ಸಿಎಓ ಸರ್ವಾಧಿಕಾರಿ ಧೋರಣೆ ವಿರುದ್ಧ ಸಿಡಿದೆದ್ದ ಸದಸ್ಯರು

ಹುಳಿಯಾರು:

     ಪಟ್ಟಣ ಪಂಚಾಯ್ತಿ ಸದಸ್ಯರ ಗಮನಕ್ಕೆ ಬಾರದಂತೆ ಸುಂಕ ಸಂಗ್ರಹ ಗುತ್ತಿಗೆ ಹರಾಜು ಪಕ್ರಿಯೆಗೆ ಮುಂದಾಗಿದ್ದ ಪಪಂ ಮುಖ್ಯಾಧಿಕಾರಿಗಳ ಸರ್ವಾಧಿಕಾರಿಗಳ ಧೋರಣೆ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಸಿಡಿದೆದ್ದ ಘಟನೆ ಹುಳಿಯಾರಿನಲ್ಲಿ ಬುಧವಾರ ನಡೆದಿದೆ.

        ವಾರದ ಸಂತೆ ನೆಲವಳಿ ಸುಂಕ, ಖಾಸಗಿ ಬಸ್‍ಗಳ ಸುಂಕ ಹಾಗೂ ಫೂಟ್ ಪಾತ್ ಅಂಗಡಿಗಳ ಸುಂಕ ಸಂಗ್ರಹದ ಗುತ್ತಿಗೆ ನೀಡಲು ಫೆ.27 ರ ಬುಧವಾರ ಹರಾಜು ಪ್ರಕ್ರಿಯೆಯನ್ನು ಪಪಂ ಮುಖ್ಯಾಧಿಕಾರಿಗಳು ಏರ್ಪಡಿಸಿದ್ದರು. ಆದರೆ ಪಪಂ ಸದಸ್ಯರ ಗಮನಕ್ಕೆ ಬಾರದಂತೆ ಈ ಪ್ರಕ್ರಿಯೆ ನಡೆಸಿದರಲ್ಲದೆ ಫುಟ್‍ಪಾತ್ ಅಂಗಡಿಗಳ ತೆರವಿಗೆ ಹಿಂದೆನ ಸಭೆಯಲ್ಲಿ ನಿರ್ಧರಿಸಿದ್ದರೂ ಸಹ ಸುಂಕ ಸಂಗ್ರಹ ಗುತ್ತಿಗೆ ನೀಡುತ್ತಿರುವ ಬಗ್ಗೆ ಪಪಂ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

         ಮುಖ್ಯಾಧಿಕಾರಿ ಮಂಜುನಾಥ್ ಅವರು ಪಪಂ ಸದಸ್ಯ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿ ಹರಾಜು ಪ್ರಕ್ರಿಯೊಂದು ವಾರ್ಷಿಕ ಸಹಜ ಮತ್ತು ನಿರಂತರ ಪ್ರಕ್ರಿಯೆ. ಇದನ್ನು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಿ ಮಾಡುವ ಅಗತ್ಯವಿಲ್ಲ. ಅಲ್ಲದೆ ಲೋಕಸಭಾ ಚುನಾವಣೆ ಸಮೀಪಿಸಿರುವುದರಿಂದ ನೀತಿಸಂಹಿತೆ ಜಾರಿಯಾಗುವುದರೊಳಗೆ ನಡೆಸುವ ಉದ್ದೇಶದಿಂದ ದಿಡೀರ್ ನಡೆಸಿರುವುದಾಗಿ ಸಮರ್ತಿಸಿಕೊಂಡರು.

         ಇದರಿಂದ ಸಿಟ್ಟಿಗೆದ್ದ ಪಪಂ ಸದಸ್ಯರು ಹಾಲಿ ಸಂತೆ ನಡೆಯುತ್ತಿರುವ ಸ್ಥಳ ಪಶು ಆಸ್ಪತ್ರೆ ಸೇರಿದ್ದು ಬದಲಿ ಜಾಗ ಗುರುತಿಸಿ ಸಂತೆ ಸ್ಥಳಾಂತರಿಸುವಂತೆಯೂ, ಬಸ್ ನಿಲ್ದಾಣ, ಸಂತೆ ಸ್ಥಳದಲ್ಲಿ ಮೂಲ ಸೌಕರ್ಯಗಳಿಲ್ಲವಾದ್ದರಿಂದ ಮೊದಲು ಮೂಲ ಸೌಕರ್ಯ ಕಲ್ಪಿಸುವಂತೆಯೂ, ಫುಟ್‍ಪಾತ್ ಅಂಗಡಿಗಳನ್ನು ತೆರವು ಮಾಡುವಂತೆಯೂ ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಧಾರಿಸಲಾಗಿತ್ತು. ಇದಾವುದನ್ನೂ ಮಾಡದೆ ಹರಾಜು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

          ಮೂಲಭೂತ ಸೌಲಭ್ಯ ಕಲ್ಪಿಸಲು ಪಪಂನಲ್ಲಿ ಹಣವಿಲ್ಲ, ಇದ್ದ ಹಣದಲ್ಲಿ ಈಗಾಗಲೇ ಪೌರಕಾರ್ಮಿಕರ ಸಂಬಳಕೊಟ್ಟು ಖಜಾನೆ ಖಾಲಿಯಾಗಿದೆ. ಮೋಟರ್ ರಿಪೇರಿ ಮಾಡಿಸುವುದಕ್ಕೂ ಹಣವಿಲ್ಲ. ಹಾಗಾಗಿ ಹರಾಜು ಪ್ರಕ್ರಿಯೆ ಮಾಡಿ ಗುತ್ತಿಗೆದಾರರಿಂದ ಹಣ ಸಂಗ್ರಹಿಸುವುದು ಅನಿವಾರ್ಯವಾಗಿದೆ. ಫುಟ್‍ಪಾತ್ ಅಂಗಡಿಗಳನ್ನು ಬಿಟ್ಟು ಉಳಿದಂತೆ ಸಂತೆ ಮತ್ತು ಬಸ್ ಸುಂಕ ಸಂಗ್ರಹಕ್ಕೆ ಹರಾಜು ಮಾಡೋಣ ಎಂದು ಮುಖ್ಯಾಧಿಕಾರಿಗಳು ಕೇಳಿಕೊಂಡರು.

         ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸದಸ್ಯರುಗಳು ಪಪಂ ಆಗಿ ವರ್ಷವಾಗಿದ್ದು ವರ್ಷದಿಂದಲೂ ನೀರು, ಸ್ವಚ್ಚತೆ, ಬೀದಿದೀಪ ಸೇರಿದಂತೆ ಯಾವ ಮೂಲ ಸೌಕರ್ಯಗಳನ್ನೂ ಸರಿಯಾಗಿ ಕೊಟ್ಟಿಲ್ಲ. ಜಿಲ್ಲಾಧಿಕಾರಿಗಳು ಸೇರಿದಂತೆ ಪೌರಾಡಳಿತದ ಯೋಜನಾಧಿಕಾರಿಗಳೂ ಗ್ರಾಪಂ ಮೂಲಧನವನ್ನು ಪಪಂಗೆ ವರ್ಗಾಯಿಸಿಕೊಂಡು ಮೂಲಸೌಕರ್ಯಕ್ಕೆ ಬಳಸಿಕೊಳ್ಳಿ ಎಂದರೂ ವರ್ಗಾಯಿಸಿಕೊಂಡಿಲ್ಲ. ಅಲ್ಲದೆ ವಾಣಿಜ್ಯ ಮಳಿಗೆಗಳ ಬಾಡಿಗೆ ಕಾರಾರು ಅವಧಿ ಮೀರಿದ್ದರೂ ಹರಾಜು ಪ್ರಕ್ರಿಯೆ ಮಾಡಿಲ್ಲ. ಈ ಮಳಿಗೆಗಳ ಹರಾಜು ಮಾಡಿದರೆ ಕೋಟ್ಯಾಂತರ ರೂ. ಸಂಗ್ರಹವಾಗುತ್ತದೆ ಮೊದಲು ಅದನ್ನು ಮಾಡಿ ನಂತರ ಇತರೆ ಸುಂಕ ಸಂಗ್ರಹ ಹರಾಜು ಮಾಡಿ ಎಂದು ಪಟ್ಟು ಹಿಡಿದರು.

          ಅಂತಿಮವಾಗಿ ಬುಧವಾರ ನಡೆಯಬೇಕಿದ್ದ ಹರಾಜು ಪ್ರಕ್ರಿಯೆ ಮುಂದೂಡುವ ಮೂಲಕ ಮುಖ್ಯಾಧಿಕಾರಿಗಳು ವಿವಾದಕ್ಕೆ ತೆರೆ ಎಳೆದರು.ಪಪಂ ಅಧ್ಯಕ್ಷ ಗೀತಾಪ್ರದೀತ್, ಉಪಾಧ್ಯಕ್ಷ ಗಣೇಶ್, ಸದಸ್ಯರುಗಳಾದ ಎಚ್.ಆರ್.ವೆಂಕಟೇಶ್, ರಾಘವೇಂದ್ರ, ಶಂಕರ್, ಪುಟ್ಟಿಬಾಯಿ, ಗೀತಾಅಶೋಕ್‍ಬಾಬು, ಹೇಮಂತ್, ಕಾಮನಬಿಲ್ಲು ಪೌಂಡೇಷನ್‍ನ ಚನ್ನಕೇಶವ, ಜಯಕರ್ನಾಟಕದ ಮೋಹನಕುಮಾರ ರೈ, ಪ್ರಸನ್ನಕುಮಾರ್, ಇಮ್ರಾಜ್, ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap