ದಾವಣಗೆರೆ:
ಆರೋಗ್ಯಯುತ ಮಗು ಪಡೆಯಬೇಕಾದರೆ, ಗರ್ಭಿಣಿಯರು ಕ್ರೌರ್ಯವನ್ನು ಬಿತ್ತರಿಸುವ ಟಿವಿ ನೋಡಬಾರದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಕರೆ ನೀಡಿದರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪೋಷಣ್ ಅಭಿಯಾನ್ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಕಡೆಗೆ ಗಮನ ಹರಿಸಿ ಈ ಕಾರ್ಯಕ್ರಮ ಆಯೋಜಿಸಿದೆ. ಆದರೆ ಮಾನಸಿಕ ಆರೋಗ್ಯದ ಕಡೆಗೂ ನೀವೇ ಹೆಚ್ಚು ಗಮನ ಹರಿಸಬೇಕಾಗಿದೆ. ನಿಮ್ಮ ಮಾನಸಿಕ ಆರೋಗ್ಯ ಚೆನ್ನಾಗಿರಬೇಕಾದರೆ, ಗರ್ಭಿಣಿಯರು ಈಗಲೇ ಟಿವಿ ನೋಡುವುದಿಲ್ಲ ಎಂಬುದಾಗಿ ನಿರ್ಧರಿಸಿ. ಏಕೆಂದರೆ, ಟಿವಿಯಲ್ಲಿ ಕ್ರೌರ್ಯ ಹೆಚ್ಚು ಬಿತ್ತರಗೊಳ್ಳುತ್ತಿದೆ ಎಂದ ಅವರು, ನೀವು ಧನಾತ್ಮಕವಾಗಿ ಉತ್ತಮ ಆಲೋಚನೆ ಹೊಂದಬೇಕಾಗಿರುವ ಕಾರಣ ಶಾಂತತೆಯಿಂದ ಧ್ಯಾನ, ಶ್ಲೋಕಗಳನ್ನು ಹೇಳಿಕೊಂಡಲ್ಲಿ ಮುಂದೆ ಹುಟ್ಟುವ ಮಗುವಿನ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.
ತಾಯಿಯ ಮನಸ್ಸು ಚಿಂತೆ, ದುಗುಡ, ದುಃಖ, ಹಿಂಸೆಯಿಂದ ಕೂಡಿದ್ದರೆ, ಮಗುವಿನ ಮನಸ್ಥಿತಿಯೂ ಹಾಗೇ ಇರುತ್ತದೆ. ಆದ್ದರಿಂದ ಮಗು ಗರ್ಭಾವಸ್ಥೆಯಲ್ಲಿರುವಾಗಲೇ ತಾಯಂದಿರು ತಮ್ಮ ಉತ್ತಮ ಚಿಂತನೆಯನ್ನು ಹೊಂದುವ ಮೂಲಕ ಮಾನಸಿಕವಾಗಿ ಸದೃಢ ಮಗುವನ್ನು ದೇಶಕ್ಕೆ ನೀಡಬೇಕೆಂದು ಕಿವಿಮಾತು ಹೇಳಿದರು.
ಗರ್ಭಿಣಿಯರನ್ನು ಕಾಳಜಿ ಮಾಡುವ ಅವರ ಮನೆಯವರನ್ನು ಕರೆದು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ ಉತ್ತಮ. ತಾಲ್ಲೂಕು ಮಟ್ಟದಲ್ಲಿ ಗರ್ಭಿಣಿ ಸ್ತ್ರೀಯರ ಪತಿ, ಮನೆಯವರನ್ನು ಕರೆದು ಹೇಗೆ ಗರ್ಭಿಣಿ, ಮಕ್ಕಳನ್ನು ನೋಡಿಕೊಳ್ಳಬೇಕೆಂದು ತಿಳಿಸಬೇಕು. ಇಂದು ಅವಿಭಕ್ತ ಕುಟುಂಬಗಳಿಲ್ಲ. ವಿಘಟಿತ ಕುಟುಂಬಗಳಿದ್ದು ಗರ್ಭಿಣಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಪತಿಯ ಹೆಗಲ ಮೇಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಪೋಷಣ್ ಅಭಿಯಾನ್ ಕುರಿತು ತಮ್ಮ ವ್ಯಾಪ್ತಿಯ ಗರ್ಭಿಣಿಯರು, ಮಕ್ಕಳ ಪೋಷಕರಿಗೆ ತಿಳಿ ಹೇಳಿ ಈ ಯೋಜನೆಯ ಉಪಯೋಗವನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ದಾವಣಗೆರೆಯನ್ನು ಅಪೌಷ್ಟಿಕತೆ ಮುಕ್ತ ಜಿಲ್ಲೆಯನ್ನಾಗಿಸುವುದು ತಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಿದೆ. ಗರ್ಭಿಣಿ ಹೆಣ್ಣುಮಕ್ಕಳು ಸಹ ಯಾವುದೇ ಹಿಂಜರಿಕೆ ಇಲ್ಲದೇ ಅಂಗನವಾಡಿಗೆ ಭೇಟಿ ನೀಡಿ ಪೌಷ್ಟಿಕ ಆಹಾರ, ಇತ್ಯಾದಿ ಸೌಲಭ್ಯಗಳನ್ನು ತೆಗೆದುಕೊಳ್ಳಬೇಕು. ನಿಮ್ಮ ಜೊತೆ ಜಿಲ್ಲಾಡಳಿತ ಸದಾ ಇರಲಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಇದೊಂದು ಅದ್ಭುತ ಕಾರ್ಯಕ್ರಮವಾಗಿದ್ದು, ಸರ್ಕಾರ ಸದುದ್ದೇಶದಿಂದ ಈ ಅಭಿಯಾನ ಆರಂಭಿಸಿದೆ. ಮುಂದಿನ ಪೀಳಿಗೆ ಸದೃಢಗೊಳ್ಳಲು ಅನುಕೂಲಕರವಾಗಿದೆ. ಆದ್ದರಿಂದ ಇದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಮಾತನಾಡಿ, 0 ಯಿಂದ 6 ವರ್ಷದೊಳಗಿನ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಅನುಷ್ಟಾನಗೊಳಿಸಿದ್ದು, ಈ ಅಭಿಯಾನದ ಕುರಿತು ಅರಿವು ಮೂಡಿಸಲಾಗುತ್ತಿದೆ. ಗರ್ಭಿಣಿಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ, ಕಾಲಕಾಲಕ್ಕೆ ಚುಚ್ಚುಮದ್ದು ಸೇರಿದಂತೆ ಉತ್ತಮ ಆರೋಗ್ಯ ನೀಡುವುದು ಅಪೌಷ್ಟಿಕತೆಯನ್ನು ಹೋಗಲಾಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
2017ರ ಮೇ ಮಾಹೆಯಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಈ ಅಭಿಯಾನದ ಅಂಗವಾಗಿ ಸೆ.1 ರಿಂದ ಒಂದು ತಿಂಗಳ ಕಾಲ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಉತ್ತಮ ಪೌಷ್ಟಿಕ ಆಹಾರ, ಆರೋಗ್ಯ, ಗರ್ಭಿಣಿಯರ ತೂಕ ಹೆಚ್ಚಳ, ಕಬ್ಬಿಣಾಂಶ ಪೂರೈಕೆ, ವಿಶ್ರಾಂತಿ, ಸದೃಢ ಮಕ್ಕಳ ಜನನ ಈ ಕಾರ್ಯಕ್ರಮದ ಉದ್ದೇಶ
ಅಂಗನವಾಡಿಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಗರ್ಭಿಣಿಯರು, ಪಾಲಕರಿಗೆ ಈ ಕುರಿತು ಅರಿವು ಮೂಡಿಸಲಾಗುವುದು. ಪ್ರತಿ ತಿಂಗಳು ಮೊದಲನೇ ಮತ್ತು ಮೂರನೇ ಶುಕ್ರವಾರ ನಿರಂತರ ಪೋಷಣ್ ಕಾರ್ಯಕ್ರನ ನಡೆಯುತ್ತದೆ. ಪ್ರತಿ ಒಂದು ಕಾರ್ಯಕ್ರಮಕ್ಕೆ ಫಲಾನುಭವಿಗಳ ಖಾತೆಗೆ ನೇರವಾಗಿ 250 ರೂ. ಪಾವತಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ 100 ಗರ್ಭಿಣಿಯರಿಗೆ ಹಾಗೂ 6 ತಿಂಗಳು ತುಂಬಿದ 50 ಮಕ್ಕಳಿಗೆ ಪೂರಕ ಆಹಾರ(ಅನ್ನಪ್ರಾಶನ) ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಮಂಜುಳಾ ಟಿ ವಿ ರಾಜು, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ತಾ.ಪಂ ಸದಸ್ಯೆ ಅಂಬುಜಾಕ್ಷಿ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
