ತುಮಕೂರಿನ ಪುರಭವನ ಸಂರಕ್ಷಣೆಗೆ ಆಗ್ರಹ

ತುಮಕೂರು

    ತುಮಕೂರು ನಗರದ “ಪಾರಂಪರಿಕ ಕಟ್ಟಡ”ವಾದ “ಶ್ರೀಕೃಷ್ಣರಾಜೇಂದ್ರ ಪುರಭವನ”ದ ಸಭಾಂಗಣದಲ್ಲಿ ನಡೆದಿರುವ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಈ “ಪಾರಂಪರಿಕ ಕಟ್ಟಡ”ವನ್ನು ಸಂರಕ್ಷಿಸುವಂತೆ ಕೋರಿ ತುಮಕೂರಿನ ಸಾರ್ವಜನಿಕ ಹೋರಾಟಗಾರ ಆರ್.ವಿಶ್ವನಾಥನ್ ಅವರು ರಾಜ್ಯಪಾಲರು, ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮತ್ತಿತರರಿಗೆ ಮನವಿಪತ್ರ ಸಲ್ಲಿಸಿದ್ದಾರೆ.

      ಇದೀಗ ಈ “ಪಾರಂಪರಿಕ ಕಟ್ಟಡ”ದ ಸಭಾಂಗಣದ ಒಳಗೆ ಇದ್ದಕ್ಕಿದ್ದಂತೆ “ವಾಲ್ ಪ್ಯಾನಲಿಂಗ್” ಮತ್ತು “ರೂಫ್ ಸೀಲಿಂಗ್” ಮೊದಲಾದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮೂಲಕ ಈ ಕಟ್ಟಡದ ಮೂಲ ಸೌಂದರ್ಯವನ್ನು ವಿರೂಪಗೊಳಿಸಲಾಗುತ್ತಿದೆ. ಸಭಾಂಗಣದ ಒಳಭಾಗದ ಗೋಡೆಗಳಿಗೆಲ್ಲ ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದ್ದು, ಆ ಮೂಲಕ ಪುರಾತನ ಗೋಡೆಯನ್ನು ಮುಚ್ಚುವ ಯತ್ನ ನಡೆದಿದೆ. ಅದೇ ರೀತಿ ಮೇಲ್ಭಾಗಕ್ಕೂ ಕಂಬಿ ಅಳವಡಿಸಿ ಹಳೆಯ ಸುಂದರ ಮೇಲ್ಛಾವಣಿ ಕಾಣದಂತೆ ಮುಚ್ಚಲಾಗುತ್ತಿದೆ. ಇನ್ನೂ ಏನೇನು ಮಾಡಲಾಗುವುದೆಂಬುದು ನಿಗೂಢವಾಗಿದೆ ಎಂದು ಸದರಿ ಮನವಿಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

      ತುಮಕೂರು ನಗರದ ಹೃದಯಭಾಗದಲ್ಲಿ “ಶ್ರೀಕೃಷ್ಣರಾಜೇಂದ್ರ ಪುರಭವನ” ಇದೆ. 1916 ನೇ ಇಸವಿಯಲ್ಲಿ ಆಗಿನ ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ಇದು ಸ್ಥಾಪಿತವಾಗಿದ್ದು, ಶತಮಾನ ಕಂಡಿರುವ ಬೃಹತ್ ಕಟ್ಟಡವೆನಿಸಿದೆ. ತನ್ನದೇ ಆದ ವಿಶಿಷ್ಟ ವಾಸ್ತುಶಿಲ್ಪದಿಂದ ಹಾಗೂ ವಿನ್ಯಾಸದಿಂದ ಈ ಕಟ್ಟಡ ವಿಶೇಷ ಆಕರ್ಷಣೆ ಹೊಂದಿದ್ದು, ನಗರದ “ಪಾರಂಪರಿಕ ಕಟ್ಟಡ”ವಾಗಿ ಶೋಭಿಸುತ್ತಿದೆ.

      ಇಂತಹ ಮಹತ್ವದ ಕಟ್ಟಡ ನಾನಾ ಕಾರಣಗಳಿಂದ ಅಲಕ್ಷ್ಯಕ್ಕೊಳಗಾಗಿತ್ತು. ಸಾರ್ವಜನಿಕ ಹೋರಾಟಗಾರರ ಆಗ್ರಹದ ಪರಿಣಾಮವಾಗಿ 2016 ರಲ್ಲಿ 21 ಲಕ್ಷ 50 ಸಾವಿರ ರೂ. ವೆಚ್ಚದಲ್ಲಿ ನವೀಕೃತಗೊಂಡಿತು. 2014-15 ನೇ ಸಾಲಿನ ಎಸ್.ಎಫ್.ಸಿ. ನಿಧಿಯ 18 ಲಕ್ಷ ರೂ.ಗಳನ್ನು ಸಿವಿಲ್ ಕಾಮಗಾರಿಗಳಿಗಾಗಿ ಹಾಗೂ 3.5 ಲಕ್ಷ ರೂ.ಗಳನ್ನು ವಿದ್ಯುದೀಕರಣಕ್ಕಾಗಿ ವೆಚ್ಚ ಮಾಡಲಾಗಿದೆ. ಮೂಲ ಕಟ್ಟಡ ಹಾಗೂ ವಿನ್ಯಾಸಕ್ಕೆ ಕಿಂಚಿತ್ತೂ ಧಕ್ಕೆ ಬಾರದಂತೆ ನವೀಕರಿಸಲಾಗಿತ್ತು.

        ಸಭಾಂಗಣದೊಳಗೆ ಚುರುಕಿ ಫೋರಿಂಗ್ ತೆಗೆದು ಗ್ರಾನೈಟ್ ಫ್ಲೋರಿಂಗ್ ಮಾಡಲಾಗಿತ್ತು. ತುಕ್ಕು ಹಿಡಿದಿದ್ದ ಕಿಟಕಿ, ಬಾಗಿಲುಗಳನ್ನು ದುರಸ್ತಿಗೊಳಿಸಲಾಗಿತ್ತು. ಸಭಾಂಗಣದ ವೇದಿಕೆಯ ಮೆಟ್ಟಿಲನ್ನು ವಿಸ್ತಾರಗೊಳಿಸಲಾಗಿತ್ತು. ಮಳೆ ಬಂದಾಗ ಸೋರುತ್ತಿದ್ದ ಸ್ಥಳಗಳನ್ನು ದುರಸ್ತಿಗೊಳಿಸಲಾಗಿತ್ತು. ಕಟ್ಟಡದ ಒಳಗೆ ಮತ್ತು ಹೊರಗೆ ಬಣ್ಣ ಬಳಿದು ಆಕರ್ಷಕಗೊಳಿಸಲಾಗಿತ್ತು. ಹೊಸದಾಗಿ ವೈರಿಂಗ್ ಮಾಡಿ ವಿದ್ಯುತ್ ದೀಪ ಮತ್ತು ಫ್ಯಾನ್ ಅಳವಡಿಸಲಾಗಿತ್ತು. ಒಟ್ಟಾರೆ ಕಟ್ಟಡದ ಮೂಲ ಸ್ವರೂಪ ಹಾಗೆಯೇ ಉಳಿದಿತ್ತು ಎಂದು ಮನವಿಪತ್ರದಲ್ಲಿ ವಿವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap