ದೇವಸ್ಥಾನದ ಬೀಗ ಹೊಡೆದು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದವರ ಬಂಧನ

ತುರುವೇಕೆರೆ

      ಗುರುವಾರ ರಾತ್ರಿ ದಂಡಿನಶಿರದ ಹೊನ್ನಾದೇವಿ ದೇವಾಲಯಕ್ಕೆ ನುಗ್ಗಿ ಹಣದ ಹುಂಡಿ ಹೊಡೆದು ಲಕ್ಷಾಂತರ ರೂಗಳನ್ನು ದೋಚಿರುವ ಘಟನೆ ಮಾಸುವ ಮುನ್ನವೇ ಪಕ್ಕದ ಗ್ರಾಮವಾದ ದುಂಡ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರಸ್ವಾಮಿ ದೇವಸ್ಥಾನದ ಬೀಗ ಹೊಡೆಯಲು ಪ್ರಯತ್ನಿಸುತ್ತಿದ್ದುದನ್ನು ಗ್ರಾಮದ ಯುವಕರು ವಿಫಲಗೊಳಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

      ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಅಪಾರ ಭಕ್ತವೃಂದವನ್ನು ಹೊಂದಿದ್ದು ಊರವರೆಗಿನ ರಸ್ತೆ ಪಕ್ಕದಲ್ಲಿದೆ. ಶನಿವಾರ ತಡ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಕಳ್ಳರು ಹೊರಗಿನಿಂದ ದೇವಾಲಯಕ್ಕೆ ಪ್ರವೇಶವಿರುವ ಮರದ ಬಾಗಿಲಿನ ಬೀಗ ಮುರಿಯಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಗ್ರಾಮದ ಯುವಕರಿಗೆ ಬೀಗ ಒಡೆಯುವ ಶಬ್ದ ಕೇಳಿಸಿ ದೇವಸ್ಥಾನದ ಬಳಿ ಬರುವುದರೊಳಗೆ ಕಳ್ಳರು ಪೇರಿ ಕಿತ್ತಿದ್ದಾರೆ .

      ತಕ್ಷಣ ಕೂಗಾಡುತ್ತಾ ಕಳ್ಳರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಆಟೋವೊಂದು ತುಂಬಾ ವೇಗವಾಗಿ ಹೋಗುತ್ತಿದ್ದುದನ್ನು ಗಮನಿಸಿ ಅನುಮಾನಗೊಂಡು ಅದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆಟೋವನ್ನು ತಡೆಯಲು ಎಷ್ಟೇ ಪ್ರಯತ್ನ ಪಟ್ಟರೂ ನಿಲ್ಲಿಸದೆ ವೇಗವಾಗಿ ಹೋಗುತ್ತಿದ್ದ ಆಟೋವನ್ನು ಗ್ರಾಮದ ಯುವಕರು ಸುತ್ತುವರಿದು ಸುಮಾರು 3 ಕಿ.ಮೀ. ಹಿಂಬಾಲಿಸಿ ಆಟೋ ತಡೆದಿದ್ದಾರೆ.

         ಮೂವರಲ್ಲಿ ಒಬ್ಬ ತಪ್ಪಿಸಿಕೊಂಡಿದ್ದು ಆಟೋ ಹಾಗೂ ಆಟೋದಲ್ಲಿದ್ದ ಇಬ್ಬರನ್ನು ದಂಡಿನಶಿವರ ಪೊಲೀಸರಿಗೆ ಒಪ್ಪಿಸಿದಾರೆ.
ಬೆಳಗ್ಗೆ ಗ್ರಾಮಸ್ಥರು ನೀಡಿದ ದೂರಿನನ್ವಯ ಡಿವೈಎಸ್‍ಪಿ ಶಾಂತ್‍ವೀರ್ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

         ಕಾರ್ತಿಕೋತ್ಸವ ಸಂದರ್ಭದಲ್ಲಿ ಹುಂಡಿಯಲ್ಲಿ ಭಕ್ತರ ಕಾಣಿಕೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳ ಹಣ ಸಂಗ್ರಹವಾಗುತ್ತದೆ. ಹುಂಡಿ ಹಣದ ಆಸೆಗಾಗಿ ಕಳ್ಳರು ಬೀಗ ಹೊಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ ಎಂದು ದೇವಸ್ಥಾನದ ಧರ್ಮದರ್ಶಿ ಸಿದ್ದಲಿಂಗಯ್ಯ ತಿಳಿಸಿದರು. ಗ್ರಾಮದ ಯವಕರು ಗ್ರಾಮದ ಕಣ್ಗಾವಲಾಗಿರುವುದಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link