ಬಾಕಿ ವೇತನ ಪಾವತಿ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಹರಿಹರ :

      ಬಾಕಿ ವೇತನ ಪಾವತಿ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸಾರ್ವಜನಿಕ ಆಸ್ಪತ್ರೆ ಗುತ್ತಿಗೆ ಆಧಾರಿತ ದಿನಗೂಲಿ ಕಾರ್ಮಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಮುಖ್ಯ ಆಡಳಿತ ವೈದ್ಯಾಧಿಕಾರಿಯವರಿಗೆ ಮನವಿ ನೀಡಿದರು.

       ನಂತರ ಮಾತನಾಡಿದ ಮುಖಂಡರು, ಆಸ್ಪತ್ರೆಯಲ್ಲಿ 25 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಕಳೆದ ಮೂರು ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಕೇಳಿದರೆ ವೈದ್ಯಾಧಿಕಾರಿ ವೇತನದ ಬಿಲ್ ನೀಡಿಲ್ಲ ಎನ್ನುತ್ತಾರೆ. ಗುತ್ತಿಗೆದಾರರು ಇಲಾಖೆಯಿಂದ ಹಣ ಬರುವವರೆಗೆ ಕಾಯದೆ ತಮ್ಮ ಹಣದಲ್ಲಿ ವೇತನ ಪಾವತಿ ಮಾಡಬೇಕು. ನಂತರ ಬರುವ ಬಿಲ್ ಮೊತ್ತ ಪಡೆದುಕೊಳ್ಳಬೇಕು.

       ಹೊಸ ಟೆಂಡರ್‍ನಲ್ಲಿ 15 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಅವರಿಗೆ ಮಾತ್ರ ವೇತನ ಪಾವತಿ ಮಾಡಲಾಗುತ್ತದೆ. ಉಳಿದ 10 ಜನರಿಗೆ ವೇತನ ನೀಡಲಾಗುವುದಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. 100 ಹಾಸಿಗೆ ಆಸ್ಪತ್ರೆಯ ಶೌಚಾಲಯ, ವಾರ್ಡುಗಳು, ಕಾರಿಡಾರ್, ಓಟಿ ಥಿಯೇಟರ್, ಸೇರಿದಂತೆ ಹೊರ ಆವರಣವನ್ನು ಗುತ್ತಿಗೆ ಆಧಾರಿತ ನೌಕರರೆ ಸ್ವಚ್ಚಗೊಳಿಸಬೇಕಾಗಿದೆ.

       ಅಪಾಯಕಾರಿಯಾದ ಮೆಡಿಕಲ್ ಬಯೋ ವೇಸ್ಟ್ ಸಾಗಣೆಯನ್ನೂ ಮಾಡಬೇಕಾದ ಈ ನೌಕರರಿಗೆ ಸಂಬಳವನ್ನು ಪ್ರತಿ ತಿಂಗಳು ಕೊಡದೆ ಇರುವುದು ಶೋಷಣೆಯಲ್ಲದೆ ಬೇರೇನೂ ಅಲ್ಲ. ಗುತ್ತಿಗೆದಾರರು ಆಸಪತ್ರೆ ಆಡಳಿತದವರ ಕಡೆಗೆ, ಆಸ್ಪತ್ರೆಯವರು ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡುತ್ತಾ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ.

       ಅತ್ಯಂತ ಕಡಿಮೆ ಸಂಬಳಕ್ಕೆ ಆಸ್ಪತ್ರೆಯ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಕೆಲಸ ಮಾಡುವ ಗುತ್ತಿಗೆ ನೌಕರರ ಸ್ಥಿತಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತೆಂಬಂತಾಗಿದೆ. ಈ ಧೋರಣೆ ಹೀಗೆ ಮುಂದುವರೆದರೆ ಕೆಲಸವನ್ನು ಸ್ಥಗಿತಗೊಳಿಸಿ ನಿರಂತರ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

      ಮನವಿ ಸ್ವೀಕರಿಸಿದ ಮುಖ್ಯ ವೈದ್ಯಾಧಿಕಾರಿ ಡಾ.ಹನುಮನಾಯಕ್ ಮಾತನಾಡಿ, ಈ ತಿಂಗಳ 30ರಂದು ಆರೋಗ್ಯ ಸುರಕ್ಷಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು. ಮುಷ್ಕರವನ್ನು ಬಿಟ್ಟು ಕೆಲಸ ಮುಂದುವರೆಸಬೇಕಾಗಿ ಕೋರಿದರು.

      ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಕೆ.ಪಂಚಾಕ್ಷರಿ, ಗೌರವಾಧ್ಯಕ್ಷ ಎಚ್.ಕೆ.ಕೊಟ್ರಪ್ಪ, ಕಾರ್ಯದರ್ಶಿ ಎನ್.ಇ.ಸುರೇಶ್, ಕಾರ್ಮಿಕರಾದ ಧರ್ಮಿಬಾಯಿ, ಹನುಮಿಬಾಯಿ, ಲಕ್ಷ್ಮೀಬಾಯಿ, ಶಿವಪುತ್ರಪ್ಪ ಪೂಜಾರ್, ಶಾಂತಾಬಾಯಿ, ರಜನೀಕಾಂತ್, ವಿಜಯಮ್ಮ ಚಂದ್ರಶೇಖರ್, ಲಕ್ಷ್ಮೀಬಾಯಿ, ಈರಾಬಾಯಿ, ಕುಮಾರ ಎಚ್.ಟಿ., ರಮೇಶ್, ಮಂಜುನಾಥ್ ಎಂ.ಸಿ. ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link