ಬೆಂಗಳೂರು 

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ತಮಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಸಂಜೆಯೊಳಗೆ ಪಕ್ಷ ತೀರ್ಮಾನ ಪ್ರಕಟಿಸದಿದ್ದಲ್ಲಿ ನಾಳೆ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಯುತ್ತೇನೆಂದು ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕಾಗಿ ತಾವು ಸಾಕಷ್ಟು ದುಡಿದಿದ್ದೇನೆ. ಬಿಜೆಪಿ ಸಂಸದನಾಗಿದ್ದ ಸಂದರ್ಭದಲ್ಲಿ ಕೂಡ ಸಾಕಷ್ಟು ಜನಸೇವೆ ಮಾಡಿದ್ದೇನೆ. ಇದನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ನೀಡುತ್ತದೆ ಎಂದು ನಿರೀಕ್ಷಿಸಿದ್ದೆ. ಬೆಂಗಳೂರು ಕೇಂದ್ರದಿಂದ ಟಿಕೆಟ್ ನಿರೀಕ್ಷಿಸಿದ್ದೆ. ಇದರಿಂದ ತಮಗೆ ಹಾಗೂ ಸಮುದಾಯದವರಿಗೆ ಸಾಕಷ್ಟು ಬೇಸರವಾಗಿದೆ. ಕಾಂಗ್ರೆಸ್ ತನ್ನ ಪಾಲಿಗೆ ಲಭಿಸಿರುವ 20 ಕ್ಷೇತ್ರಗಳಲ್ಲಿ ಒಂದನ್ನಾದರೂ ಕ್ರೈಸ್ತರಿಗೆ ನೀಡದಿರುವುದು ಬೇಸರ ತಂದಿದೆ ಎಂದರು.
ಇದೀಗ ಕೊನೆಯ ಅವಕಾಶವಾಗಿ 21ನೇ ಕ್ಷೇತ್ರದ ರೂಪದಲ್ಲಾದರೂ ಬೆಂಗಳೂರು ಉತ್ತರದಲ್ಲಿ ತಮಗೆ ಟಿಕೆಟ್ ನೀಡಬಹುದೆಂಬ ವಿಶ್ವಾಸ ಹೊಂದಿದ್ದೇನೆ. ಪಕ್ಷ ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ವರಿಷ್ಠರಲ್ಲಿ ವಿನಂತಿಸಿಕೊಂಡರು.
ಬೆಂಗಳೂರು ಉತ್ತರದಿಂದ ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ನನ್ನ ಸೇವೆಯನ್ನು ಪರಿಗಣಿಸಿ ನನಗೊಂದು ಅವಕಾಶ ನೀಡಬೇಕು. ಕಾಂಗ್ರೆಸ್ ಶಾಸಕರ ಬಲವು ಇಲ್ಲಿ ಹೆಚ್ಚಿರುವುದರಿಂದ ನನ್ನ ಗೆಲುವು ಸುಲಭವಾಗಲಿದೆ. ಕಾಂಗ್ರೆಸ್ ಪಕ್ಷ ಇದಕ್ಕೆ ವ್ಯತಿರಿಕ್ತವಾಗಿ ನಿರ್ಧಾರ ಕೈಗೊಂಡರೆ ಅದರಿಂದ ಪಕ್ಷಕ್ಕೆ ಹೆಚ್ಚಿನ ನಷ್ಟವಾಗಲಿದೆ. ನಾನು ಇಂದು ನನ್ನ ಬೆಂಬಲಿಗರ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರವನ್ನು ತಿಳಿಸುತ್ತೇನೆ ಎಂದರು.
ಕಾಂಗ್ರೆಸ್ ಕೂಡ ಕ್ರೈಸ್ತ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ.. ಕ್ರಿಶ್ಚಿಯನ್ ಸಮುದಾಯವನ್ನು ಎಲ್ಲಾ ಪಕ್ಷಗಳು ಸಂಪೂರ್ಣವಾಗಿ ಕಡೆಗಣಿಸಿವೆ. ಕರ್ನಾಟಕದಿಂದ ತಮಗೆ ಹಾಗೂ ನಿವೇದಿತ ಆಳ್ವಾಗೆ ಟಿಕೆಟ್ ಸಿಗುವ ಆಸೆ ಇತ್ತು. ರಾಷ್ಟ್ರಮಟ್ಟದಲ್ಲಿ ಕೂಡ ನಮ್ಮ ನಾಯಕರುಗಳಿಗೆ ಟಿಕೆಟ್ ಸಿಗುವ ನಿರೀಕ್ಷೆಯೂ ಸಹ ಹುಸಿಯಾಗಿದೆ ಎಂದು ಸಾಂಗ್ಲಿಯಾನ ಬೇಸರ ವ್ಯಕ್ತಪಡಿಸಿದರು.
ಇದರಿಂದಾಗಿ ಇಂದು ಸಮುದಾಯದ ಮುಖಂಡರು ಒಂದಾಗಿ ಚರ್ಚಿಸಿ ಅಂತಿಮವಾಗಿ ನಿರ್ಧಾರ ಕೈಗೊಳ್ಳುತ್ತಾರೆ ಅದಕ್ಕೆ ತಾವು ಬದ್ಧವಾಗಿರುತ್ತೇನೆ. ಒಂದೊಮ್ಮೆ ಬೆಂಗಳೂರು ಉತ್ತರದಿಂದ ಟಿಕೆಟ್ ಸಿಕ್ಕರೆ ಒಳ್ಳೆಯದು ಇಲ್ಲವಾದರೆ ಬೆಂಗಳೂರು ಕೇಂದ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುವಂತೆ ಸಮುದಾಯದವರಿಂದ ಒತ್ತಡವಿದೆ. ಅದರಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
