ಹುಬ್ಬಳ್ಳಿ
ಪಕ್ಷದ ನಾಯಕರ ವರ್ತನೆಯಿಂದ ಜೆಡಿಎಸ್ ನ ಮೇಲ್ಮನೆ ಸದಸ್ಯರಿಗೆ ಬೇಸರವಾಗಿದ್ದು ನಿಜ. ಆದರೆ ಈಗ ನಮ್ಮ ಅಸಮಾಧಾನ ಬಗೆಹರಿದಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿನ 11 ಜನ ಮೇಲ್ಮನೆ ಸದಸ್ಯರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಅಸಮಾಧಾನವಿತ್ತು. ನಮ್ಮ ಅಸಮಾಧಾನ ಬಹುತೇಕ ಶಮನವಾಗಿದೆ. ನಮ್ಮ ಬೇಡಿಕೆಗಳು ದೇವೇಗೌಡರಿಗೂ ಮನವರಿಕೆಯಾಗಿದೆ. ಹೀಗಾಗಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮೊನ್ನೆಯಷ್ಟೇ ಈ ಕುರಿತು ನಾವೆಲ್ಲ ಒಂದಾಗಿ ಸಭೆ ನಡೆಸಿದ ವಿಷಯವನ್ನು ದೇವೇಗೌಡರಿಗೆ ತಿಳಿಸಿದ್ದೇವೆ. ಈಗ ನಮ್ಮದು ಯಾವುದೇ ಬೇಡಿಕೆ ಇಲ್ಲ. ನಮ್ಮ ಸರ್ಕಾರ ಈಗ ಅಧಿಕಾರದಲ್ಲಿಲ್ಲ. ಹೀಗಾಗಿ ನಮಗೆ ಸಚಿವ ಸ್ಥಾನ ನೀಡಿ ಇಲ್ಲವೇ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ ಎಂದು ಕೇಳಲು ಸಾಧ್ಯವಿಲ್ಲ. ಸದ್ಯ ದೇವೇಗೌಡರು ನಮ್ಮ ಬಗ್ಗೆ ಕಾಳಜಿ ವಹಿಸಿದ್ದಾರೆ. ಒಂದು ವೇಳೆ ನಮ್ಮನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮತ್ತೆ ಸಭೆ ನಡೆಸಿ ಒಗ್ಗಟ್ಟಾಗಿ ಇರುತ್ತೇವೆ ಎಂದರು.
ನಾವೂ 11 ಜನರು ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಪ್ರವಾಹವಿರುವಾಗ ವಿದೇಶ ಪ್ರವಾಸ ಒಳ್ಳೆಯದಲ್ಲ. ಹೀಗಾಗಿ ನಾವೆಲ್ಲರೂ ಸೇರಿ ಪ್ರವಾಹ ಪೀಡಿತ ಪ್ರದೇಶಗಳ ಸಮಸ್ಯೆಗಳ ಕುರಿತು ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.ಸದ್ಯದ ಮಟ್ಟಿಗೆ ನಮ್ಮಲ್ಲಿ ಅಸಮಾಧಾನ ಶಮನವಾಗಿದ್ದು, ದೇವೇಗೌಡರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳಲಿದ್ದಾರೆಂಬ ನಂಬಿಕೆ ನಮಗೆ ಇದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ