ದಾವಣಗೆರೆ
ಇದೇ ಮಾರ್ಚ್ 10ರಿಂದ 13ರ ವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ, ಕೇವಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ಸಾರ್ವಜನಿಕರ ಸಹಭಾಗಿತ್ವವು ಅತ್ಯವಶ್ಯವಾಗಿದೆ. ಹೀಗಾಗಿ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮ ಶೇ.100 ರಷ್ಟು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಹೇಳಿದರು.
ಅಧಿಕಾರಿಗಳು, ಜಿ.ಪಂ, ತಾ.ಪಂ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು ಕೈ ಜೋಡಿಸಿ ಕಾರ್ಯ ನಿರ್ವಹಿಸಿದ್ದಲ್ಲಿ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲಿದೆ. ಪೊಲೀಯೋಗೆ ತುತ್ತಾಗಿ ಯಾವುದೇ ವ್ಯಕ್ತಿ ಅಂಗವೈಕಲ್ಯದಿಂದ ಬಳಲಬಾರದು. ಹೀಗಾಗಿ ಪಲ್ಸ್ ಪೊಲೀಯೋ ಲಸಿಕೆ ಹಾಕಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಕ್ಕಳ ಪೋಷಕರಿಗೆ ಸಮಗ್ರ ಮಾಹಿತಿ ನೀಡಬೇಕೆಂದು ಸೂಚಿಸಿದರು.
ವೈದ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಜವಾಬ್ದಾರಿ ನೀಡಿ, ಸರ್ಕಾರೇತರ ಸಂಸ್ಥೆಗಳು, ಸ್ಥಳೀಯ ಸ್ವಯಂ ಸೇವಾ ಸಂಘಗಳ ಸಹಕಾರ ಪಡೆದು ಬೂತ್ ಮಟ್ಟದಲ್ಲಿಯೇ ಪಲ್ಸ್ ಪೊಲೀಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಐದು ವರ್ಷದೊಳಗಿನ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಮುಜಾಗ್ರತೆ ವಹಿಸಬೇಕೆಂದು ಹೇಳಿದರು.
ಆರ್‍ಸಿಹೆಚ್‍ಓ ಡಾ.ಶಿವಕುಮಾರ್ ಮಾತನಾಡಿ, ಪೊಲೀಯೋ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯತೆ ಉಂಟು ಮಾಡಿ ದೀರ್ಘಕಾಲ ಭೀಕರ ಪರಿಣಾಮ ಬೀರುವ ಒಂದು ಮಾರಕ ರೋಗವಾಗಿದೆ. ಭಾರತವನ್ನು ಪೊಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿವಿಧ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳ ಸಹಕಾರೊಂದಿಗೆ 1995 ರಿಂದ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಎಲ್ಲಾ ರಾಜ್ಯಗಳಲ್ಲಿ ಅನುಷ್ಟಾನಗೊಳಿಸಿದೆ ಎಂದರು.
ನಮ್ಮ ರಾಷ್ಟ್ರದಲ್ಲಿ 2011ರಲ್ಲಿ ಕಡೆಯ ಪೊಲೀಯೋ ಪ್ರಕರಣ ದಾಖಲಾಗಿತ್ತು. ರಾಜ್ಯದಲ್ಲಿ 2007 ರಲ್ಲಿ ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಕಡೆಯ ಪ್ರಕರಣ ಕಂಡುಬಂದಿತ್ತು. 2014 ರಲ್ಲಿ ಪೋಲಿಯೋ ಮುಕ್ತ ರಾಷ್ಟ್ರವೆಂದು ಭಾರತವನ್ನು ಘೋಷಿಸಿದ್ದರೂ ನೆರೆಯ ರಾಷ್ಟ್ರಗಳಾದ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕೆಲವು ಪೋಲಿಯೋ ಪ್ರಕರಣ ಕಂಡು ಬಂದ ಕಾರಣ, ಈ ರಾಷ್ಟ್ರಗಳಲ್ಲಿಯೂ ಸಂಪೂರ್ಣ ನಿರ್ಮೂಲನೆ ಆಗುವವರೆಗೆ ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ನಮ್ಮ ದೇಶದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಈ ಬಾರಿ ಭಾರತ ಸರ್ಕಾರದ ನಿರ್ದೇಶನದಂತೆ ಒಂದು ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ನಡೆಸಲು ಸೂಚಿಸಿರುವುದ ಆಶಾದಾಯಕ ಬೆಳವಣಿಗೆಯಾಗಿದೆ. ಮಾ.10 ರಿಂದ 13 ರವರೆಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಮತ್ತು ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಉಪಕೇಂದ್ರ, ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜುಗಳಲ್ಲಿ ಕೇಂದ್ರ ತೆರೆಯಲಾಗುವುದು.
0 ರಿಂದ 5 ವರ್ಷದ ಎಲ್ಲಾ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕಲಾಗುವುದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ತ್ರಿಪುಲಾಂಭ ಮಾತನಾಡಿ, ಮೊದಲನೇ ಸುತ್ತಿನಲ್ಲಿ ಇದೇ ಭಾನುವಾರ ನಡೆಯುವ ಬೂತ್ ಮಟ್ಟದ ಪಲ್ಸ್ ಪೊಲೀಯೋ ಲಸಿಕೆ ಕಾರ್ಯಕ್ರಮದಲ್ಲಿ 0 ರಿಂದ 5 ವರ್ಷದೊಳಗಿನ ಮಕ್ಕಳು ಬೂತ್‍ಗೆ ಬಂದು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಶೇ.99 ಗುರಿ ಸಾಧಿಸುವೆಡೆ ಹೆಚ್ಚಿನ ಗಮನ ಮತ್ತು ಶ್ರಮ ವಹಿಸಬೇಕು. ಶೇ.1 ನ್ನು ಮನೆ ಮನೆ ಭೇಟಿಯಿಂದ ಪೂರ್ಣಗೊಳಿಸಬೇಕು. ಬೂತ್ ಮಟ್ಟದಲ್ಲಿಯೇ ಯಶಸ್ವಿಯಾಗಲು ಹೆಚ್ಚಿನ ಪ್ರಚಾರದ ಅಗತ್ಯತೆ ಇದೆ. ಈಗಾಗಲೇ ಇದಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಯಾವೊಂದು ಮಗುವೂ ಲಸಿಕೆಯಿಂದ ತಪ್ಪಿಸಿಕೊಳ್ಳದಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ಜಿಲ್ಲಾ ಸಂಯೋಜಕ ಮೋಹನ್, ಮೊ ಸಂ: 7259003338 ಇವರನ್ನು ಸಂಪರ್ಕಿಸಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸಿಇಓ ಹೆಚ್.ಬಸವರಾಜೇಂದ್ರ, ಜಿ ಪಂ ಮುಖ್ಯ ಲೆಕ್ಕಾಧಿಕಾರಿ ಟಿ.ಆಂಜನೇಯ ಹಾಜರಿದ್ದರು.
