟಿದ್ದಾರೆ. ಎಲ್ಲಾ ವಿಚಾರದಲ್ಲೂ ಫೇಲ್ ಆಗಿರುವ ಮೋದಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಬೇಕಿದೆ ಎಂದು ಹೇಳಿದರು.

             ಎ.ಐ.ಟಿ.ಯು.ಸಿ.ಜಿಲ್ಲಾ ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಐ.ಎನ್.ಟಿ.ಯು.ಸಿ.ಯ ರಹಮತ್‍ವುಲ್ಲಾ, ರವಿಕುಮಾರ್, ಪ್ರಕಾಶ್ ವೇದಿಕೆಯಲ್ಲಿದ್ದರು.ಕಾಂ.ಜಮುನಾಬಾಯಿ, ಐ.ಎನ್.ಟಿ.ಯು.ಸಿ.ಜಿಲ್ಲಾಧ್ಯಕ್ಷ ಸೈಯದ್ ಸೈಫುಲ್ಲಾ, ಹಮಾಲರ ಸಂಘದ ಅಧ್ಯಕ್ಷ ಬಸವರಾಜ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap