ಚಿಕ್ಕನಾಯಕನಹಳ್ಳಿ

ತಾಲ್ಲೂಕಿನಲ್ಲಿ ಎರಡು ಡೆಂಗ್ಯೂ ಪ್ರಕರಣ ಹಾಗೂ ಮೂರು ಚಿಕನ್ ಗುನ್ಯಾ ಪ್ರಕರಣ ಪತ್ತೆಯಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಚೇತನಗಂಗಾಧರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ನಡೆಯಿತು.
ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ ಕುಮಾರ್ ಮಾತನಾಡಿ, ಮಳೆಗಾಲ ಪ್ರಾರಂಭವಾಗಿದೆ, ರೋಗರುಜುನುಗಳು ಉದ್ಭವಿಸುವ ಸಂದರ್ಭ ಉಂಟಾಗಿದೆ ತಾಲ್ಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳೇನಾದರು ಪತ್ತೆಯಾಗಿದೆಯೇ ಎಂದು ತಾಲ್ಲೂಕು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು. ಉತ್ತಿರಿಸಿದ ಅಧಿಕಾರಿ ಪಟ್ಟಣದಲ್ಲಿ ಎರಡು ಡೆಂಗ್ಯು, ತೀರ್ಧಪುರದಲ್ಲಿ ಒಂದು ಚಿಕನ್ ಗುನ್ಯಾ ಪ್ರಕರಣ, ಶೆಟ್ಟೀಕೆರೆಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿರುವುದನ್ನು ಸಭೆಗೆ ತಿಳಿಸಿದರು. ಕೂಡಲೇ ಪುರಸಭೆ, ತಾಲ್ಲೂಕಿನ ಎಲ್ಲಾ ಪಿಡಿಓಗಳ ಸಭೆ ಕೆರೆದು ಡೆಂಗ್ಯೂ, ಚಿಕನ್ಗುನ್ಯಾ ಹಾಗೂ ಸಾಂಕ್ರಾಮಿಕ ರೋಗಗಳನ್ನು ನಿವಾರಿಸುಲು ಅಗತ್ಯ ಕ್ರಮ ಕೈಗೊಳ್ಳುವಂತೆ ಇ.ಓ.ರವರು ಕ್ರಮ ಕೈಗೊಳ್ಳುವಂತೆ ರಾಜ್ ಕುಮಾರ್ ತಿಳಿಸಿದರು.
ತಾಲ್ಲೂಕಿನಲ್ಲಿ 16ಮಂದಿ ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ, ನಕಲಿ ವೈದ್ಯರಿಗೆ ನೋಟಿಸ್ ನೀಡಿದರೆ ನಾಲ್ಕು ದಿನ ಬಾಗಿಲು ಮುಚ್ಚಿ ನಂತರ ಪುನಃ ತೆಗೆಯುತ್ತಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಸಭೆಗೆ ತಿಳಿಸಿದರು.ತಾ.ಪಂ. ಸದಸ್ಯ ಆಲದಕಟ್ಟೆ ತಿಮ್ಮಯ್ಯ ಮಾತನಾಡಿ, ಬಹುಶಃ ಹಣದ ಆಮಿಷದಿಂದಲೇ ತಾಲ್ಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ, ಈ ಕೂಡಲೇ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ಸಲ್ಲಿಸಿ ನಕಲಿ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಹರ್ಷ, ಹಂದನಕೆರೆ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ, ವೈದ್ಯರ ಬಳಿ ಯಾವುದೇ ಸರ್ಟಿಪಿಕೇಟ್ ಗಳಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ಇದರಿಂದ ಏನಾದರೂ ತೊಂದರೆಯಾದರೆ ಯಾರು ಜವಬ್ದಾರಿ ಎಂಬ ವಿಷಯವನ್ನು ಸಭೆಯಲ್ಲಿ ಮಂಡಿಸಿದಾಗ, ತಾಲ್ಲೂಕಿನಲ್ಲಿ ನಕಲಿ ವೈದ್ಯರು ಇರುವ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಹುಳಿಯಾರಿನ ಆಸ್ಪತ್ರೆಯಲ್ಲಿನ ಲ್ಯಾಬ್ಗೆ ಯಾರೇ ಹೋದರೂ ಕೆಮಿಕಲ್ ಇಲ್ಲಾ ಎಂದು ಹೇಳಿ ವಾಪಸ್ ಕಳುಹಿಸುತ್ತಾರೆ ಎಂದು ತಾ.ಪಂ.ಸದಸ್ಯ ಹುಳಿಯಾರ್ ಕುಮಾರ್ ದೂರಿದರು. ಶೆಟ್ಟಿಕೆರೆ ಆಸ್ಪತ್ರೆಯಲ್ಲಿ ವೈದ್ಯರು, ನರ್ಸಗಳಿಲ್ಲ ಕೂಡಲೇ ಇಲ್ಲಿಗೆ ವೈದ್ಯರನ್ನು ನೇಮಿಸುವಂತೆ ತಾ.ಪಂ.ಸದಸ್ಯೆ ಜಯಮ್ಮ ಹೇಳಿದರು. ರಾಮನಹಳ್ಳಿಯಲ್ಲಿ ಎರಡು ದಿನಕ್ಕೊಮ್ಮೆ ಜನರಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ ವೈದ್ಯರು ಈ ಬಗ್ಗೆ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ನಡೆಸಬೇಕು ಎಂದು ತಾ.ಪಂ.ಸದಸ್ಯೆ ಇಂದಿರಮ್ಮ ಹೇಳಿದರು. ಈ ವಿಷಯಗಳ ಕಡೆ ಗಮನ ಹರಿಸುವುದಾಗಿ ಆರೋಗ್ಯಾಧಿಕಾರಿ ಸಭೆಗೆ ತಿಳಿಸಿದರು.
ತಾ.ಪಂ.ಸದಸ್ಯೆ ಶೈಲಾಶಶಿಧರ್ ಮಾತನಾಡಿ, ಅಮೃತ ಬಿಂದು ಪ್ರಾಶನವನ್ನು ಮಕ್ಕಳಿಗೆ ಹಾಕಿ ಪ್ರತಿ ಮಕ್ಕಳಿಂದ ಇಂತಿಷ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ವದಂತಿ ಹರಡುತ್ತಿದೆ, ಆಯುಷ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯಿಂದ ಅನುಮತಿ ಪತ್ರ ತಂದವರಿಗೆ ಮಾತ್ರ ಅವಕಾಶ ನೀಡಿ, ಜೊತೆಗೆ ಪೋಷಕರ ಅನುಮತಿ ತೆಗೆದುಕೊಳ್ಳಿ, ಈ ವಿಷಯವನ್ನು ತಾಲ್ಲೂಕಿನ ಶಾಲಾ ಮುಖ್ಯ ಶಿಕ್ಷಕರುಗಳಿಗೆ ತಿಳಿಸುವಂತೆ ಸಭೆಗೆ ಹೇಳಿದರು.
ಪಟ್ಟಣದ ಲೇಡಿಸ್ ಹಾಸ್ಟಲ್ ಗೆ ತಾ.ಪಂ.ಸದಸ್ಯರಾದ ಹುಳಿಯಾರ್ ಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಹಾಗೂ ತಾ.ಪಂ.ಸದಸ್ಯೆ ಕಲ್ಯಾಣಿಬಾಯಿಯವರ ಎಸ್.ಸಿ ಗ್ರಾಂಟ್ನಲ್ಲಿ ಸೋಲಾರ್ ಅಳವಡಿಸಲಾಗಿತ್ತು, ಈ ಕಾರ್ಯ ನಡೆದು 1ವರ್ಷವಾದರೂ ಈವರೆವಿಗೂ ಬಿಲ್ ಆಗಿಲ್ಲ, ಮೂರು ತಾ.ಪಂ.ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರೂ
ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಈವರೆವಿಗೂ ಬಿಲ್ ಮಾಡಿಲ್ಲ ಎಂದು ದೂರಿದರಲ್ಲದೆ, ಈ ಬಗ್ಗೆ ಬಿಲ್ ಆಗುವವರೆಗು ಸಭೆ ನಡೆಯಲು ಬಿಡುವುದಿಲ್ಲ ಎಂದು ತಾ.ಪಂ.ಸದಸ್ಯೆ ಕಲ್ಯಾಣಿಬಾಯಿ, ಹುಳಿಯಾರ್ ಕುಮಾರ್ ಕೆಲ ಹೊತ್ತು ಸಭೆಯಲ್ಲಿ ಇ.ಓ ಮೇಲೆ ಮುಗಿಬಿದ್ದರು.
ಈ ವಿಚಾರವಾಗಿ ಸದಸ್ಯ ಪ್ರಸನ್ನಕುಮಾರ್ ಧ್ವನಿಗೂಡಿಸಿದರು. ಈ ವಿಷಯವಾಗಿ ತಾ.ಪಂ.ಸದಸ್ಯ ಆಲದಕಟ್ಟೆ ತಿಮ್ಮಯ್ಯ, ಹುಳಿಯಾರ್ ಕುಮಾರ್ ಕೆಲ ಕಾಲ ಜೋರು ಧ್ವನಿಯಲ್ಲಿ ವಾಗ್ವಾದ ನಡೆಸಿದರು. ಇದಕ್ಕೆ ಪ್ರತಿಕ್ರಯಿಸಿದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಇಲಾಖೆಯ ಯಾವುದಾದರೂ ಅನುದಾನದಲ್ಲಿ ಬಿಲ್ ಮಾಡಿಸಿಕೊಡುವುದಾಗಿ ಒಪ್ಪಿದ ನಂತರ ಸಭೆ ಮುಂದುವರೆಯಿತು.
ಆಹಾರ ಇಲಾಖೆಯ ಪ್ರೇಮ ಮಾತನಾಡಿ, ತಾಲ್ಲೂಕಿನಲ್ಲಿ 56257 ಪಡಿತರ ಚೀಟಿ ಇವೆ, ಇದರಲ್ಲಿ ಇರುವ ಕುಟುಂಬಕ್ಕೆ ಹೋಲಿಸಿದರೆ 8437 ಪಡಿತರ ಚೀಟಿಗಳು ಹೆಚ್ಚುವರಿಯಾಗಿವೆ, ಹೆಚ್ಚುವರಿಯಾಗಿರುವ ಪಡಿತರ ಚೀಟಿಗಳನ್ನು ತೆಗೆದುಹಾಕುವಂತೆ ಜಿಲ್ಲಾ ಕಛೇರಿಯಿಂದ ಸೂಚನೆ ಬಂದಿದೆ ಎಂದು ತಿಳಿಸಿದರು.
ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್ ಕುಮಾರ್ ಮಾತನಾಡಿ, ಪಡಿತರ ಚೀಟಿಗಳನ್ನು ತೆಗೆದುಹಾಕುವಾಗ ಕಾನೂನು ಬದ್ದವಾಗಿರಲಿ, ಉಳ್ಳವರಿಗಾಗಿ ಬಡವರ ಕಾರ್ಡ್ ತೆಗೆಯಬೇಡಿ ಎಂದು ಅಧಿಕಾರಿಗೆ ತಾಕೀತು ಮಾಡಿದರು.ತಾ.ಪಂ.ಸದಸ್ಯ ಕೇಶವಮೂರ್ತಿ ಮಾತನಾಡಿ, ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಅಲ್ಲದೆ ಬೇರೆ ಕಡೆ ಪಡೆಯಬಹುದಾದ ಇ.ಸಿ ಫೋರ್ಜರಿಯಾಗುತ್ತಿದೆ ಎಂದು ದೂರಿದರು. ಸಿಂಗದಹಳ್ಳಿರಾಜ್ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ ನಿಮ್ಮ ಇಲಾಖೆಯಲ್ಲೇ ಇದಕ್ಕೆ ಸಹಕರಿಸುತ್ತಿದ್ದಾರೆ ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಿ ಎಂದು ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ಯಳನಡು ಯತೀಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಪ್ರಸನ್ನಕುಮಾರ್, ಹರ್ಷ, ಜಯಮ್ಮ, ಮಧು, ಹೊನ್ನಮ್ಮ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
