ಕೊರಟಗೆರೆ
ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು 4 ವರ್ಷದ ಮಗಳೊಂದಿಗೆ ಡೀಸೆಲ್ ಸುರಿದು ಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬಿದಲೋಟಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ರಮ್ಯ(23), ಮಗಳು ಬಿಂದು(4) ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟರಾಗಿದ್ದಾರೆ. ಈಕೆ ಸಾಂಸಾರಿಕ ಕಲಹದಿಂದ ಕಳೆದ 8 ದಿನಗಳ ಹಿಂದೆ ತನ್ನ ತಾಯಿಯ ಮನೆಗೆ ಬಂದಿದ್ದು, ಬುಧವಾರ ಜಮೀನಿನ ಬಳಿ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಗೆ ರಮ್ಯ ಕಳೆದ 8 ವರ್ಷಗಳ ಹಿಂದೆ ಇದೇ ಹೋಬಳಿಯ ಹೊನ್ನಾರನಹಳ್ಳಿ ಗ್ರಾಮದ ಸಿದ್ದಪ್ಪನ ಮಗ ಮಹೇಶ್ ಎಂಬುವರೊಂದಿಗೆ ಮದುವೆಯಾಗಿತ್ತು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು, ಬೆಂಗಳೂರಿನಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕೆಲವೊಂದು ಸಾಂಸಾರಿಕ ಕಲಹದಿಂದ ಬೇಸತ್ತ ಮಹಿಳೆ ಒಂದು ವಾರದ ಹಿಂದಷ್ಟೆ ತವರು ಮನೆಗೆ ಬಂದಿದ್ದರು. ಬುಧವಾರದಂದು ತಮ್ಮ ಜಮೀನಿನ ಬಳಿ ಯಾರೂಇಲ್ಲದ ಸಮಯದಲ್ಲಿ ಡೀಸೆಲ್ ಸುರಿದುಕೊಂಡು ತನ್ನ ಮಗಳೊ ಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಾಂಸಾರಿಕ ಜೀವನದಲ್ಲಿ ಮನ ನೊಂದ ಮೃತ ಮಹಿಳೆ ರಮ್ಯ ಹಾಗೂ ಮಗಳಾದ ಬಿಂದುವಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಾಗ ಬೆಂಕಿಯ ತಾಪಕೆ ತಾಯಿ ಮಗು ಕಿರುಚಾಡಿದ್ದಾರೆ. ಸಾರ್ವಜನಿಕರು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸುವ ಪ್ರಯತ್ನ ಪಟ್ಟರಾದರೂ, ಹುಲ್ಲಿನ ಬಣವೆ ಪಕ್ಕದಲ್ಲೇ ಇದ್ದ ಕಾರಣ, ಹೆಚ್ಚು ಬೆಂಕಿ ಆವರಿಸಿಕೊಂಡು, ತೀವ್ರ ಸುಟ್ಟ ಗಾಯಗಳಿಂದ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಮುನಿರಾಜು, ಪಿಎಸ್‍ಐ ಮಂಜುನಾಥ್, ಎಎಸ್‍ಐ ಮಂಗಳಗೌರಮ್ಮ ಸ್ಥಳ ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








