ಬೆಂಗಳೂರು
ಎರಡು ಎಕರೆ ಜಮೀನಿನ ಆಸೆಗಾಗಿ ನಾದಿನಿಯನ್ನು ಭಾವನೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕಿರುವ ದಾರುಣ ಘಟನೆ ನಗರದ ಹೊರವಲಯದ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆಮೃತ ದುರ್ದೈವಿಯನ್ನು ಬಿಡದಿಯ ಅಂಬುಜಮ್ಮ (52)ಎಂದು ಗುರುತಿಸಲಾಗಿದೆ ಕೃತ್ಯವೆಸಗಿ ಪರಾರಿಯಾಗಿರುವ ಭಾವ ರಾಮಯ್ಯನ ಸುಳಿವು ಪತ್ತೆ ಹಚ್ಚಿರುವ ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ.ರಾಮಯ್ಯನ ಪತ್ನಿ ಶಿವಮ್ಮ ಮತ್ತು ಆತನ ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಯಾದ ಅಂಬುಜಮ್ಮ ಪತಿ ನಾಗಣ್ಣ ಇಪ್ಪತ್ತು ವರ್ಷಗಳ ಹಿಂದೆ ನಿಧನರಾದ ಬಳಿಕ ಕುಟುಂಬದವರ ಹೆಸರಿನಲ್ಲಿ ಇದ್ದ 20 ಎಕರೆ ಜಮೀನಿನಲ್ಲಿ 2 ಎಕರೆ ಅಂಬುಜಮ್ಮ ಹೆಸರಿಗೆ ಬಂದಿತ್ತು.ಈ ಜಮೀನು ತಮಗೆ ನೀಡುವಂತೆ ಪತಿಯ ಅಣ್ಣ ರಾಮಯ್ಯ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ರಾಮಯ್ಯನ ಹಿಂಸೆಯಿಂದ ನೊಂದ ಅಂಬುಜಮ್ಮ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.ಎರಡು ಕಡೆಯವರನ್ನು ಠಾಣೆಗೆ ಕರೆಸಿದ ಪೊಲೀಸರು ಇಬ್ಬರ ನಡುವೆ ರಾಜಿ ನಡೆಸಿ ಪ್ರಕರಣ ಇತ್ಯರ್ಥಗೊಳಿಸಿದ್ದರು.
ರಾಮಯ್ಯ ಮಾತ್ರ ಮತ್ತೆ ತನ್ನ ಖ್ಯಾತೆ ಮುಂದುವರಿಸಿ ಜಮೀನಿನ ಬಗ್ಗೆ ಮಾತನಾಡಲು ಮನೆಗೆ ಕರೆದಿದ್ದ. ಈ ವೇಳೆ ಪೊಲೀಸರೊಂದಿಗೆ ತೆರಳಿದ್ದ ಅಂಬುಜಮ್ಮ ಮಾತನಾಡಿದ್ದರು. ಆದರೆ ಮಾತುಕತೆ ಬಳಿಕ ಪೊಲೀಸರು ಸ್ಥಳದಿಂದ ತೆರಳಿದ್ದು, ಮೊದಲೇ ಯೋಜಿಸಿದಂತೆ ರಾಮಯ್ಯ ಮನೆಯಿಂದ ಅಂಬುಜಮ್ಮರನ್ನು ಹೊರಗೆ ಕರೆದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ಬೆಂಕಿ ತೀವ್ರತೆಯಿಂದ ಸುಟ್ಟು ಹೋಗಿದ್ದ ಅಂಬುಜಮ್ಮರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ನಿನ್ನೆ ಮುಂಜಾನೆ ಅಂಬುಜಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸಾವಿಗೂ ಮುನ್ನ ತನ್ನ ಕೊಲೆಗೆ ಯತ್ನಿಸಿದವರ ವಿರುದ್ಧ ಹೇಳಿಕೆ ನೀಡಿರುವ ಅಂಬುಜಮ್ಮ, ನನ್ನ ಕೊಲೆಗೆ ರಾಮಯ್ಯ, ಶಿವಮ್ಮ, ಬಾಬು, ಮಂಜ, ಸಿದ್ದೇಗೌಡ ಅವರೇ ಕಾರಣ. ಪೊಲೀಸರು ಬಂದಿದ್ದಾರೆ ಎಂದು ಕರೆದರು. ಆಗ ಪೊಲೀಸರು ಬಂದಿದ್ದರೆ ಎಂದು ಕರೆದಿದ್ದಕ್ಕೆ ಮನೆಯಿಂದ ಬಂದೆ, ಕೂಡಲೇ ನನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








