ಸ್ವಗ್ರಾಮಗಳತ್ತ ನಡೆದ ಕಳಸಾ ಬಂಡೂರಿ ಹೋರಾಟಗಾರರು..!

ಬೆಂಗಳೂರು

    ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಂತರ ನಗರದ ರೈಲ್ವೆ ನಿಲ್ದಾಣದಲ್ಲಿ ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಹೋರಾಟವನ್ನು ರೈತರು ಶನಿವಾರ ಅಂತ್ಯಗೊಳಿಸಿ ಸ್ವಗ್ರಾಮಗಳತ್ತ ತೆರಳಿದ್ದಾರೆ.

     ರೈತರ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದು ಮೂವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೆ ಎಚ್ಚೆತ್ತುಕೊಂಡ ನಗರ ಪೊಲೀಸ್ ಆಯುಕ್ತರು ಕೆಳಹಂತದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಐವರು ಮಹಿಳಾ ರೈತ ಮುಖಂಡರನ್ನು, ರಾಜಭವನಕ್ಕೆ ಕರೆದೊಯ್ಯಲಾಯಿತು ರಾಜ್ಯಪಾಲರ ಕಚೇರಿಯಲ್ಲಿ ಅಧಿಸೂಚನೆ ಹೊರಡಿಸುವಂತೆ, ಮಹಿಳಾ ರೈತ ಮುಖಂಡರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ನಂತರ, ರೈತರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

     ಇದಕ್ಕೂ ಮುನ್ನ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ನೀಡಲು ರೈತ ಹೋರಾಟಗಾರರು ನಿರಾಕರಿಸಿ ರಾಜ್ಯಪಾಲರ ಭೇಟಿಗೆ ಪಟ್ಟು ಹಿಡಿದರು ಕಳೆದೆರೆಡು ದಿನಗಳಿಂದ ಬಿಸುಲು – ಮಳೆ ಎನ್ನದೆ ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಲೇಬೇಕು ಎಂದು ಆಗ್ರಹಿಸಿರುವ ಹುಬ್ಬಳ್ಳಿ-ಧಾರವಾಡ ಭಾಗದ ರೈತರು ಹಾಗೂ ರೈತ ಸಂಘಟನೆಗಳನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮನವಿಯನ್ನು ನನಗೇ ನೀಡಿ, ನಾನು ಮನವಿಯನ್ನು ರಾಜ್ಯಪಾಲರಿಗೆ ತಲುಪಿಸುವುದಾಗಿ ಮನವಿ ಮಾಡಿದರು.

     ಮನವಿಯನ್ನು ತಿರಸ್ಕರಿಸಿದ ರೈತ ಹೋರಾಟಗಾರರು ಸ್ಥಳಕ್ಕೆ ರಾಜ್ಯಪಾಲರೇ ಬಂದು ಮನವಿ ಸ್ವೀಕರಿಸಬೇಕೆಂದು ಪಟ್ಟು ಹಿಡಿದರು. ಇದರಿಂದ ನಿರಾಶರಾದ ಉಪ ಮುಖ್ಯಮಂತ್ರಿ ಕಾರಜೋಳ ಅವರು, ರಾಜ್ಯಪಾಲರು ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ. ತಕ್ಷಣ ರಾಜ್ಯಪಾಲರನ್ನು ಭೇಟಿಯಾಗಿ ಮಹದಾಯಿ ಹೋರಾಟಗಾರರಿಂದ ಮನವಿ ಸ್ವೀಕರಿಸುವಂತೆ ಮನವಿ ಮಾಡಲಿದ್ದೇನೆ. ಅವರು ಏನು ಹೇಳುತ್ತಾರೋ ಅದನ್ನು ಹೋರಾಟಗಾರರಿಗೆ ತಿಳಿಸಲಿದ್ದೇನೆ ಎಂದರು.

     ರಾಜ್ಯಪಾಲರ ನಡೆಯನ್ನು ತೀವ್ರವಾಗಿ ವಿರೋಧಿಸಿದ ಮಹದಾಯಿ ಹೋರಾಟಗಾರರು ರಾಜ್ಯಪಾಲರು ಸ್ಥಳಕ್ಕೆ ಬರುವವರೆಗೂ ಹೋರಾಟ ನಿರಂತರವಾಗೇ ಮುಂದುವರೆಯಲಿದೆ ಹಾಗೂ ರಾಜ್ಯಪಾಲರೇ ಮನವಿಯನ್ನು ಸ್ವೀಕರಿಸಬೇಕೆಂದು ಪಟ್ಟು ಹಿಡಿದ ಘಟನೆ ನಡೆಯಿತು. ನಂತರ ಕೆಲ ರೈತ ಮುಖಂಡರು, ರಾಜ್ಯಪಾಲರ ಭೇಟಿಗೆ ಅವಕಾಶ ಮಾಡಿಕೊಡಿ. ಇಲ್ಲವೇ ಲಿಖಿತವಾಗಿ ನಮಗೆ ಉತ್ತರ ನೀಡಿ ಎಂದು ಆಯುಕ್ತರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಮುಂದೆ ಉಪವಾಸ ಸತ್ಯಾಗ್ರಹವನ್ನು ನಡೆಸುವ ಎಚ್ಚರಿಕೆಯನ್ನು ರವಾನಿಸಿದಾಗ ರಾಜ್ಯಪಾಲರ ಭೇಟಿಗೆ ರೈತರ ನಿಯೋಗಕ್ಕೆ ಅವಕಾಶ ಕಲ್ಪಿಸಲಾಯಿತು.

     ಮನವಿ ಸಲ್ಲಿಸಿದ ನಂತರ ಮಾತನಾಡಿದ ರೈತ ಮುಖಂಡರುಗಳು ಮಹದಾಯಿ ಕಳಸ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ಆರಂಭಿಸುತ್ತೇವೆ. ಯಾರು ಬರಬೇಕಾದ ಅವಶ್ಯಕತೆಯಿಲ್ಲ. ಗೆಜೆಟ್ ಅಧಿಸೂಚನೆ ಹೊರಡಿಸುವ ಕುರಿತಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಲಿದ್ದೇವೆ. ನಮಗೆ ನೀರಿನ ಅವಶ್ಯಕತೆ ತುಂಬಾ ಇದೆ. ಈ ನಿಟ್ಟಿನಲ್ಲಿ ಈ ವಿಷಯ ತ್ವರಿತವಾಗಿ ನಡೆಯಬೇಕಿದೆ. ೨೦೧೮ರ ಆಗಸ್ಟ್‌ನಲ್ಲಿ ಮಹದಾಯಿ ನ್ಯಾಯಾಧೀಕರಣ ನೀರು ಹಂಚಿಕೆ ಕುರಿತಂತೆ ತೀರ್ಪು ನೀಡಿದೆ.

      ಮಹದಾಯಿಯಲ್ಲಿ ಒಟ್ಟು ೧೮೦ ಟಿಎಂಸಿ ನೀರು ಲಭ್ಯತೆ ಆಧರಿಸಿ ಗೋವಾಕ್ಕೆ ೩೦ ಟಿಎಂಸಿ, ಮಹಾರಾಷ್ಟ್ರಕ್ಕೆ ೧.೩೩ ಟಿಎಂಸಿ, ಕರ್ನಾಟಕಕ್ಕೆ ೧೩.೫ ಟಿಎಂಸಿ ಅದರಲ್ಲಿ ೮ ಟಿಎಂಸಿ ನೀರು ವಿದ್ಯುತ್ ಉತ್ಪಾದನೆಗೆ ಉಳಿದ ೫.೫ ಟಿಎಂಸಿ ಕುಡಿಯುವ ನೀರಿನ ವ್ಯವಸ್ಥೆಗೆ ಹಂಚಿಕೆ ಮಾಡಲಾಗಿದೆ. ಈ ತೀರ್ಪು ಬಂದು ೧೪ ತಿಂಗಳು ಕಳೆದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಈಗಾಗಲೇ ಕೇಂದ್ರಕ್ಕೆ ರಾಜ್ಯದಿಂದ ೩ ಬಾರಿ ಮನವಿ ಮಾಡಿದರು. ಸೂಕ್ತ ಸ್ಪಂದನೆ ದೊರೆತಿಲ್ಲ. ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೆ ಅದು ನೇರಕೇಂದ್ರ ಸರ್ಕಾರಕ್ಕೆ ತಲುಪಲಿದೆ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಮಹಿಳೆಯರ ಕಣ್ಣಿರು.

       ರಾಜ್ಯಪಾಲರೇ ಸ್ವತಃ ಮನವಿ ಸ್ವೀಕರಿಸಲು ಬಾರದ ಹಿನ್ನೆಲೆ ಬೇಸತ್ತ ರೈತ ಮುಖಂಡರು ರಾಜಭವನದ ಮುಂದೆ ಕಣ್ಣೀರು ಹಾಕಿದರು. ರಾಜಭವನದ ಒಳಗೂ ಬಿಡದೆ ಗೇಟ್ ಬಳಿಯೇ ವಿಶೇಷ ಕರ್ತವ್ಯಾಧಿಕಾರಿ ಮಹಿಳೆಯರಿಂದ ಮನವಿ ಸ್ವೀಕರಿಸಿದರು. ಇದರಿಂದ ತೀವ್ರ ಬೇಸತ್ತ ರೈತ ಮಹಿಳಾ ಮುಖಂಡರು ರಾಜಭವನದ ಮುಂದೆ ಕಣ್ಣೀರು ಹಾಕಿದರು. ಇದು ರೈತರಿಗೆ ಮಾಡಿರುವ ಅವಮಾನ ಎಂದು ತಿಳಿಸಿದ ನಂತರ ಮತ್ತೆ ಪ್ರತಿಭಟನಾ ನಿರತ ರೈಲ್ವೆ ನಿಲ್ದಾಣಕ್ಕೆ ವಾಪಸ್ಸಾದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link