ಬೆಂಗಳೂರು
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕೆ.ಸಿ.ರಾಮಮೂರ್ತಿ ರಾಜಿನಾಮೆಯಿಂದ ತೆರವಾಗಿರುವ ಸ್ಥಾನದ ಮೇಲೆ ಇದೀಗ ಕಾಂಗ್ರೆಸ್ ಕಣ್ಣು ಹಾಕಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ.
ರಾಜ್ಯ ವಿಧಾನಸಭೆಯಲ್ಲಿ ಹಾಲಿ ಸದಸ್ಯ ಬಲದ ಆಧಾರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅನಾಯಾಸವಾಗಿ ಗೆಲುವು ಸಾಧಿಸಲು ಅವಕಾಶವಿದೆ. ಆದರೆ, 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವುದರಿಂದ ರಾಜ್ಯಸಭೆ ಚುನಾವಣೆಯ ಲೆಕ್ಕಾಚಾರ ತಲೆಕೆಳಗಾಗಲಿದೆ. ಮತದಾನ ನಡೆಯುವುದಕ್ಕಿಂತಲೂ ಮುಂಚೆಯೇ ಉಪ ಚುನಾವಣೆಯ ಫಲಿತಾಂಶ ಬರುವುದರಿಂದ ಬಿಜೆಪಿ ಕನಿಷ್ಠ 5 ಕ್ಕಿಂತ ಕಡಿಮೆ ಸ್ಥಾನ ಪಡೆದರೆ ಬಿಜೆಪಿ ಅವಕಾಶ ಕಷ್ಟವಾಗಲಿದೆ.
ರಾಜ್ಯಸಭೆ ಚುನಾವಣೆಯಲ್ಲಿಯೂ ಜೆಡಿಎಸ್ ಬೆಂಬಲದೊಂದಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬಹುದು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ಕನಿಷ್ಠ 5 ಕ್ಕಿಂತ ಕಡಿಮೆ ಸ್ಥಾನ ಪಡೆದರೆ, ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಮತ್ತೆ ಮೈತ್ರಿ ಸರ್ಕಾರ ರಚನೆಗೆ ಈ ಬೆಳವಣಿಗೆ ಪೂರಕವಾಗಲಿದೆ ಎಂಬ ಲೆಕ್ಕಾಚಾರ ಹೈಕಮಾಂಡ್ ಮಟ್ಟದಲ್ಲಿದೆ .
ವಿಧಾನಸಭೆಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಜೆಡಿಎಸ್ ಸೇರಿ 100 ಸಂಖ್ಯಾಬಲವಾಗಲಿದ್ದು, ಬಿಜೆಪಿ 105 ಶಾಸಕರನ್ನು ಹೊಂದಿದೆ. ಪಕ್ಷೇತರ ಶಾಸಕರಾಗಿರುವ ಎಚ್.ನಾಗೇಶ್ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದು, ಅವರು ಚುನಾವಣೆಯಲ್ಲಿ ಮತದಾನ ಮಾಡುವ ಸಂದರ್ಭದಲ್ಲಿ ವಿಪ್ ಅನ್ವಯವಾಗದು.
ಹೀಗಾಗಿ ಅವರನ್ನು ಒಲಿಸಿಕೊಳ್ಳುವ ಜತೆಗೆ ಬಿಎಸ್‍ಪಿಯ ಸದಸ್ಯ ಎನ್. ಮಹೇಶ್ ಅವರನ್ನು ವಿಶ್ವಾಸಕ್ಕೆ ಪಡೆದು ಗೆಲುವು ಸಾಧಿಸಬಹುದು ಎನ್ನುವ ಚಿಂತನೆ ಮೊಳಕೆ ಒಡೆದಿದೆ. ಈಗಿರುವ ರಾಜ್ಯ ವಿಧಾನಸಭೆಯ 222 ಸಂಖ್ಯಾ ಬಲದಲ್ಲಿ (ಉಪ ಚುನಾವಣೆ ಫಲಿತಾಂಶ ಬಂದ ನಂತರ) ಕಾಂಗ್ರೆಸ್‍ಗೆ ಜೆಡಿಎಸ್ ಬೆಂಬಲ ಪಡೆದರೂ ಗೆಲುವಿಗೆ ಕನಿಷ್ಠ 112 ಸದಸ್ಯರ ಬೆಂಬಲ ಅಗತ್ಯವಿದೆ.
(ರಾಜರಾಜೇಶ್ವರಿ ಹಾಗೂ ಮಸ್ಕಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯದಿರುವುದರಿಂದ ಖಾಲಿ ಉಳಿದಿವೆ) ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕನಿಷ್ಠ 5ಕ್ಕಿಂತ ಕಡಿಮೆ ಗೆದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಕನಿಷ್ಠ 10 ಸ್ಥಾನ ಗೆದ್ದು, ಇಬ್ಬರೂ ಪಕ್ಷೇತರ ಶಾಸಕರ ಬೆಂಬಲ ಪಡೆದರೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಅನುಕೂಲವಾಗುತ್ತದೆ. ಅದೇ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕಿಳಿಸಿದರೆ, ಜೆಡಿಎಸ್ ವರಿಷ್ಠ ದೇವೇಗೌಡರು ಬೆಂಬಲ ನೀಡುವ ಸಾಧ್ಯತೆ ಇರುತ್ತದೆ.
ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಖರ್ಗೆಯವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ .ಆದರೆ, ಪ್ರಸಕ್ತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲ. ಜೆಡಿಎಸ್ ನಡೆ ಏನು ಎನ್ನುವುದು ಇನ್ನೂ ಸ್ಪಷ್ಟವಾಗದೇ ಇರುವುದರಿಂದ ಗೊಂದಲದ ಪರಿಸ್ಥಿತಿಯಲ್ಲಿ ಕಣಕ್ಕಿಳಿಯಲು ಖರ್ಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಒಂದು ವೇಳೆ ಜೆಡಿಎಸ್ ಬೆಂಬಲ ನೀಡಿದರೂ, ಡಿಸೆಂಬರ್ 9 ರ ಉಪ ಚುನಾವಣೆಯ ಫಲಿತಾಂಶದ ಮೇಲೆಯೇ ರಾಜ್ಯಸಭೆ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದ ಸ್ಪಷ್ಟ ಚಿತ್ರಣ ಸಿಗಲಿದೆ. ಚುನಾವಣೆಯ ಫಲಿತಾಂಶ ನಂಬಿ ನಾಮಪತ್ರ ಸಲ್ಲಿಸಿ, ನಿರೀಕ್ಷಿಸಿದಷ್ಟು ಸ್ಥಾನಗಳು ಬರದೇ ಹೋದರೆ, ಮುಜುಗರ ಅನುಭವಿಸುವುದು ಬೇಡ ಎನ್ನುವ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಅಭ್ಯರ್ಥಿಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮಲ್ಲಿಕಾರ್ಜುನ ಖರ್ಗೆಯವರು ಸ್ಪರ್ಧೆಗೆ ಹಿಂದೇಟು ಹಾಕಿದರೆ ಪರ್ಯಾಯ ಅಭ್ಯರ್ಥಿಗಳಾಗಿ ಅಬ್ದುಲ್ ವಹಾಬ್ ಹಾಗೂ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ಪಕ್ಷದ ನಾಯಕರ ಮಟ್ಟದಲ್ಲಿ ಯಾವುದೇ ಅಧಿಕೃತ ಚರ್ಚೆಗಳು ನಡೆದಿಲ್ಲ ಎನ್ನಲಾಗುತ್ತಿದೆ.ರಾಜ್ಯ ಕಾಂಗ್ರೆಸ್ ನಾಯಕರೂ ಉಪ ಚುನಾವಣಾ ಪ್ರಚಾರದಲ್ಲಿ ಸಕ್ರಿಯಯರಾಗಿರು ವುದರಿಂದ ರಾಜ್ಯಸಭೆ ಚುನಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎನ್ನಲಾಗುತ್ತಿದೆ.
ನಾಮಪತ್ರ ಸಲ್ಲಿಕೆಗೆ ಡಿಸೆಂಬರ್ 2 ಕೊನೆಯ ದಿನವಾಗಿರುವುದರಿಂದ ಉಪ ಚುನಾವಣೆಯ ಫಲಿತಾಂಶ ನಂಬಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಅಥವಾ ಸ್ಪರ್ಧೆಯಿಂದಲೇ ಹಿಂದೆ ಸರಿಯಬೇಕೋ ಎನ್ನುವ ಗೊಂದಲದಲ್ಲಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹತ್ತಕ್ಕೂ ಹೆಚ್ಚು ಸ್ಥಾನ ಪಡೆದರೆ ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ, ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿಯೇ ಉಳಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ತೊಡಕಾಗುತ್ತಾರೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯಸಭೆಗೆ ಕಳುಹಿಸುವುದರಿಂದ ಸಿದ್ದರಾಮಯ್ಯಗೆ ರಾಜ್ಯ ಕಾಂಗ್ರೆಸ್ ಮೇಲಿನ ಹಿಡಿತ ತಮ್ಮ ಕೈಯಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ