ದಾವಣಗೆರೆ:
ಕಾಂಗ್ರೆಸ್ ಹೈಕಮಾಂಡ್ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ, ಅಭ್ಯರ್ಥಿ ಆಯ್ಕೆಯ ಗೊಂದಲಕ್ಕೆ ತೆರೆ ಬಿತ್ತು ಎನ್ನುವಷ್ಟರಲ್ಲಾಗಲೇ ‘ಕೈ’ ಪಕ್ಷದ ರಾಜಕೀಯ ಚಟುವಟಿಕೆಗಳು ಬೆಂಗಳೂರಿಗೆ ಶಿಫ್ಟ್ ಆಗಿವೆ.
ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ಘೋಷಣೆಯಾದ ಮಾರನೆಯ ದಿನ(ಮಾ.24ರ ಭಾನುವಾರ)ವೇ ದಾವಣಗೆರೆ ಕಾಂಗ್ರೆಸ್ ಪಕ್ಷದ ರಾಜಕೀಯ ಚಟುವಟಿಕೆಗಳು ಬೆಂಗಳೂರಿಗೆ ಶಿಫ್ಟ್ ಆಗಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಮಾಜಿ ಶಾಸಕರುಗಳು ಹಾಗೂ ಪಕ್ಷದ ಪ್ರಮುಖರು ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ.
ಟಿಕೆಟ್ ಘೋಷಣೆಯ ಬಗ್ಗೆ ಮಾಧ್ಯಮಗಳ ಎದುರು ಸಂತಸದ ಜೊತೆಗೆ ಅಚ್ಚರಿಯನ್ನೂ ವ್ಯಕ್ತಪಟಿಸಿದ್ದ ಶಾಮನೂರು ಶಿವಶಂಕರಪ್ಪ, ಎದುರಾಳಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರ ಠೇವಣಿ ಕಳೆಯುವುದಾಗಿ ಹೇಳಿ, ಚುನಾವಣೆಯ ಬಗ್ಗ ಪಕ್ಷದ ಮುಖಂಡರೊಂದಿಗೆ ಬೆಂಗಳೂರಿಗೆ ತೆರಳಿರುವುದಾಗಿ ಹೇಳಿ ಹೋಗಿದ್ದರು. ಆದರೆ, ಈಗ ಶಾಮನೂರು ವಯಸ್ಸಿನ ಕಾರಣ ನೀಡಿ, ಲೋಕಸಭಾ ಅಖಾಡಕ್ಕೆ ಇಳಿಯುವುದಿಲ್ಲ ಎಂಬುದಾಗಿ, ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಟಿಕೆಟ್ ಘೋಷಣೆಯಿಂದ ಗೊಂದಲಕ್ಕೆ ತೆರೆ ಬಿದ್ದಂತಾಯಿತು ಎಂಬುದಾಗಿ ಬೀಗಿದ್ದ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಗೊಂದಲದ ವಾತಾವರಣ ಮುಂದುವರೆದಿದೆ.
ತಮಗೆ ವಯಸ್ಸಾಗಿದ್ದು, ಕ್ಷೇತ್ರದಾದ್ಯಂತ ತೆರಳಿ ಚುನಾವಣಾ ಪ್ರಚಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನನಗೆ ಬಿ-ಫಾರ್‍ಂ ಬೇಡ. ಬೇಕಾದರೆ, ತಮ್ಮ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಬಿ-ಫಾರಂ ನೀಡಿ, ಇಲ್ಲವಾದರೆ, ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟುಕೊಳ್ಳಿ ತಮ್ಮದೇನೂ ಅಭ್ಯಂತರವಿಲ್ಲ ಎಂಬುದಾಗಿ ಶಾಮನೂರು ಶಿವಶಂಕರಪ್ಪನವರು ಕೈ ಚೆಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.
ಶಾಮನೂರು ಶಿವಶಂಕರಪ್ಪನವರ ನಡೆ ಕಾಂಗ್ರೆಸ್ ಹೈಕಮಾಂಡ್‍ಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದ್ದು, ಇತ್ತ ನುಂಗಲೂ ಆಗದೇ, ಅತ್ತ ಉಗಿಯಲೂ ಆಗದೇ ಪರಿತಪ್ಪಿಸುತ್ತಿದೆ. ಇನ್ನೊಂದು ಮೂಲದ ಪ್ರಕಾರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಾವು ಅಭ್ಯರ್ಥಿಯಾಗಬೇಕಾದರೆ ಕಾಂಗ್ರೆಸ್ ಹೈಕಮಾಂಡ್‍ಗೆ ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸಲು ಕಾಂಗ್ರೆಸ್ ವರಿಷ್ಠರು ಒಪ್ಪುತ್ತಿಲ್ಲ. ಹೀಗಾಗಿ ಮಲ್ಲಿಕಾರ್ಜುನ್ ಸಹ ಸ್ಪರ್ಧೆಗೆ ನಿರುತ್ಸಾಹ ತೋರುತ್ತಿದ್ದಾರೆಂಬುದಾಗಿ ತಿಳಿಸಿವೆ.
ಹೀಗೆ ಅಪ್ಪ-ಮಗ ಇಬ್ಬರೂ ಲೋಕಸಭಾ ಚುನಾವಣೆಯಿಂದ ದೂರ ಉಳಿಯಲು ತೀರ್ಮಾನಿಸಿರುವುದು ನಿಜವೇ ಆಗಿದ್ದರೇ, ಕಾಂಗ್ರೆಸ್ ಹೈಕಮಾಂಡ್ ಮತ್ತೊಬ್ಬ ಅಭ್ಯರ್ಥಿಯ ಹುಡುಕಾಟ ನಡೆಸುವುದು ಅನಿವಾರ್ಯ ಸಹ ಆಗಲಿದೆ.
ಇನ್ನೂ ಲೋಕಸಭಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದಲೇ (ಮಾ.28ರಿಂದ) ಆರಂಭವಾಗಲಿದೆ. ಆದರೆ, ಈ ವರೆಗೂ ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗದಿರುವುದು ಬರೀ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾತ್ರವಲ್ಲ. ಜೆಡಿಎಸ್ ಕಾರ್ಯಕರ್ತರಲ್ಲೂ ಗೊಂದಲದ ಜೊತೆ, ಜೊತೆಗೆ ಜಿಗುಪ್ಸೆಯನ್ನು ಸಹ ಮೂಡಿಸಿದಂತಾಗಿದೆ.