ಬೆಂಗಳೂರು:
ವಿವಾಹವಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗದ ಕಾರಣಕ್ಕೆ ಉಂಟಾದ ಜಗಳದಲ್ಲಿ ಪತ್ನಿಯ ಕತ್ತು ಹಿಸುಕಿ ಪತಿ ಕೊಲೆಗೈದಿರುವ ದಾರುಣ ಘಟನೆ ಶುಕ್ರವಾರ ಮುಂಜಾನೆ ನಂಧಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದವರನ್ನು ಆಂಧ್ರಮೂಲದ ಕಲ್ಪನಾ (27)ಎಂದು ಗುರುತಿಸಲಾಗಿದೆ. ಕೊಲೆಗೈದು ಪರಾರಿಯಾಗಿರುವ ಪತಿ ರಮೇಶ್‍ಗಾಗಿ ನಂದಿನಿ ಲೇಔಟ್ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ 10 ವರ್ಷಗಳ ಹಿಂದೆ ಕಲ್ಪನಾ ಅವರನ್ನು ವಿವಾಹವಾಗಿದ್ದು ಲಗ್ಗೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ದಂಪತಿ ವಾಸಿಸುತ್ತಿದ್ದರು ಕಲ್ಪನಾ ಕೂಡ ಗಾರ್ಮೆಂಟ್ಸ್‍ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.
ವಿವಾಹವಾಗಿ ವರ್ಷಗಳೇ ಕಳೆದರೂ ದಂಪತಿಗೆ ಮಕ್ಕಳಿರಲಿಲ್ಲ. ಈ ವಿಚಾರವಾಗಿ ಪತಿ-ಪತ್ನಿಯ ನಡುವೆ ಆಗಾಗ ಜಗಳವುಂಟಾಗುತ್ತಿತ್ತು. ಮುಂಜಾನೆ 4ರ ವೇಳೆ ದಂಪತಿ ನಡುವೆ ಜೋರಾಗಿ ಜಗಳ ನಡೆದು ಅಕ್ಕ-ಪಕ್ಕದ ಮನೆಯವರಿಗೂ ಕೇಳಿಸಿದೆ. ಬೆಳಿಗ್ಗೆ 6ರ ವೇಳೆ ಜಗಳ ತಣ್ಣಗಾಗಿದೆ.
ಅಕ್ಕ-ಪಕ್ಕದ ಮನೆಯವರು ಜಗಳ ನಿಂತ ನಂತರ ಕಲ್ಪನಾ ಅವರನ್ನು ಮಾತನಾಡಿಸಲು ಬಂದು ನೋಡಿದಾಗ ಅವರು ಮೃತಪಟ್ಟಿರುವುದು ಕಂಡು ಬಂದಿದೆ. ಕೂಡಲೇ ನಂದಿನಿ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಲ್ಪನಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿರುವ ಪತಿ ರಮೇಶ್‍ಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ