ಚಿಗುರು ಕವನ ಸಂಕಲನ ಬಿಡುಗಡೆ

ತುಮಕೂರು

      ಹಳೇ ಬೇರಿನಿಂದ ಹೊಸ ಚಿಗುರು ಎಂಬಂತೆ ಕವಿಗಳು ಹಳೆಯ ಪರಂಪರೆಯನ್ನು ಮೈಗೂಡಿಸಿಕೊಂಡು ಕವನಗಳನ್ನು ರಚಿಸುವಂತಾಗಬೇಕು ಎಂದು ಸಂಸ್ಕೃತಿ ಚಿಂತಕರಾದ ಡಾ.ವಿ.ಚಂದ್ರಶೇಖರ ನಂಗಲಿ ತಿಳಿಸಿದರು.

     ನಗರದ ಕನ್ನಡ ಭವನದ ಸಭಾಂಗಣದಲ್ಲಿ ಚಿಗುರು ಸಾಹಿತ್ಯ ಮತ್ತು ಸಾಂಸ್ಕøತಿಕ ಬಳಗದ ವತಿಯಿಂದ ಆಯೋಜಿಸಿದ್ದ ಚಿಗುರು ಕವನ ಸಂಕಲನ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಪರಂಪರೆ ಸಾಕಷ್ಟಿದೆ. ನವೋದಯಗಳ ನಿರಂತರ ಸರಣಿ ಕವನಗಳಿಗಿದೆ. ಕುವೆಂಪು ಪ್ರಕಾರ ಪ್ರಥಮ, ದ್ವಿತೀಯ ಹಾಗೂ ತೃತೀಯ ನವೋದಯ ಎಂದು ಕರೆಯಲಾಗುತ್ತಿತ್ತು.

        ಈಗ ನಾಲ್ಕನೇಯ ನವೋದಯವನ್ನು ವಸಾಹತುಶಾಹಿ ನವೋದಯ ಎಂದು ಕರೆಯಲು ಇಚ್ಚೆಪಡುತ್ತೇನೆ. ಅಲ್ಲದೆ ಇದನ್ನು ಡಿಜಿಟಲ್ ನವೋದಯ ಎಂಥಲೂ ಕರೆಯಬಹುದಾಗಿದೆ. ಇಂದು ಬಿಡುಗಡೆ ಮಾಡಿದ ಕವನ ಸಂಕಲನದಲ್ಲಿ ಸಂಗ್ರಹಿಸಲಾದ ಎಲ್ಲಾ ಕವನಗಳನ್ನು ಈಗಾಗಲೇ ಓದಿದ್ದೇನೆ. ಇದಕ್ಕೆ ಚಿಗುರು ಎಂಬುದು ಸೂಕ್ತವಾಗಿದೆ. ಹೆಸರಿನಂತೆ ಇಲ್ಲಿ ಚಿಗುರು ಮಾತ್ರ ಕಂಡುಬರುತ್ತಿದೆ. ಇದಕ್ಕೆ ಮೊದಲನೆಯದಾಗಿ ಬೇರುಗಳನ್ನು ಸತ್ವವನ್ನು ಹೀರಿಕೊಂಡು ಚಿಗುರಬೇಕು.

        ಆಗ ಚಿಗುರು ಹಸಿರಾಗಿ ಪ್ರಾಣವಾಯುವನ್ನು ಬಿಡುಗಡೆ ಮಾಡುತ್ತವೆ ಎಂಬ ನಂಬಿಕೆ ಇದೆ. ಇದನ್ನು ಎಲ್ಲಾ ಯುವ ಕವಿಗಳು ಹಾಗೂ ಸಹೃದಯರು ಅರ್ಥ ಮಾಡಿಕೊಳ್ಳಬೇಕು. ಈ ಕವನ ಸಂಕಲನದಲ್ಲಿ ಪ್ರತಿಯೊಂದು ಹೊಸ ಕವನಗಳೇ ಇವೆ. ಇವುಗಳಲ್ಲಿ ಎಲ್ಲಿಯೂ ನಮ್ಮ ಹಿರಿಯ ಕವಿಗಳ ಸತ್ವ ಕಂಡು ಬಂದಿಲ್ಲ ಎಂದು ವಿಷಾದಿಸಿದರು.

        ನಮ್ಮ ಹಿರಿಯ ಕವಿಗಳು ಪರಂಪರೆಯಿಂದ ಹಾಗೂ ಪ್ರಕೃತಿಯಿಂದ ಬೇರ್ಪಟ್ಟವರಲ್ಲ. ಅವರು ಇವೆರಡನ್ನು ಒಗ್ಗೂಡಿಸಿಕೊಂಡು ಕವನಗಳನ್ನು ರಚಿಸಿದ್ದಾರೆ. ಆದರೆ ಕವನ ಸಂಕಲನವನ್ನು ಓದುವುದಾದರೆ ಹಳೆಯ ಪರಂಪರೆ ತುಂಬಾ ಕಡಿಮೆ ಇದೆ. ಆದರೆ ಇದರಲ್ಲಿನ ವಸ್ತು ವಿಷಯ ಮೆಚ್ಚುವಂತದ್ದು, ಭೂತಾಯಿ, ರೈತ ಹಾಗೂ ಮಹಿಳೆಯರ ಮೇಲೆ ಸಾಕಷ್ಟು ಕವನಗಳು ಇದರಲ್ಲಿ ಇವೆ. ಆದಿಕಾಲದಲ್ಲಿನ ಪಂಪನು ಹೇಳಿದಂತೆ ಮಾನವನು ತ್ಯಾಗಮೂಲವನ್ನು ಇಟ್ಟುಕೊಂಡಿರಬೇಕು.

        ತ್ಯಾಗದ ತಳಹದಿಯಲ್ಲಿ ಭೋಗವನ್ನು ಪಡೆಯಬೇಕು. ಇದಕ್ಕೆ ಅಕ್ಷರಗಳು ಮುಖ್ಯ. ಅದಾದ ನಂತರ ಹಾಡುಗಳನ್ನು ಹಾಡುವುದು ಕೊನೆಗೆ ಗೋಷ್ಠಿಗಳನ್ನು ನಡೆಸುವ ಮನಸ್ಸುಳ್ಳವರು ಮಾನವರಾಗುತ್ತಾರೆ. ಅಂತವರು ಕವಿಗಳಾಗುತ್ತಾರೆ. ಇದನ್ನೆ ಅಳವಡಿಸಿಕೊಂಡ ಕುವೆಂಪುರವರು ಕಲಾಸುಂದರಿ ಎಂಬ ಕವಿತೆಯನ್ನು ರಚನೆ ಮಾಡಿದ್ದಾರೆ.

        ಅದರಲ್ಲಿ ಯಾವುದೇ ಕಥೆಯಾಗಲಿ, ನಡೆದಂತಹ ಘಟನೆಯಲ್ಲ. ಇದರ ಬದಲಾಗಿ ವರ್ಣಾತೀತವಾಗಿ ರಚನೆ ಮಾಡಿದ್ದಾರೆ. ಅರಣ್ಯ ರಮಣಿ, ಅನವರಟ ಅಶೃಂಕಲೆ, ದ್ವಂಧ್ವ ಮಾಲಿನಿ, ನಿತ್ಯ ನೂತನ ಪ್ರಸೂತಿ, ಮಾನಸ ಮಂದಿರೆನಂತಹ ಹಲವನ್ನು ಕೇಂದ್ರವಾಗಿಟ್ಟುಕೊಂಡು ಅವುಗಳನ್ನು ಕವನಗಳ ಮೂಲಕ ಪರಿಚಯ ಮಾಡಿಕೊಟ್ಟವರು ಕುವೆಂಪುರವರು. ಅವರನ್ನು ಕಾಡಿನ ಕವಿ ಎಂದೇ ವರ್ಣಿಸಿಕೊಂಡಿದ್ದಾರೆ. ಅಂದರೆ ಕವನಗಳು ಹುಟ್ಟುವುದಕ್ಕೆ ಪ್ರಕೃತಿಯ ಸೊಬಗು ಕೂಡ ಮುಖ್ಯವಾಗುತ್ತದೆ ಎಂದು ತಿಳಿಸಿದರು.

        ಪ್ರಥಮ ಬಾರಿಗೆ ಅನೇಕ ಕವಿಗಳ ಮುಖಗಳನ್ನು ಪರಸ್ಪರ ನೋಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿ ಚಿಗುರು ಎಂದು ಹೆಸರನ್ನಿಟ್ಟುಕೊಂಡು ಕವಿಗಳನ್ನು ಒಗ್ಗೂಡಿಸಿ ಕವನ, ಕಾವ್ಯಗಳನ್ನು ರಚನೆ ಮಾಡಿರುವುದು ತುಂಬ ಸಂತಸದ ವಿಷಯವಾಗಿದೆ. ಇದು ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡಿ, ಇಂದಿನ ದಿನಗಳಲ್ಲಿ ಸ್ಪರ್ಧಿಗಳಂತೆ ಪ್ರತಿ ಗಂಟೆಯನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾವು ಇದ್ದೀನಿ ಎಂದು ತೋರಿಸಿಕೊಳ್ಳುವಂತಹ ಸ್ಥಿತಿ ಇಂದಿನದ್ದಾಗಿದೆ. ಅಕ್ಷರ ಜ್ಞಾನವಿದ್ದಂತವನಿಗೆ , ಭಾಷಾ ಪರಿಜ್ಞಾನ ಇದ್ದಂತವರಿಗೆ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದು ಏನೂ ಕಷ್ಟವಾಗುವುದಿಲ್ಲ. ಕೆಲವೊಂದು ಸಾಹಿತ್ಯಗಳು ಪ್ರತಿಯೊಬ್ಬರಿಗೂ ಅರ್ಥ ಮಾಡಿಸುವಂತಹ ಸಾಲುಗಳು ಅರ್ಥಗರ್ಭಿತವಾಗಿರುತ್ತವೆ. ಇಂದು ಸಮೃದ್ಧವಾಗಿ ಬೆಳೆ ಬೆಳೆಯುತ್ತೆ, ಆದರೆ ಅದರಲ್ಲಿ ಕಳೆ ಹೆಚ್ಚಾಗಿರುತ್ತೆ. ಅದರಂತೆ ಕವನಗಳು ಆಗಬಾರದು. ಜೀವನದಲ್ಲಿ ತಾಕಲಾಟಗಳು ಬರದೆ ಹೋದರೆ ಏನು ಸಾಧಿಸಲಾಗುವುದಿಲ್ಲ. ಜೀವನದಲ್ಲಿ ಹುಡುಕಾಟ ಇರಬೇಕು. ಪ್ರಕೃತಿಯೊಂದಿಗೆ ಹೊಂದಿಕೊಂಡಿರಬೇಕು. ಕಲೆಯನ್ನು, ಕವಿತೆಯನ್ನು ತನ್ನನ್ನು ತಾನು ಆಳವಾಗಿ ಇಳಿದಾಗ ಮಾತ್ರ ಅವುಗಳಲ್ಲಿನ ಸತ್ವ ನಮಗೆ ತಿಳಿಯುತ್ತದೆ ಎಂದರು.

       ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರು ಮೊಬೈಲ್‍ಗಳಿಗೆ ಮಾರುಹೋಗಿದ್ದಾರೆ. ಆದರೆ ಅದರಲ್ಲೂ ಕನ್ನಡ ಭಾಷೆಗೆ ಅನುವು ಮಾಡಿಕೊಟ್ಟಿರುವುದಕ್ಕೆ ಬಹಳ ಸಂತಸವಾಗುತ್ತದೆ. ಈ ಮೂಲಕವಾದರೂ ಕನ್ನಡ ಭಾಷೆ ಉಳಿಯುತ್ತಿದೆ. ಇಂದು ಇಷ್ಟೆಲ್ಲಾ ಕವನಗಳನ್ನು ಬರೆಯುವ ನಾವು ವಡ್ಡಾರಾದನೆ ಕೃತಿಯನ್ನು ಭಾಗವನ್ನು ಓದಲು ಯಾರಿಗೂ ಆಗುವುದಿಲ್ಲ. ಹಳಗನ್ನಡದ ಶಬ್ದಗಳನ್ನು ಓದಲು ಆಗುತ್ತಿಲ್ಲ. ಅಂದರೆ ನಮ್ಮಲ್ಲಿ ಭಾಷಾ ಜ್ಞಾನ ಕಳೆದುಹೋಗುತ್ತಿದೆ. ಹಾಗಾಗಿ ನಾವು ಭಾಷಾಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ಬಿಡುಗಡೆಯಾದ ಕವನ ಸಂಕಲನದ ಬಗ್ಗೆ ಮಾತನಾಡಿದ ತುಮಕೂರು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗಭೂಷಣ್ ಬಗ್ಗನಡು, ಸಾಮಾಜಿಕ ಮಾಧ್ಯಮಗಳಲ್ಲಿ ಹಸಿ ಸುಳ್ಳುಗಳನ್ನು ಬಿತ್ತರಿಸುತ್ತಿರುವ ವೇಳೆಯಲ್ಲಿ ಅದನ್ನೆ ಬಳಕೆ ಮಾಡಿಕೊಂಡ ಕವಿಗಳನ್ನು ಒಂದೆಡೆ ಸೇರಿಸಿರುವುದು ಶ್ಲಾಘನೀಯವಾದುದು. ಕವಿತೆಯಾಗಲು ಕುಲುಮೆಯಲ್ಲಿ ಕಾಯುತ್ತಿರುವ ಸಾಲುಗಳು ಈ ಕವನ ಸಂಕಲನವಾಗಿದೆ.

       ಕವನ ರಚಿಸಬೇಕಾದರೆ ಕಲಾತ್ಮಕತೆ ಬಹಳ ಮುಖ್ಯವಾಗುತ್ತದೆ. ಕಲಾತ್ಮಕತೆಗಿಂತ ಕಾವ್ಯ ವಸ್ತುವಿನ ಬದ್ಧತೆ ಇನ್ನೂ ಮುಖ್ಯವಾಗುತ್ತದೆ. ಈಗ ಆಯ್ಕೆ ಮಾಡಿಕೊಂಡ ಕವಿತೆಗಳಲ್ಲಿ ಪ್ರಧಾನವಾಗಿ ಮಹಿಳಾ ಸಮಸ್ಯೆಗಳು, ಅಸ್ಪøಷ್ಯತೆ, ಕೋಮುವಾದ, ಜಾತಿ ಮತ್ತು ದೇಶಪ್ರೇಮವನ್ನೊಳಗೊಂಡ ಕವಿತೆಗಳೇ ಶೇ.85ರಷ್ಟು ಇವೆ. ಈ ಕವಿತೆಗಳ ವಸ್ತು ಈ ಪ್ರಧಾನ ಸಮಸ್ಯೆಗಳೇ ಆಗಿದ್ದು, ಸಮಾಜದಲ್ಲಿ ಸ್ಥಿತಿ ಯಾವರೀತಿ ಇದೆ ಎಂಬುದನ್ನು ತೋರುತ್ತದೆ.

       ಮಾಧ್ಯಮಗಳಲ್ಲಿ ಬಿಂಬಿಸುವ ಪ್ರಚಾರಗಳು ಕೇವಲ ಕ್ಷಣಿಕ ಮಾತ್ರ ಆದರೆ ಕವನಗಳಲ್ಲಿ ಸಿಗುವ ಪ್ರಚಾರ ಜೀವನಪರ್ಯಂತ ಇರುತ್ತದೆ. ನಾವು ರಚಿಸುವ ಕವನಗಳಲ್ಲಿ ಚಲನಶೀಲತೆ ಇರಬೇಕು. ಪಾರಂಪರಿಕವಾಗಿ ಬದಲಾವಣೆಗಳಾಗುತ್ತಿರುತ್ತವೆ. ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಕವನ ರಚಿಸಲು ಅನುಕೂಲವಾಗುತ್ತದೆ ಎಂದರು.

         ಕಾರ್ಯಕ್ರಮದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ.ಬಸವರಾಜು ಅವರಿಗೆ ಚಿಗುರು ಸೇವಾರತ್ನ ಪ್ರಶಸ್ತಿ, ಶಿರಾದ ಉಜ್ಜನಕುಂಟೆಯ ಕವಿ ಡಿ.ರಂಗಸ್ವಾಮಿಯವರಿಗೆ ಚಿಗುರು ಕವಿರತ್ನ ಪ್ರಶಸ್ತಿ ಹಾಗೂ ತಿಪಟೂರಿನ ಕವಯಿತ್ರಿ ಎಚ್.ಸಿ.ಸಿದ್ದಗಂಗ ಅವರಿಗೆ ಚಿಗುರು ಸಾಹಿತ್ಯ ರತ್ನ ಪ್ರಶಸ್ತಿಯನ್ನು ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ವಿತರಿಸಿದರು.

        ಕವಿ ಹಾಗೂ ವಿಮರ್ಶಕರಾಗಿದ್ದ ಎಂ.ಎಚ್.ನಾಗರಾಜು ಅವರು, ಕವನ ಸಂಕಲನವನ್ನು ಬಿಡುಗಡೆ ಮಾತನಾಡಿ ಚಿಗುರು ಸಾಹಿತ್ಯ ಮತ್ತು ಸಾಂಸ್ಕತಿಕ ಬಳಗದ ಬಗ್ಗೆ ಹಾಗೂ ಕವನ ಸಂಕಲನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಿರಾ ಕ.ಸಾ.ಪ ಅಧ್ಯಕ್ಷ ಡಾ.ಎನ್.ನಂದೀಶ್ವರ್, ಕೊರಟಗೆರೆ ಅಧ್ಯಕ್ಷ ಹುಲಿಕುಂಟೆ ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಚಿಗುರು ಬಳಗದ ಅಧ್ಯಕ್ಷ ಕೆ.ಎಸ್.ಚಿದಾನಂದ ಸ್ವಾಗತ ಕೋರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಎಚ್.ಎಚ್.ಗೌಡ ನಿರೂಪಣೆ ಮಾಡಿದರೆ ಬಳಗ್ ಪ್ರಧಾನ ಕಾರ್ಯದರ್ಶಿ ಸತೀಶ್ ಎನ್.ಗರಣಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap