ದಾವಣಗೆರೆ:
ಈ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಈ ದೇಶದ ಘನತೆ, ಗಾಂಭೀರ್ಯತೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹರಾಜು ಹಾಕುತ್ತಿದ್ದಾರೆ. ಸಭೆ ಸಮಾರಂಭಗಳಲ್ಲಿ ನಗೆಪಾಟಲಿಗೆ ಈಡಾಗುತ್ತಿರುವ ರಾಹುಲ್ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಸುಫಾರಿ ಪಡೆದಿದ್ದಾರೆಂದು ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ಲೇವಡಿ ಮಾಡಿದರು.
ಜಗಳೂರು ವಿಧಾನಸಭಾ ಕ್ಷೇತ್ರದ ತೋರಣಗಟ್ಟೆ ಗ್ರಾಮದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಬಿ.ಜೆ.ಪಿ ಕೈಹಾಕುವ ಅವಶ್ಯಕತೆ ಇಲ್ಲ.
ರಾಹುಲ್ ಗಾಂಧಿಯೇ ಆ ಕೆಲಸವನ್ನು ಮಾಡಿ ಮುಗಿಸಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.ಅಹಿಂದ ನಾಯಕರೆನ್ನುವ ಸಿದ್ದರಾಮಯ್ಯನವರು ಎಷ್ಟು ಅಹಿಂದ ಮುಖಂಡರನ್ನು ಬೆಳೆಸಿದ್ದಾರೆ, ಸ್ವಜಾತಿಯವರು ಚುನಾವಣೆಗೆ ನಿಂತಾಗ ಮಾತ್ರ ಸಿದ್ದರಾಮಯ್ಯನವರಿಗೆ ಅಹಿಂದ ನೆನಪಾಗುತ್ತದೆ. ನಾವೆಲ್ಲ ಅಹಿಂದ ವರ್ಗಕ್ಕೆ ಸೇರಿದ ನಾಯಕರಲ್ಲವೇ ನಮ್ಮ ತಂದೆಗೆ ಇದೇ ಸಿದ್ದರಾಮಯ್ಯ ಕಡೆಗಣಿಸಿದ್ದರು, ಇದೇ ಜೆ.ಡಿ.ಎಸ್.ನಾಯಕರು ನಾನು ಸೋಲುತ್ತೇನೆ ಎಂದು ಟಿಕೆಟ್ ನೀಡದೇ ನಿರಾಕರಿಸಿದ್ದರು.
ಆದರೆ ಯಡಿಯೂರಪ್ಪನವರು ನಮ್ಮ ಶಕ್ತಿಯ ಮೇಲೆ ನಂಬಿಕೆಯಿಟ್ಟು ಟೆಕೆಟ್ ನೀಡಿದರು, ಅವರ ದೂರದೃಷ್ಟಿಯ ಫಲದಿಂದಾಗಿ ನಾನು ಶಾಸಕಿಯಾಗಿ ಇಂದು ನಿಮ್ಮ ಮುಂದೆ ನಿಂತಿದ್ದೇನೆ, ಯಡಿಯೂರಪ್ಪನವರ ಋಣ ತೀರಿಸುವ ಕೆಲಸವನ್ನು ನಮ್ಮ ಸಮುದಾಯ ಮಾಡಬೇಕಾಗಿದೆ ಎಂದು ಕತೆ ನೀಡಿದರು.
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಅಂತಹ ಸಮುದಾಯಗಳು ಸಾಮಾಜಿಕವಾಗಿ ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲು ಸಾಕಷ್ಟು ಶ್ರಮಪಟ್ಟಿದ್ದರು, ಸಣ್ಣ ಸಣ್ಣ ಸಮಾಜಗಳನ್ನು ಇಲ್ಲಿಯವರೆಗೆ ಯಾರಾದರೂ ಗುರುತಿಸಿದ್ದರೆ ಅದು ಯಡಿಯೂರಪ್ಪನವರು ಮಾತ್ರ ಎಂದರು.
ಯಾದವ ಸಮುದಾಯಕ್ಕೂ ಕೂಡ ಸಾಕಷ್ಟು ಕೊಡುಗೆಗಳನ್ನು ಬಿ.ಜೆ.ಪಿ. ಸರ್ಕಾರ ನೀಡಿದೆ, ಇದನ್ನು ನಾವ್ಯಾರೂ ಕೂಡ ಮರೆಯಬಾರದು, ಇಂದು ದೇಶ ಅಭಿವೃದ್ದಿಯತ್ತ ದಾಪುಗಾಲಿಡುತ್ತಿದೆ, ಈ ವೇಗವನ್ನು ಕಾಯ್ದುಕೊಳ್ಳಲು ನರೇಂದ್ರ ಮೋದಿಯವರ ಕೈಬಲಪಡಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿರುವ ಜಿ.ಎಮ್.ಸಿದ್ದೇಶ್ವರ ಅವರು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುವಂತಹ ವ್ಯಕ್ತಿ, ನಾನು ಈ ದಿನ ಶಾಸಕಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರೆ ಅದರಲ್ಲಿ ಸಿದ್ದೇಶಣ್ಣನವರ ಶ್ರಮವೂ ಸಾಕಷ್ಟಿದೆ ಈ ಹಿನ್ನೆಲೆಯಲ್ಲಿ ಇಂದು ಅವರ ಪರವಾಗಿ ನಿಮ್ಮೆಲ್ಲರ ಬಳಿ ಮತಯಾಚನೆಗಾಗಿ ಬಂದಿದ್ದೇನೆ,
ನಮಗೆ ಇಂದು ನಮ್ಮ ಸಮುದಾಯವನ್ನು ಅಪ್ಪಿಕೊಳ್ಳುವ, ಕಷ್ಟ ಸುಖಗಳನ್ನು ಕೇಳುವ, ನೋವುಗಳಿಗೆ ಸ್ಪಂದಿಸುವ ನಾಯಕರು ಬೇಕಾಗಿದ್ದಾರೆ, ಈ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡಿರುವ ಸಿದ್ದೇಶಣ್ಣ ನಮ್ಮೆಲ್ಲರ ಸರ್ವ ಸಮ್ಮತ ಆಯ್ಕೆಯಾಗಬೇಕು ಎಂದರು.
ಯಾದವ ಸಮುದಾಯದ ನಾವೆಲ್ಲರೂ ಅವರಿಗೆ ಬೆನ್ನೆಲುಬಾಗಿ ನಿಂತು ಅವರ ಋಣ ತೀರಿಸುವ ಕೆಲಸ ಮಾಡೋಣ. ಸ್ವಾತಂತ್ರ ನಂತರದಿಂದ ಇಲ್ಲಿಯವರೆಗೆ ನಮ್ಮನ್ನು ಓಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ನಮ್ಮ ಮತಗಳು ಮಾರಾಟಕ್ಕಿಲ್ಲ ಎಂಬುದನ್ನು ನಾವು ತೋರಿಸುವ ಕಾಲ ಈಗ ಒದಗಿಬಂದಿದೆ, ಸರಿರಾತ್ರಿ ಹನ್ನೆರಡು ಗಂಟೆಯಲ್ಲಿ ಪೋನ್ ಕಾಲ್ ಮಾಡಿದರೂ ಅದಕ್ಕೆ ಉತ್ತರ ನೀಡುವ ಸಂಸದ ಈ ದೇಶದಲ್ಲಿ ಯಾರಾದರೂ ಇದ್ದರೆ ಅದು ಸಿದ್ದೇಶಣ್ಣ ಮಾತ್ರ ಎಂದರು.
ಜಗಳೂರು ವಿಧಾನಸಭಾ ಕ್ಷೇತ್ರದ ಅಣಬೂರು ಗೊಲ್ಲರಹಟ್ಟಿ, ತೋರಣಗಟ್ಟೆ, ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜಗಳೂರು ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಗುಂಡ್ಲುಪೇಟೆ ಶಾಸಕ ನಿರಂಜನ್, ಹಿರಿಯೂರು ಶ್ರೀನಿವಾಸ್, ಜಿ.ಎಸ್, ಅನಿತ್‍ಕುಮಾರ್, ಭೀಮಸಮುದ್ರದ ಸಿದ್ದಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ಶಾಂತಕುಮಾರಿ ಶಶಿಧರ್ ಸೇರಿದಂತೆ ಅನೇಕರು ಪ್ರಚಾರದಲ್ಲಿದ್ದರು.