ಶಿರಾ
ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ಶಾಸಕ ಬಿ.ಸತ್ಯನಾರಾಯಣ ಕಾರನ್ನು ಶಿರಾ ತಾಲ್ಲೂಕಿನ ಲಕ್ಕನಹಳ್ಳಿ ಹಾಗೂ ಮಾರುತಿ ಕಾಲನಿಯಲ್ಲಿ ತಡೆದ ನೂರಾರು ಮಹಿಳೆಯರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಲವಾರು ತಿಂಗಳಿನಿಂದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ನೀವು ಸಹ ಗೆದ್ದು ಹೋದ ಮೇಲೆ ಇತ್ತ ಬಂದು ಜನರ ಸಮಸ್ಯೆ ಕೇಳಿಲ್ಲ ಎಂದು ಶಾಸಕರನ್ನು ಮಹಿಳೆಯರು ತರಾಟೆಗೆ ತೆಗೆದು ಕೊಂಡ ಘಟನೆ ನಡೆಯಿತು.
ಸಮಸ್ಯೆಯನ್ನು ಆಲಿಸಿದ ಶಾಸಕ ಸತ್ಯನಾರಾಯಣ್ ಮಾತನಾಡಿ, ಮಳೆ ಬಾರದ ಕಾರಣ ಅಂತರ್ಜಲ ಬತ್ತಿದ್ದು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸಮರ್ಥಿಸಿ ಕೊಂಡರೂ ಸಹ ಪ್ರತಿಭಟನಾಕಾರರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕಳೆದ ಮಳೆಗಾಲದಲ್ಲಿ ಹೇಮಾವತಿ ಡ್ಯಾಂನಿಂದ ವ್ಯರ್ಥವಾಗಿ ನೀರು ಹರಿದು ಸಮದ್ರ ಸೇರಿತು. ನಿಮ್ಮದೆ ಸರ್ಕಾರ ಇದ್ದರೂ ಮದಲೂರು ಕೆರೆಗೆ ನೀರು ಬಿಡಿಸುವ ಪ್ರಯತ್ನ ಮಾಡಲಿಲ್ಲ ಎಂದು ಶಾಸಕರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದು ಕೊಂಡರು. ಒಂದು ವೇಳೆ ಲೋಕಸಭೆ ಮತದಾನಕ್ಕಿಂತ ಮುಂಚೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿದ್ದಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ